
ಹಾವೇರಿ: ನಗರದಲ್ಲಿರುವ ಅಂಜುಮನ್–ಎ–ಇಸ್ಲಾಂ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ಪ್ರಕ್ರಿಯೆ ಶುರುವಾಗಿದ್ದು, ಈಗಾಗಲೇ 78 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಹಾಲಿ ಸದಸ್ಯರ ಅವಧಿ ಮುಕ್ತಾಯಗೊಂಡಿದ್ದರಿಂದ, ನೂತನ ಪದಾಧಿಕಾರಿಗಳ ಆಯ್ಕೆಗೆ ಹಲವು ತಿಂಗಳ ಹಿಂದೆಯೇ ಚಾಲನೆ ನೀಡಲಾಗಿತ್ತು. ಅದರಂತೆ ಸಮಾಜದ 5,057 ಮಂದಿ, ತಲಾ ₹ 250 ಶುಲ್ಕ ನೀಡಿ ಮತದಾರರ ನೋಂದಣಿ ಮಾಡಿಸಿದ್ದಾರೆ.
ಅಂಜುಮನ್–ಎ–ಇಸ್ಲಾಂ ಸಂಸ್ಥೆಯ 33 ಸ್ಥಾನಗಳಿಗೆ ಸದಸ್ಯರ ಆಯ್ಕೆ ನಡೆಯಲಿದೆ. ಫೆ. 15ರಂದು ಮತದಾನ ದಿನಾಂಕ ನಿಗದಿ ಮಾಡಲಾಗಿದೆ. ಮತದಾನ ನಡೆಸಲು 20 ಕೊಠಡಿಗಳ ಕಟ್ಟಡದ ಅಗತ್ಯವಿದೆ. ಅಂಥ ಸ್ಥಳಕ್ಕಾಗಿ ಚುನಾವಣಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದು, ಸದ್ಯದಲ್ಲೇ ಸ್ಥಳವನ್ನು ನಿಗದಿಪಡಿಸಲಿದ್ದಾರೆ.
ಚುನಾವಣೆ ಎದುರಿಸಲು ಎರಡು ತಂಡಗಳ ಮೂಲಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಜೊತೆಗೆ, ಪಕ್ಷೇತರ ಅಭ್ಯರ್ಥಿಗಳು ಸಹ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಜೊತೆಗೆ, ಎಲ್ಲರೂ ಪ್ರಚಾರದಲ್ಲೂ ತೊಡಗಿದ್ದಾರೆ. ಮತದಾರರ ನೋಂದಣಾಧಿಕಾರಿಯಾಗಿ ಖಾಜಾ ಮೈನುದ್ದೀನ್ ಅವರು ಕಾರ್ಯನಿರ್ವಹಿಸಿದ್ದರು. ಈಗ ಚುನಾವಣಾ ಅಧಿಕಾರಿಯಾಗಿ ಅಮೀರ್ ಪಾಷಾ ಅವರು ಪ್ರಕ್ರಿಯೆ ನಡೆಸುತ್ತಿದ್ದಾರೆ.
ಹಾಲಿ ಸದಸ್ಯರಿಗೆ ಸನ್ಮಾನ: ಮೂರು ವರ್ಷದ ಅವಧಿಯ ಆಡಳಿತವನ್ನು ಯಶಸ್ವಿಯಾಗಿ ನಡೆಸಿದ ಹಾಗೂ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಿದ ಅಂಜುಮನ್–ಎ–ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳನ್ನು ಹಾವೇರಿ ಶಹರ ಠಾಣೆ ಪೊಲೀಸರು ಶನಿವಾರ ಸನ್ಮಾನಿಸಿದರು.
ಸದಸ್ಯರನ್ನು ಠಾಣೆಗೆ ಆಹ್ವಾನಿಸಿದ್ದ ಇನ್‌ಸ್ಪೆಕ್ಟರ್ ಮೋತಿಲಾಲ್ ಪವಾರ, ಶಾಲು ಹೂದಿಸಿ ಹೂವಿನ ಹಾರ ಹಾಕಿ ಅಭಿನಂದಿಸಿದರು. ‘ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ಧರ್ಮದವರ ಸಹಕಾರ ಅಗತ್ಯ. ಅಂಜುಮನ್–ಎ–ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳು ಸಹ ತಮ್ಮ ಅವಧಿಯಲ್ಲಿ ಪೊಲೀಸರಿಗೆ ಸಹಕಾರ ನೀಡಿದ್ದಾರೆ. ಈ ಸಹಕಾರವೇ ಮುಂದುವರಿಯಲಿ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಸಿಗದಂತಾಗಲಿ’ ಎಂದು ಪವಾರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.