ಬ್ಯಾಡಗಿ: ಗುಜರಾತ ಹೈಕೋರ್ಟ್ ಆದೇಶದನ್ವಯ ಅಂಗನವಾಡಿ ಕಾರ್ಯಕರ್ತೆಯರನ್ನು ಕಾಯಂಗೊಳಿಸುವುದು, ₹26 ಸಾವಿರ ಕನಿಷ್ಠ ವೇತನ, ₹10 ಸಾವಿರ ಮಾಸಿಕ ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಫಿರೋಜಷಾ ಸೋಮನಕಟ್ಟಿ ಹಾಗೂ ಸಿಡಿಪಿಒ ಚಂದ್ರಶೇಖರ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಕಟದ ಪ್ರಧಾನ ಕಾರ್ಯದರ್ಶಿ ಹೇಮಾವತಿ ಎಲಿ ಮಾತನಾಡಿ, ‘ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಿ, ಎಲ್‌ಕೆಜಿ ಸ್ಥಾಪಿಸಬೇಕು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.
ಅಧ್ಯಕ್ಷೆ ಗೌರಮ್ಮ ನಾಯ್ಕರ್ ಮಾತನಾಡಿ, ‘ಅಂಗನವಾಡಿ ಕಾರ್ಯಕರ್ತೆಯರನ್ನು ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಖಾಯಂಗೊಳಿಸಬೇಕು. ಅಲ್ಲಿಯವರೆಗೆ ಕನಿಷ್ಠ ವೇತನ ನೀಡಬೇಕು. ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಿಸಬೇಕು’ ಎಂದರು.
ಉಪಾಧ್ಯಕ್ಷೆ ಹೇಮಾ ಆಸಾದಿ ಮಾತನಾಡಿ, ‘ಅಂಗನವಾಡಿ ಕೇಂದ್ರಗಳಲ್ಲಿ ಎಫ್‌ಆರ್‌ಎಸ್ ಜಾರಿಗೆ ತಂದು ಒತ್ತಡ ಹೇರಲಾಗುತ್ತಿದೆ. ಇದನ್ನು ಕೂಡಲೆ ವಾಪಸ್ ಪಡೆಯುವಂತೆ’ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪರಮೇಶ್ವರಿ ಮಧ್ಯಾಹ್ನದ, ಲೀಲಾವತಿ ಸಾತಣ್ಣನವರ, ಲೀಲಾ ಆಲದಕಟ್ಟಿ, ಸುಧಾ ಅಂಗಡಿ, ರಾಜೇಶ್ವರಿ ಹಿರೇಮಠ, ಕವಿತಾ ನಾಡಿಗೇರ, ಶಕುಂತಲಾ ದಾನಣ್ಣನವರ, ಗೋಜಾ ನಾಯಕ, ಮುತ್ತಕ್ಕ ಪೂಜಾರ, ರತ್ನಾ ಡಂಬಳ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.