ADVERTISEMENT

ಅಕ್ಕಿಆಲೂರು: ಖೊಟ್ಟಿ ದಾಖಲೆ ಸೃಷ್ಟಿ; ಗ್ರಾ.ಪಂ. ಅಧ್ಯಕ್ಷ, PDO ವಿರುದ್ಧ ದೂರು

ಖೊಟ್ಟಿ ದಾಖಲೆ ಸೃಷ್ಟಿಸಿದ ಆರೋಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 5:56 IST
Last Updated 24 ಸೆಪ್ಟೆಂಬರ್ 2025, 5:56 IST

ಹಾವೇರಿ: ‘ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಗ್ರಾಮದ ಜಾಗವೊಂದನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ’ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಿಡಿಒ ಸೇರಿದಂತೆ 40 ಮಂದಿ ವಿರುದ್ಧ ಕಾನ್‌ಸ್ಟೆಬಲ್‌ ಕರಬಸಪ್ಪ ಮನೋಹರ ಗೊಂದಿ ಅವರು ಜಿಲ್ಲಾ ಪಂಚಾಯಿತಿ ಸಿಇಒಗೆ ದೂರು ನೀಡಿದ್ದಾರೆ.

ಜಾಗದ ವಿಚಾರದ ಬಗ್ಗೆ ದಾಖಲಾಗಿದ್ದ ಮೊಕದ್ದಮೆ ಬಗ್ಗೆ ಹೈಕೋರ್ಟ್‌ ಇತ್ತೀಚೆಗಷ್ಟೇ ಆದೇಶ ಹೊರಡಿಸಿದೆ. ಖೊಟ್ಟಿ ದಾಖಲೆ ಸೃಷ್ಟಿಗೆ ಸಂಬಂಧಪಟ್ಟ ಪುರಾವೆಗಳು ಹಾಗೂ ಹೈಕೋರ್ಟ್ ಆದೇಶ ಪ್ರತಿ ಸಮೇತ ದೂರು ಸಲ್ಲಿಕೆಯಾಗಿದೆ.

‘ಅಕ್ಕಿಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜಾಗವನ್ನು ಹಾನಗಲ್ ತಹಶೀಲ್ದಾರ್ ಅವರು ಮಲ್ಲಿಕಾರ್ಜುನಪ್ಪ ಬಸಪ್ಪ ಗೊಂದಿ ಅವರಿಗೆ ಮಂಜೂರು ಮಾಡಿದ್ದರು. ಇದೇ ಜಾಗವನ್ನು 2016ರಲ್ಲಿ ಮೂಲ ಮಾಲೀಕರಿಗೆ ಯಾವುದೇ ನೋಟಿಸ್ ನೀಡದೇ ಠರಾವು ಮಾಡಿ ಬೇರೆಯವರಿಗೆ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ. ಜೊತೆಗೆ, ಇದೇ ಜಾಗದ ಹೆಸರಿನಲ್ಲಿ ಬ್ಯಾಂಕ್‌ನಿಂದಲೂ ₹ 5 ಲಕ್ಷ ಸಾಲ ಪಡೆದುಕೊಂಡಿದ್ದಾರೆ’ ಎಂದು ಆಡೂರು ಠಾಣೆಯ ಕಾನ್‌ಸ್ಟೆಬಲ್ ಕರಬಸಪ್ಪ ಅವರು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ತೊಗರ್ಸಿ ಮಲ್ಲಿಕಾರ್ಜುನ ಮಠದಲ್ಲಿ ಕೆಲಸ ಮಾಡುತ್ತಿದ್ದ ಮೂಲ ಮಾಲೀಕ ಮಲ್ಲಿಕಾರ್ಜುನಪ್ಪ ಅವರು ತೆರಿಗೆ ಕಟ್ಟಲೆಂದು 2020ರಲ್ಲಿ ಪಂಚಾಯಿತಿಗೆ ಹೋಗಿದ್ದರು. ಜಾಗ ವರ್ಗಾವಣೆ ಆಗಿರುವುದು ಗೊತ್ತಾಗಿತ್ತು. ಅದನ್ನು ಪ್ರಶ್ನಿಸಿದ್ದಕ್ಕೆ, ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಪಂಚಾಯಿತಿಯವರು ಹೇಳಿದ್ದರು. ಮಲ್ಲಿಕಾರ್ಜುನಪ್ಪ ಅವರು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಡಿ ಸವಣೂರು ಉಪವಿಭಾಗಾಧಿಕಾರಿಗೆ ದೂರು ನೀಡಿದ್ದರು. ಅದರ ವಿಚಾರಣೆಗೆ ಪ್ರತಿವಾದಿಗಳು ಹಾಜರು ಆಗಿರಲಿಲ್ಲ. ಹೀಗಾಗಿ, ಪಂಚಾಯಿತಿ ಠರಾವು ರದ್ದುಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಪ್ರತಿವಾದಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಉಪವಿಭಾಗಾಧಿಕಾರಿ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದು, ಅರ್ಜಿ ವಜಾಗೊಳಿಸಿದೆ. ಇದರ ನಡುವೆಯೇ ಮನನೊಂದಿದ್ದ ಮಲ್ಲಿಕಾರ್ಜುನಪ್ಪ ಅವರು 2022 ಜೂನ್ 25ರಂದು ನಿಧನರಾಗಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಗ್ರಾಮ ಪಂಚಾಯಿತಿಯವರಿಗೆ ನೇರವಾಗಿ ಮಾಲಿಕತ್ವ ಬದಲಾವಣೆ ಹಾಗೂ ಹಕ್ಕು ವರ್ಗಾವಣೆ ಮಾಡಲು ಕಾಯ್ದೆಯಲ್ಲಿ ಅವಕಾಶವಿಲ್ಲ. ಆದರೂ ಅಧಿಕಾರ ದುರುಪಯೋಗಪಡಿಸಿಕೊಂಡು ಖೊಟ್ಟಿ ದಾಖಲೆ ಸೃಷ್ಟಿಸಿ ಆಸ್ತಿಯನ್ನು ವರ್ಗಾವಣೆಯ ಠರಾವು ಮಾಡಿದ್ದಾರೆ. ವರ್ಗಾವಣೆ ಮಾಡಿಸಿಕೊಂಡವರು, ಅಧ್ಯಕ್ಷ, ಪಿಡಿಒ, ಸದಸ್ಯರು ಹಾಗೂ ಇತರೆ ಜನಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಈ ಅಕ್ರಮ ನಡೆಸಿರುವ ಎಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಡಳಿತದ ಅಧಿಕಾರಿಯೊಬ್ಬರು, ‘ದೂರು ಪರಿಶೀಲನೆ ಮಾಡಬೇಕಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.