ADVERTISEMENT

ರಾಣೆಬೆನ್ನೂರು| ಅಂಬೇಡ್ಕರ್ ಹೆಸರನ್ನೂ ಅಳಿಸುವ ಯತ್ನ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 8:04 IST
Last Updated 4 ಜನವರಿ 2026, 8:04 IST
   

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ‘ನರೇಗಾ ಯೋಜನೆಗಿದ್ದ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದು ಹಾಕಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರವಿಲ್ಲವೆಂದು ವಾದಿಸುತ್ತಾರೆ. ಇತಿಹಾಸ ತಿರುಚುವ ಕೆಲಸ ನಡೆದಿದೆ. ನಾವು ಗಟ್ಟಿಯಾಗಿ ನಿಲ್ಲದಿದ್ದರೆ, ಅಂಬೇಡ್ಕರ್‌ ಅವರ ಹೆಸರನ್ನು ಅಳಿಸಲು ಯತ್ನಿಸುತ್ತಾರೆ’ ಎಂದು ಸಚಿವ ಸತೀಶ ಜಾರಕಿಹೊಳಿ ಆತಂಕ ವ್ಯಕ್ತಪಡಿಸಿದರು.

ಇಲ್ಲಿಯ ಚಿದಂಬರನಗರದಲ್ಲಿರುವ ‘ಡಾ. ಬಿ.ಆರ್‌. ಅಂಬೇಡ್ಕರ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯ’ದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಬೇಡ್ಕರ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಅಸ್ಪೃಶ್ಯತೆಗಳನ್ನು ದೂರಗೊಳಿಸಿ ಸಮಾನತೆ ಸಂದೇಶ ಸಾರಿದವರು ಅಂಬೇಡ್ಕರ. ಸಂವಿಧಾನ ಕೇವಲ ಪರಿಶಿಷ್ಟರಿಗೆ ಸೀಮಿತ ಎಂದು ಭಾವಿಸಿದ್ದಾರೆ. ಇದು ಸರಿಯಲ್ಲ. ಸಂವಿಧಾನದ ಪರಿಕಲ್ಪನೆಯಲ್ಲಿ ಎಲ್ಲರೂ ಸರಿ ಸಮಾನರು. ಭೂಮಿ ಇರುವವರೆಗೆ ಅಂಬೇಡ್ಕರ್‌ ಅವರ ಸಂವಿಧಾನ ಕಾಪಾಡುವ ಪ್ರಯತ್ನ ಮಾಡಬೇಕು’ ಎಂದು ಹೇಳಿದರು.

ADVERTISEMENT

ನ್ಯಾಯಾಲಯದಲ್ಲೂ ಅಂಬೇಡ್ಕರ್‌ ಚಿತ್ರ: ‘ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಸತಿ ನಿಲಯ ಮತ್ತು ಶಾಲೆಗಳನ್ನು ತೆರೆಯಲು ಸರ್ಕಾರ ಪ್ರಯತ್ನಿಸುತ್ತದೆ. ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ತೀರ್ಮಾನ ತಿಳಿಸಲಾಗುವುದು. ನ್ಯಾಯಾಲಯಗಳಲ್ಲಿ ಅಂಬೇಡ್ಕರ್‌ ಭಾವಚಿತ್ರ ಹಾಕುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.