ADVERTISEMENT

ಆರೇಮಲ್ಲಾಪುರ:ಮೂಲಸೌಲಭ್ಯ ಕಲ್ಪಿಸಲು ಒತ್ತಾಯ

ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಿದ ಪ್ರಣವಾನಂದರಾಮ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 4:47 IST
Last Updated 16 ಸೆಪ್ಟೆಂಬರ್ 2020, 4:47 IST
ರಾಣೆಬೆನ್ನೂರು ತಾಲ್ಲೂಕಿನ ಆರೇಮಲ್ಲಾಪುರದ ಶರಣಬಸವೇಶ್ವರಮಠದ ಪೀಠಾಧ್ಯಕ್ಷ ಪ್ರಣವಾನಂದರಾಮ ಸ್ವಾಮೀಜಿ ಆರೇಮಲ್ಲಾಪುರಕ್ಕೆ ವಿವಿಧ ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮಂಗಳವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು
ರಾಣೆಬೆನ್ನೂರು ತಾಲ್ಲೂಕಿನ ಆರೇಮಲ್ಲಾಪುರದ ಶರಣಬಸವೇಶ್ವರಮಠದ ಪೀಠಾಧ್ಯಕ್ಷ ಪ್ರಣವಾನಂದರಾಮ ಸ್ವಾಮೀಜಿ ಆರೇಮಲ್ಲಾಪುರಕ್ಕೆ ವಿವಿಧ ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮಂಗಳವಾರ ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು   

ರಾಣೆಬೆನ್ನೂರು: ತಾಲ್ಲೂಕಿನ ಆರೇಮಲ್ಲಾಪುರ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಗ್ರಾಮಕ್ಕೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಆರೇಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಠದ ಪೀಠಾಧಿಪತಿ ಪ್ರಣವಾನಂದರಾಮ ಸ್ವಾಮೀಜಿ ಮಂಗಳವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಗ್ರಾಮದ ಸಮೀಪ 70ಕ್ಕೂ ಹೆಚ್ಚು ರೈತರು ತಮ್ಮ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ ಅಲ್ಲಿ ವಾಸಿಸುವ ಕುಟುಂಬಗಳು ವಿದ್ಯುತ್, ನೀರು, ರಸ್ತೆ, ಶೌಚಾಲಯ, ಪಕ್ಕಾ ಗಟಾರ ನಿರ್ಮಾಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಹೀಗಾಗಿ ಅವರಿಂದ ಸೂಕ್ತ ತೆರಿಗೆ ಕಟ್ಟಿಸಿಕೊಂಡು ವಿದ್ಯುತ್ ಮತ್ತು ಕುಡಿಯುವ ನೀರನ್ನು ಶೀಘ್ರವಾಗಿ ಒದಗಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

2015–16ರಲ್ಲಿ ‘ಬಯಲು ಮುಕ್ತ ಗ್ರಾಮ’ ಎಂಬ ಯೋಜನೆಯಡಿ ಗ್ರಾಮದಲ್ಲಿ ಎಲ್ಲರೂ ಶೌಚಾಲಯವನ್ನು ಕಟ್ಟಿಸಿಕೊಂಡಿದ್ದಾರೆ ಎಂಬ ತಪ್ಪು ಮಾಹಿತಿಯನ್ನುಪಿಡಿಒ ಮತ್ತು ಸಿಬ್ಬಂದಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಆದರೆ ಇನ್ನೂ ಅನೇಕ ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡಿಲ್ಲ. ನಿರ್ಮಿಸಿದವರಿಗೂ ಸಹ ಸರಿಯಾಗಿ ಹಣ ಬಿಡುಗಡೆಗೊಂಡಿಲ್ಲ. ಹೀಗಾಗಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಶೌಚಾಲಯ ನಿರ್ಮಿಸಿಕೊಳ್ಳಲು ಬಾಕಿ ಇರುವ ಹಣವನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.

ADVERTISEMENT

‘ನಮ್ಮೆಲ್ಲ ಮನವಿಗಳಿಗೆ ತಕ್ಷಣವೇ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡಲೇ ಹಾವೇರಿ ಜಿಲ್ಲಾಧಿಕಾರಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಗ್ರಾಮದ ಕುಂದು ಕೊರತೆಗಳ ಬಗ್ಗೆ ಹಾಗೂ ಶೌಚಾಲಯ ಹಣ ಬಿಡುಗಡೆ ಮಾಡದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದ್ದಾರೆ’ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಪ್ರಭು ಹಿರೇಮಠ, ಜೀವನ್ ಶೆಟ್ಟಿ, ಚಂದ್ರಪ್ಪ ಕಾಳಪ್ಪನವರ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.