ADVERTISEMENT

ರಾಣೆಬೆನ್ನೂರು: ಅಂಬಿಗರ ಚೌಡಯ್ಯ ಐಕ್ಯಮಂಟಪಕ್ಕೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 2:51 IST
Last Updated 16 ಜನವರಿ 2026, 2:51 IST
ರಾಣೆಬೆನ್ನೂರು ತಾಲ್ಲೂಕು ಚೌಡಯ್ಯದಾನಪುರದ ತುಂಗಭದ್ರಾ ನದಿ ತೀರದ ಅಂಬಿಗರ ಚೌಡಯ್ಯನವರ ಐಕ್ಯಮಂಟಪಕ್ಕೆ ವಿವಿಧ ಮಠಾಧೀಶರು ಹಾಗೂ ಭಕ್ತರು ಕುಂಭಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿದರು.
ರಾಣೆಬೆನ್ನೂರು ತಾಲ್ಲೂಕು ಚೌಡಯ್ಯದಾನಪುರದ ತುಂಗಭದ್ರಾ ನದಿ ತೀರದ ಅಂಬಿಗರ ಚೌಡಯ್ಯನವರ ಐಕ್ಯಮಂಟಪಕ್ಕೆ ವಿವಿಧ ಮಠಾಧೀಶರು ಹಾಗೂ ಭಕ್ತರು ಕುಂಭಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಿದರು.   

ರಾಣೆಬೆನ್ನೂರು: ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಗುರುವಾರ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಲಿಂ ಪಂ‌.ವೇದತೀರ್ಥ ವಿರುಪಾಕ್ಷ ಒಡೆಯರವರ ಸ್ಮರಣೋತ್ಸವ ಹಾಗೂ ಅಂಬಿಗರ ಚೌಡಯ್ಯ ಜಯಂತ್ಯುತ್ಸವವು ಗ್ರಾಮದ ಒಡೆಯರ ಚಿತ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಅರ್ಥ ಪೂರ್ಣವಾಗಿ ನೆರವೇರಿತು.

ಶರಣ ಅಂಬಿಗರ ಚೌಡಯ್ಯನವರ ಹಾಗೂ ವಿರುಪಾಕ್ಷ ಒಡೆಯರವರ ಭಾವಚಿತ್ರದ ಮೆರವಣಿಗೆ ಮತ್ತು ಕುಂಭ ಮೇಳವು ಸಕಲ ವಾಧ್ಯಗಳೊಂದಿಗೆ ಗ್ರಾಮದ ಒಡೆಯರ ಮಠದಿಂದ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತುಂಗಭದ್ರ ನದಿ ತೀರಕ್ಕೆ ತಲುಪಿತು.

ಅಲ್ಲಿ ಚೌಡಯ್ಯನವರ ಐಕ್ಯಮಂಟಪಕ್ಕೆ ಕುಂಬಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಮೆರವಣಿಗೆಯಲ್ಲಿ ಬಸವೇಶ್ವರ ಭಜನಾ ಸಂಘದವರು, ಜಾಂಜ್ ಮೇಳ, ನಂದಿಕೋಲು ಕುಣಿತ, ಸಮ್ಮಾಳ ಸೇರಿದಂತೆ ಸಕಲ ವಾದ್ಯ ವೃಂದ ಮೇಳದವರು ಭಾಗವಹಿಸಿದ್ದರು.

