ರಾಣೆಬೆನ್ನೂರು: ತಾಲ್ಲೂಕಿನಲ್ಲಿಯೇ ಅತಿವೇಗವಾಗಿ ಬೆಳೆಯುತ್ತಿರುವ ಹಲಗೇರಿ ಗ್ರಾಮವು ಪಟ್ಟಣದಿಂದ 7 ಕಿ.ಮೀ ಅಂತರದಲ್ಲಿದೆ. ಇಲ್ಲಿನ ಕೃಷಿ ಉತ್ಪನ್ನ ಮಾರಾಟ ಮಾರುಕಟ್ಟೆ ಪ್ರಾಂಗಣ (ಎಪಿಎಂಸಿ ಉಪ ಮಾರುಕಟ್ಟೆ) 6 ಎಕರೆ 28 ಗುಂಟೆ ಜಾಗೆ ಹೊಂದಿದ್ದು, ಯಾವುದೇ ಮೂಲ ಸೌಲಭ್ಯಗಳಿಲ್ಲದೇ ಸಮಸ್ಯೆಗಳ ಆಗರವಾಗಿದೆ.
ರೈತರ ಅನುಕೂಲಕ್ಕಾಗಿ ಸರ್ಕಾರ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಆರಂಭಿಸಿ ಹತ್ತಾರು ದಶಕಗಳು ಗತಿಸಿದರೂ ರಸ್ತೆ, ಚರಂಡಿ, ಶೌಚಾಲಯ ಸೇರಿದಂತೆ ಮೂಲ ಸೌಲಭ್ಯ ಒದಗಿಸಿಲ್ಲ. ಈ ಬಗ್ಗೆ ಅನೇಕ ಬಾರಿ ಎಪಿಎಂಸಿ ಅಧಿಕಾರಿಗಳಿಗೆ ತಿಳಿಸಿದರೂ ಏನೂ ಕ್ರಮಕೈಗೊಂಡಿಲ್ಲ. ವಾಣಿಜ್ಯ ಮಳಿಗೆ ಮುಂದೆ 200 ಮೀ ಸಿಸಿ ರಸ್ತೆ ಬಿಟ್ಟರೇ ಯಾವುದೇ ಸೌಲಭ್ಯಗಳಿಲ್ಲ ಎಂದು ರೈತರ ದೂರಾಗಿದೆ.
ಎಪಿಎಂಸಿ ಆವರಣದ ಸುತ್ತಲೂ ಕಸ ಮತ್ತು ಜಾಲಿ ಮುಳ್ಳಿನ ಪೊದೆ ಬೆಳೆದಿದೆ. ಕುಡಿಯುವ ನೀರಿನ ಟ್ಯಾಂಕ್‌ಗಳು ಉಪಯೋಗಕ್ಕೆ ಬಾರದೇ ತೀರಾ ಹಳೆಯದಾಗಿವೆ. ಬೋರ್‌ವೆಲ್ ಇದ್ದು ನೀರು ಪೂರೈಕೆಯಾಗುತ್ತಿಲ್ಲ. ತುಮ್ಮಿನಟ್ಟಿ- ಹಲಗೇರಿ ಡಿವೈಡರ್ ರಸ್ತೆ ನಿರ್ಮಿಸುವಾಗ ಮುಂದಿನ ಆವರಣ ಗೋಡೆ, ಗೇಟ್ ಹೊಸದಾಗಿ ನಿರ್ಮಿಸಿದ್ದು ಬಿಟ್ಟರೇ ಏನೂ ಅಭಿವೃದ್ಧಿ ಕಂಡಿಲ್ಲ.
ರಸ್ತೆ ನಿರ್ಮಿಸುವಾಗ ಕಡಿದ ಮರ, ದಿಮ್ಮೆಗಳ ಬೇರಿನ ದೊಡ್ಡ ದೊಡ್ಡ ಗಂಟುಗಳು ಆವರಣದಲ್ಲಿ ಬಿದ್ದಿವೆ. ಸುತ್ತಲೂ ಹುಣಸೇ ಮರಗಳಿದ್ದು, ಮಂಗಗಳ ಹಾವಳಿ ಹೇಳತೀರದು. ಕಚೇರಿ ಕಟ್ಟಡದ ಬಾಗಿಲು, ಕಿಟಕಿ ಕಿತ್ತಿವೆ. ಅಲ್ಲಿ ಮುರಿದ ಕುರ್ಚಿಗಳು ಬಿಟ್ಟರೇ ಏನೂ ಇಲ್ಲ. ಆವರಣದಲ್ಲಿ ಯುವಕರು ಕ್ರಿಕೆಟ್ ಹಾಗೂ ವ್ಹಾಲಿಬಾಲ್ ಕೋರ್ಟ್ ಮಾಡಿಕೊಂಡಿದ್ದಾರೆ. ಅವರು ದಿನಾಲು ಆಟಕ್ಕೆ ಬೇಕಾದ ಜಾಗ ಸ್ವಚ್ಚ ಮಾಡಿಕೊಳ್ಳುತ್ತಾರೆ. ಅಲ್ಲಿ ಕೂಡ ಕಿಡಿಗೇಡಿಗಳು ದಿನಾಲು ಗಲೀಜು ಮಾಡುತ್ತಾರೆ ಎಂದು ಕ್ರೀಡಾಭಿಮಾನಿಗಳ ದೂರಿದರು.
