ಹಾವೇರಿ: ‘ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಅವರ ಮೂರ್ತಿ ಭಗ್ನಗೊಳಿಸಿರುವ ಕಿಡಿಗೇಡಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾಜದ ಜನರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ಸಮಾಜದ ಜನರು, ಘಟನೆ ಖಂಡಿಸಿ ಘೋಷಣೆ ಕೂಗಿದರು.
‘ಬಸವಾದಿ ಶರಣರು ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಅಂಬಿಗರ ಚೌಡಯ್ಯ ಅವರು ಬಸವಾದಿ ಶರಣರಿಂದ ನಿಜಶರಣರೆಂದು ಬಿರುದು ಪಡೆದಿದ್ದಾರೆ. ಇಂಥ ಅಂಬಿಗರ ಚೌಡಯ್ಯ ಅವರ ಮೂರ್ತಿ ಭಗ್ನಗೊಳಿಸಿರುವ ಘಟನೆ ಖಂಡನೀಯ. ಈ ಕೃತ್ಯದಿಂದಾಗಿ ಸಮಾಜದ ಜನರ ಮನಸ್ಸಿಗೆ ನೋವಾಗಿದೆ’ ಎಂದು ಪ್ರತಿಭಟನಕಾರರು ತಿಳಿಸಿದರು.
‘ಮೂರ್ತಿ ಭಗ್ನಗೊಳಿಸಿದವರು ಯಾರು ಎಂಬುದನ್ನು ಜಿಲ್ಲಾಡಳಿತ ಇದುವರೆಗೂ ಪತ್ತೆ ಮಾಡಿಲ್ಲ. ಈ ಕೃತ್ಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು. ಕೃತ್ಯ ಎಸಗಿದ್ದು ಯಾರು? ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಆಗ್ರಹಿಸಿದರು.
ಪ್ರತಿಭಟನೆ ನಂತರ ಅಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಹಾವೇರಿ ಜಿಲ್ಲಾ ಅಂಬಿಗ/ಬೆಸ್ತರ ಸಂಘದ ಅಧ್ಯಕ್ಷ ಪರಶುರಾಮ ಸೊನ್ನದ, ಗೌರವ ಅಧ್ಯಕ್ಷ ಮಂಜುನಾಥ ಭೋವಿ, ಕೋಟ್ರೇಶ ಕುದರಿಹಾಳ, ಶಂಕರ ಸುತಾರ, ಮಲ್ಲಪ್ಪ ನಿಂಬಣ್ಣನವರ, ಹೊನ್ನಪ್ಪ ತಿಮ್ಮೇನಹಳ್ಳಿ, ಕರಬಸಪ್ಪ ಹಳಬೂರ, ಶೇಖಪ್ಪ ಬಾರಕೇರ, ಮಾಲತೇಶ ಚಿಕ್ಕಣ್ಣನವರ, ಕೊಟ್ರೇಶ ಕೋಣತಮ್ಮಗಿ, ರಮೇಶಪ್ಪ ತಿಮ್ಮೇನಹಳ್ಳಿ, ಮಂಜಪ್ಪ ಹುಬ್ಬಳ್ಳಿ, ಕರಬಸಪ್ಪ ನಿಟ್ಟೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.