ADVERTISEMENT

ಕಲಬುರಗಿ ಜಿಲ್ಲೆಯ ತೋಟನಹಳ್ಳಿಯ ಮಹಾಂತೇಶ್ವರ ಹಿರೇಮಠದ ತ್ರಿಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತೆಂಗಳಿಯ ಶಾಂತೇಶ್ವರ ಹಿರೇಮಠದ ಶಾಂತ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚೌಡಯ್ಯದಾನಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

ಪುಣ್ಯಸ್ನಾನ: ಮಕರ ಸಂಕ್ರಾಂತಿ ಅಂಗವಾಗಿ ಸಾವಿರಾರು ಜನತೆ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರು. ನಂತರ ವೀರಭದ್ರದೇವರು, ಮುಕ್ತೇಶ್ವರ ದೇವರು ಹಾಗೂ ಹೊನ್ನಮ್ಮದೇವಿಗೆ ಹಣ್ಣು ಕಾಯಿ ನೈವೈದ್ಯ ಅರ್ಪಿಸಿದರು. ನಂತರ ಕುಟುಂಬದವರೆಲ್ಲ ಸೇರಿ ಮಾವಿನ ತೋಪಿನಲ್ಲಿ ವಿಶೇಷ ಭೋಜನ ಮಾಡಿದರು. ಜನತೆ ಸಂಕ್ರಮಣಕ್ಕೆ ಟ್ರ್ಯಾಕ್ಟರ್‌, ಎತ್ತಿನಗಾಡಿ, ಟಂಟಂಗಾಡಿ, ಆಟೋ, ಬೈಕ್‌ ಮೂಲಕ ತಂಡೋಪತಂಡವಾಗಿ ಸಾಗಿದ್ದು ಎಲ್ಲೆಡೆ ಕಂಡು ಬಂದಿತು.

ಹರಿಹರ ತಾಲ್ಲೂಕಿನ ಉಕ್ಕಡಗಾತ್ರಿ ಕರಿಬಸವೇಶ್ವರ ದೇವಸ್ಥಾನ, ತಾಲ್ಲೂಕಿನ ತುಂಗ್ರಭದ್ರಾ ನದಿ ತೀರದ ಗ್ರಾಮಗಳಾದ ಕೋಟಿಹಾಳ, ಹೊಳೆಆನ್ವೇರಿ ಸಂಗಮೇಶ್ವರ ದೇವಸ್ಥಾನ, ಹಿರೇಬಿದರಿ, ಮುದೇನೂರು ಲಿಂ.ವಾಗೀಶ ಪಂಡಿತಾರಾಧ್ಯ ಸ್ವಾಮೀಜಿ, ಉಜ್ಜಯಿನಿ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಜನ್ಮಸ್ಥಳ ಮತ್ತು ಕುಮಧ್ವತಿ ಮತ್ತು ತುಂಗಭದ್ರ ನದಿ ಸಂಗಮ, ಕುಮಾರಪಟ್ಟಣ ಅಯ್ಯಪ್ಪ ಸ್ವಾಮಿ ದೇವಸ್ಥಾನ, ಐರಣಿ ಹೊಳೆಮಠ, ಖಂಡೇರಾಯನಹಳ್ಳಿ ಸಿದ್ದಾರೂಢಮಠ, ಬೇಲೂರು ಕರಿಯಮ್ಮದೇವಿ ದೇವಸ್ಥಾನ, ಹರನಗಿರಿ, ಚಿಕ್ಕಕುರುವತ್ತಿ, ಹೀಲದಹಳ್ಳಿ, ಹರನಗಿರಿ ಹೊಳೆಬಸವೇಶ್ವರ ದೇವಸ್ಥಾನ, ಕುದರಿಹಾಳ, ಮೇಡ್ಲೇರಿ ಗ್ರಾಮದ ನದಿ ತೀರದಲ್ಲಿ ಜನತೆ ಪುಣ್ಯ ಸ್ನಾನ ಮಾಡಿ ಸಂಕ್ರಾಂತಿ ಅಂಗವಾಗಿ ಕುಸುರೆಳ್ಳು, ಕಬ್ಬು, ಎಳ್ಳು, ಬೆಲ್ಲ ಪರಸ್ಪರ ಹಂಚಿಕೊಂಡು ಸಂತೋಷ ವಿನಿಮಯ ಮಾಡಿಕೊಂಡರು.

ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.