ಹಗಲು ಹೊತ್ತಿನಲ್ಲಿಯೇ ಕುಡುಕರ ಹಾವಳಿ ಹೆಚ್ಚಾಗಿದೆ. ರಾತ್ರಿಯಂತೂ ಹೇಳತೀರದು. ಜೂಜಾಟದ ತಾಣವಾಗಿ ಮಾರ್ಪಟ್ಟಿದೆ. ಎಲ್ಲಿ ನೋಡಿದರೂ ಕುಡಿದು ಬಿಸಾಕಿದ ಕಾಲಿ ಬಾಟಲ್‌ಗಳು ಮತ್ತು ಪ್ಲಾಸ್ಟಿಕ್ ಪೌಚ್‌ಗಳು ತುಂಬಿಕೊಂಡಿವೆ. ಉತ್ಪನ್ನಗಳನ್ನು ಒಣಗಿಸುವ ಕಟ್ಟೆಯಲ್ಲಿ ಗುರುವಾರ ಸಂತೆ ದಿನ ಬಿಟ್ಟರೆ ಉಳಿದ ದಿನಗಳಲ್ಲಿ ಬಿಡಾಡಿ ನಾಯಿಗಳು ಮಲಗುತ್ತವೆ.
ಗುರುವಾರ ಬೆಳ್ಳುಳ್ಳಿ ಸಂತೆ ದಿನ ಎಪಿಎಂಸಿ ಒಬ್ಬರು ಇಬ್ಬರು ಸಿಬ್ಬಂದಿ ಬರುತ್ತಾರೆ. ಅವರು ಏನೂ ಮಾಡಬೇಕು. ಸ್ವಯಂ ಪ್ರೇರಿತರಾಗಿ ಸೌಲಭ್ಯ ಕಲ್ಪಿಸುವ ಗೋಜಿಗೆ ಅಧಿಕಾರಿಗಳು ಹೋಗದೇ ಇರುವುದು ರೈತರ ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಮಾರುಕಟ್ಟೆ ದಿನ ಆವರಣದಲ್ಲಿ ತಳ್ಳು ಗಾಡಿ ಅಂಗಡಿಯವರು ತಂಬಾಕು, ಪಾನ್ ಪರಾಗ್, ಗುಟಕಾ ಮಾರಾಟ ಮಾಡುತ್ತಾರೆ. ಹಮಾಲರು ಸ್ಯಾಂಪಲ್‌ಗೆ ಬೆಳ್ಳುಳ್ಳಿ ತೆಗೆದುಕೊಳ್ಳುತ್ತಾರೆ. ಇನ್ನು ಬಿಳಿ ಚೀಟಿ ನಡೆಯುತ್ತಿದೆ. ಈ ಬಗ್ಗೆ ಎಪಿಎಂಸಿ ಅಧಿಕಾರಿಗಳ ಗಮನಕ್ಕೆ ಇದ್ದರೂ ಕೂಡ ಯಾವುದೇ ರೀತಿ ಕ್ರಮಕೈಗೊಳ್ಳಲು ಮುಂದಾಗಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡುವ ಚಟುವಟಿಕೆಗಳನ್ನು ಕೈಗೊಳ್ಳಲು ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ನಿರ್ಮಿಸಿದೆ. ಮಾರುಕಟ್ಟೆಗೆ ಆಗಮಿಸುವ ರೈತರು ಹಾಗೂ ವರ್ತಕರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅಗತ್ಯವಿರುವ ಎಲ್ಲ ರೀತಿಯ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುವುದು ರೈತರು ಮತ್ತು ವ್ಯಾಪಾರಸ್ಥರ ಒತ್ತಾಸೆಯಾಗಿದೆ.
