ADVERTISEMENT

ರಾಣೆಬೆನ್ನೂರು: ಅಂಕಸಾಪುರ ಶಿವಾನಂದ ಮಠದ ಈಶ್ವರಾನಂದ ಸ್ವಾಮೀಜಿ ನಿಧನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 15:57 IST
Last Updated 4 ಮಾರ್ಚ್ 2024, 15:57 IST
ಈಶ್ವರಾನಂದ ಸ್ವಾಮೀಜಿ
ಈಶ್ವರಾನಂದ ಸ್ವಾಮೀಜಿ   

ರಾಣೆಬೆನ್ನೂರು: ತಾಲ್ಲೂಕಿನ ಅಂಕಸಾಪುರ ಗ್ರಾಮದ ಶಿವಾನಂದ ಮಠದ ಸದ್ಗುರು ಈಶ್ವರಾನಂದ ಸ್ವಾಮೀಜಿ (52) ಅನಾರೋಗ್ಯದಿಂದ ಹುಬ್ಬಳ್ಳಿಯ ಸಾಯಿ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ನಿಧನರಾದರು.

ಕಳೆದ ಒಂದು ತಿಂಗಳಿಂದ ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಶ್ರೀಗಳ ನಿಧನದ ಸುದ್ದಿ ಕೇಳುತ್ತಲೇ ಗ್ರಾಮಸ್ಥರು ಹಾಗೂ ಸಾವಿರಾರು ಭಕ್ತರು ಕಂಬನಿ ಮಿಡಿದರು. ಶ್ರೀಗಳ ಮೃತ ದೇಹವನ್ನು ಸೋಮವಾರ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಶಿವಾನಂದ ಮಠಕ್ಕೆ ಕರೆತಂದು ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ತೇರದಾಳ ದಯಾನಂದ ಸ್ವಾಮೀಜಿ ಮತ್ತು ಐರಣಿ ಮನಿಮಠ ಸೇರಿದಂತೆ ನಾಡಿನ ವಿವಿಧ ಮಠಗಳಿಂದ ಆಗಮಿಸಿದ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಮಠದ ಆವರಣದಲ್ಲಿ ಸಂಜೆ ಸಕಲ ವಿಧಿ ವಿಧಾನಗಳಿಂದ ಶ್ರೀಗಳ ಅಂತ್ಯಕ್ರಿಯೆ ನಡೆಯಿತು.

ADVERTISEMENT

ಈಶ್ವರಾನಂದ ಸ್ವಾಮೀಜಿ ಅವರು ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಪಾಳ್ಯಾದವರು. ಕಳೆದ 30 ವರ್ಷಗಳ ಹಿಂದೆ ಅಂಕಸಾಪುರ ಗ್ರಾಮಕ್ಕೆ ಬಂದು ನೆಲೆಸಿದ್ದರು. ಆಂಜನೇಯ ಸ್ವಾಮಿಯ ದೈವಾರಾಧಕರಾಗಿದ್ದರು.

ರಾಣೆಬೆನ್ನೂರು ತಾಲ್ಲೂಕಿನ ಅಂಕಸಾಪುರ ಗ್ರಾಮದ ಶಿವಾನಂದ ಮಠದ ಸದ್ಗುರು ಈಶ್ವರಾನಂದ ಸ್ವಾಮೀಜಿ ನಿಧನರಾಗಿದ್ದಕ್ಕೆ ನಾಡಿನ ಗಣ್ಯರು ಹಾಗೂ ವಿವಿಧ ಮಠಾಧೀಶರು ಶ್ರೀಗಳ ಅಂತಿಮ ದರ್ಶನ ಪಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.