ತಡಸ (ಕುನ್ನೂರು): ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ನಂ.91ರ ಮುಂಭಾಗದ ರಸ್ತೆ ಅವ್ಯವಸ್ಥೆಯಿಂದ ಕೂಡಿದ್ದು, ವಾತಾವರಣ ಸಂಪೂರ್ಣ ಗಲೀಜಾಗಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುವುದು ಗ್ರಾಮಸ್ಥರ ಆತಂಕವಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಈ ಅಂಗನವಾಡಿಯಲ್ಲಿ 20ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ಅಲ್ಲದೆ ಗ್ರಾಮದ ಗರ್ಭಿಣಿ, ಬಾಣಂತಿಯರು ಆರೋಗ್ಯ ಸಲಹೆ, ಆಹಾರ ಕಿಟ್ ಪಡೆಯಲು ಬರುತ್ತಾರೆ.
ಈ ಅಂಗನವಾಡಿ ಕೇಂದ್ರದ ಪಕ್ಕದಲ್ಲಿಯೇ ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲಿ ಚಿಕನ್, ಮಟನ್, ಮೀನು ಮಾರಾಟ, ಕೋಳಿ ಮಾರಾಟದ ಅಂಗಡಿಗಳು ನಡೆಯುತ್ತವೆ. ಸಂತೆ ಸಮಯ ಮುಗಿದ ನಂತರ ಉಳಿದ ತ್ಯಾಜ್ಯವನ್ನು ಇಲ್ಲಿಯೇ ಸುರಿದು ಹೋಗುವುದರಿಂದ ಸೊಳ್ಳೆ, ಹುಳು ಹುಪ್ಪಟಗಳ ಹಾವಳಿ ಹೆಚ್ಚಾಗಿದೆ.
ಕಸವನ್ನು ಚೆಲ್ಲುತ್ತಿರುವುದರಿಂದ ಕಂಟಿಗಳು ಬೆಳೆದು ಸರೀಸೃಪಗಳು ಓಡಾಡುವಂತೆ ಆಗಿದೆ. ಸಾಂಕ್ರಾಮಿಕ ರೋಗ ಭೀತಿ ಕೂಡಾ ಮಕ್ಕಳನ್ನು ಕಾಡುತ್ತಿದೆ. ಆದರೂ ಸಂಬಂಧಿಸಿದ ಪಂಚಾಯಿತಿಯಾಗಲಿ ಇಲಾಖೆಯಾಗಲಿ ಇತ್ತ ಗಮನ ಹರಿಸದೇ ಇರುವುದು ದುರಂತ.
ಅಂಗನವಾಡಿ ಕೇಂದ್ರದ ಆವರಣ ಒಳಗಡೆ ನಾವು ಸ್ವಚ್ಚತೆ ಕಾಯ್ದುಕೊಂಡಿದ್ದೇವೆ. ರಸ್ತೆ ಪಕ್ಕದಲ್ಲಿರುವ ಕಸ ಸ್ವಚ್ಛಗೊಳಿಸಲು ಪಂಚಾಯತಿ ಮನವಿ ಮಾಡಿದ್ದೇವೆ– ತುಳಸಾ ಡಾಂಗೆ, ಅಂಗನವಾಡಿ ಮೇಲ್ವಿಚಾರಕಿ
ಅಂಗನವಾಡಿ ಸುತ್ತಲೂ ಬೆಳೆದಿರುವ ಗಿಡ ಗಂಟೆ ತೆರುವುಗೊಳಿಸುವ ಕಾರ್ಯ ಮಾಡಿಸುತ್ತೇವೆ. ವಾರದ ಸಂತೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಹೇಳುತ್ತೇವೆ– ಎಸ್.ಎಸ್.ಪಾವೀನ್, ಪಿಡಿಒ
ಪ್ರತ್ಯೇಕ ಚರಂಡಿ ಇಲ್ಲ
ರಸ್ತೆಯ ಅಕ್ಕಪಕ್ಕದಲ್ಲಿ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಇಲ್ಲದ್ದರಿಂದ ಮಳೆ ನೀರಿಗೆ ರಸ್ತೆಯುದ್ಧಕ್ಕೂ ಹರಿದಾಡುತ್ತಿದೆ. ಇದರಿಂದ ಗ್ರಾಮಕ್ಕೆ ಹೊಗುವ ಮುಖ್ಯರಸ್ತೆ ಕೆಸರು ತುಂಬಿಕೊಂಡು ಚರಂಡಿಗಳಾಗಿ ಮಾರ್ಪಟ್ಟಿವೆ. ಮಳೆಗಾಲದಲ್ಲಿ ರಸ್ತೆಯ ತುಂಬೆಲ್ಲಾ ಕೊಳಚೆ ನೀರು ತುಂಬಿಕೊಳ್ಳುವುದರಿಂದ ರಸ್ತೆಯಲ್ಲಿ ಓಡಾಡುವವರ ಪಾಡು ಹೇಳತೀರದಂತಾದಾಗಿ ಪ್ರತಿ ವರ್ಷ ಅಧಿಕಾರಿಗಳು ವೀಕ್ಷಿಸಿ ಹೋಗುತ್ತಾರೆ ಹೊರತು ಇದುವರೆಗೂ ಶಾಶ್ವತ ಪರಿಹಾರ ಆಗಿಲ್ಲ ಎಂದು ಗ್ರಾಮದ ನಿಂಗಪ್ಪ ಈರಣ್ಣ ಭೀಮಪ್ಪ ಯಲ್ಲಪ್ಪ ಮೈಲಾರಪ್ಪ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.