ಹಲಗೇರಿ ಎಪಿಎಂಸಿ ಆವರಣದಲ್ಲಿ ಸಮಸ್ಯೆಗಳು ಶಾಶ್ವತವಾಗಿದ್ದು ಮಳೆಗಾಲದಲ್ಲಿ ಮಳೆ ನೀರು ಹೊರಗೆ ಹೋಗುವುದಿಲ್ಲ. ಕೆಸರು ಗದ್ದೆಯಂತಾಗುತ್ತದೆ. ಇದರಿಂದ ವ್ಯಾಪಾರಸ್ಥರಿಗೆ ರೈತರಿಗೆ ಅನಾನುಕೂಲವಾಗಿದೆಸೋಮಣ್ಣ ಮಾಳಗಿ ರೈತ ಮುಖಂಡ
ಹಲಗೇರಿ ಎಪಿಎಂಸಿ ಉಪಪ್ರಾಂಗಣದಲ್ಲಿ ಪ್ರತಿ ಗುರುವಾರ ಮಾತ್ರ ಮಾರುಕಟ್ಟೆ ಇರುತ್ತದೆ. ಸದ್ಯ ಹೊಸದಾಗಿ ಲೇಔಟ್ ಮಾಡಿಸಲಾಗಿದ್ದು ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಸ್ತಾವ ಸಲ್ಲಿಸಲಾಗಿದೆಪರಮೇಶ್ವರ ನಾಯಕ ಸಹಾಯಕ ಕಾರ್ಯದರ್ಶಿ ಎಪಿಎಂಸಿ ರಾಣೆಬೆನ್ನೂರು
ಆವರಣದಲ್ಲಿ ಮಳೆ ನೀರು ಮಳೆಗಾಲದಲ್ಲಿ ಮಳೆ ನೀರು ಹೊರಗಡೆ ಹೋಗುವುದಿಲ್ಲ. ಮಳೆ ನೀರು ನಿಂತು ಕೆಸರು ಗದ್ದೆಯಾಗಿರುತ್ತದೆ. ಹಾಗಾಗಿ ಮಾರುಕಟ್ಟೆ ಒಳಗಡೆ ವಾಹನಗಳು ಹೋಗುವಂತಿಲ್ಲ. ಸುತ್ತಮುತ್ತಲಿನ ಜನತೆ ಗಲೀಜು ಮಾಡುತ್ತಾರೆ. ಕಲ್ಲು ಮುಳ್ಳು ತುಳಿದುಕೊಂಡು ಅಡ್ಡಾಡುವಂತಾಗಿದೆ. ಇಲ್ಲಿ ಪ್ರತಿ ಗುರುವಾರ ನಡೆಯುವ ಬೆಳ್ಳುಳ್ಳಿ ಮಾರುಕಟ್ಟೆಗೆ ವಿಜಯಪುರ ಬಾಗಲಕೋಟೆ ಬೆಳಗಾವಿ ಗದಗ ಹುಬ್ಬಳ್ಳಿ ಧಾರವಾಡ ಬಳ್ಳಾರಿ ಚಿತ್ರದುರ್ಗ ದಾವಣಗೆರೆ ಶಿವಮೊಗ್ಗ ಕಾರವಾರ ಜಿಲ್ಲೆಗಳ ವ್ಯಾಪಾರಕ್ಕೆ ವ್ಯಾಪಾರಸ್ಥರು ಆಗಮಿಸುತ್ತಾರೆ. ಹಾವೇರಿ ಜಿಲ್ಲೆ ಸುತ್ತಮುತ್ತಲಿನ ರೈತರು ತಂದ ಬೆಳ್ಳುಳ್ಳಿ ವ್ಯಾಪಾರ ವಹಿವಾಟು ನಡೆಯುತ್ತದೆ. ಬೆಳ್ಳುಳ್ಳಿ ಒಣಗಿಸಲು ಒಂದೇ ಕಟ್ಟೆ ಇದೆ. ರಾತ್ರಿ ಹೊತ್ತು ವ್ಯಾಪಾರಸ್ಥರ ಮಾಲಿಗೆ ರಕ್ಷಣೆ ಇಲ್ಲ ಎನ್ನುತ್ತಾರೆ ವ್ಯಾಪಾರಸ್ಥರು. ಸಮೀಪದಲ್ಲಿಯೇ ರಾಣೆಬೆನ್ನೂರಿನಲ್ಲಿ ದೊಡ್ಡ ಪ್ರಮಾಣದ ಎಪಿಎಂಸಿ ಪ್ರಾಂಗಣ ಇರುವುದರಿಂದ ಹಲಗೇರಿಯಲ್ಲಿ ಪೂರ್ಣ ಪ್ರಮಾಣದ ವ್ಯಾಪಾರ ವಹಿವಾಟು ನಡೆಯುವುದಿಲ್ಲ. ಗುರುವಾದ ಮಾರುಕಟ್ಟೆಗೆ ಬರುವ ಮಾರಾಟಗಾರರು ಮತ್ತು ಖರೀದಿಗೆ ಬರುವವರಿಗೆ ವಿಶ್ರಾಂತಿ ಕೊಠಡಿ ಶೌಚಾಲಯ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಮೂಲ ಸೌಲಭ್ಯಗಳನ್ನು ಇಲ್ಲಿ ಯಾರನ್ನು ಕೇಳಬೇಕು ಎನ್ನುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.