ಹಾನಗಲ್: ‘ಕಲೆಯನ್ನು ವಿಕೃತಗೊಳಿಸುವ ಹುನ್ನಾರ ಬೇಡ. ಕಲೆ ದೈವತ್ವಕ್ಕೆ ದಾರಿ. ಮನಸ್ಸನ್ನು ಉನ್ನತಿಗೆ ಕೊಂಡೊಯ್ಯುವ ಶಕ್ತಿ ಕಲಾ ಸಾಹಿತ್ಯಕ್ಕಿದೆ’ ಎಂದು ಸಂಸ್ಕಾರ ಭಾರತಿ ಕರ್ನಾಟಕದ ಉತ್ತರ ಪ್ರಾಂತ ಸಂಚಾಲಕ ಶ್ರೀನಿವಾಸ ಘೋಷ್ ಅಭಿಪ್ರಾಯಪಟ್ಟರು.
ಇಲ್ಲಿನ ವೆಂಕಟೇಶ್ವರ ಮಂದಿರದ ಭವನದಲ್ಲಿ ಭಾನುವಾರ ಸಂಸ್ಕಾರ ಭಾರತಿ ಜಿಲ್ಲಾ ಘಟಕ ಆಯೋಜಿಸಿದ ಗುರುಪೂಜಾ ಹಾಗೂ ಸಂಗೀತ ಸಂಭ್ರಮ, ಕಲಾವಿದರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ‘ಕಲೆ ವೈಭವ ಕಳೆದುಕೊಳ್ಳುತ್ತಿದೆ. ಸಾಹಿತ್ಯ, ಸಂಗೀತ, ನಾಟ್ಯ, ಚಿತ್ರ ಸೇರಿದಂತೆ ಎಲ್ಲ ಕಲೆಗಳು ನಮ್ಮ ಬದುಕಿಗೆ ಮಾರ್ಗದರ್ಶನ ಮಾಡುವ ಶಕ್ತಿ ಹೊಂದಿವೆ. ಕಲೆಯ ಉನ್ನತಿಗೆ ಆದ್ಯತೆ ನೀಡಬೇಕಾದ ಕಾಲದಲ್ಲಿ ನಾವಿದ್ದೇವೆ’ ಎಂದರು.
ಸಾಹಿತಿ ಮಾರುತಿ ಶಿಡ್ಲಾಪೂರ, ತಾಂತ್ರಿಕ ಬೆಳವಣೆಗೆಯ ಯುಗದಲ್ಲಿ ಮಾನವೀಯ ಮೌಲ್ಯಗಳು, ಉತ್ತಮ ಜೀವನ ಮಾರ್ಗದರ್ಶನಕ್ಕೆ ಸಾಕ್ಷಿಯಾಗುವ ಕಲೆಗಳು ವಿಜೃಂಭಿಸಿ ಜೀವನದ ಉನ್ನತಿಗೆ ಶಿಕ್ಷಣ ನೀಡಬೇಕಾಗಿದೆ. ಕಲೆಗಳು ನಮ್ಮ ಅಂತರಂಗ, ಬಹರಂಗವನ್ನು ಶುದ್ಧಗೊಳಿಸುವ ಶಕ್ತಿ ಹೊಂದಿವೆ’ ಎಂದರು.
ಕಲಾವಿದರಾದ ಎಸ್.ಎಸ್.ಮೂರಮಟ್ಟಿ, ಶ್ರವಣ ಕುಲಕರ್ಣಿ, ನರಸಿಂಹ ಕೋಮಾರ, ಜಗದೀಶ ಮಡಿವಾಳರ, ರಾಮಕೃಷ್ಣ ಸುಗಂಧಿ, ಬಾಲಚಂದ್ರ ಅಂಬಿಗೇರ, ಅಕ್ಷಯ ಜೋಶಿ, ಶಶಿಕಲಾ ಅಕ್ಕಿ, ಎಂ.ಪ್ರಸನ್ನಕುಮಾರ, ಶಿವಯ್ಯ ಇಟಗಿಮಠ, ಮಂಜುನಾಥ ಸಣ್ಣಿಂಗಮ್ಮನವರ, ಶ್ರೀಪಾದ ಅಕ್ಕಿವಳ್ಳಿ ಇದ್ದರು.
ಕಲಾವಿದರಿಂದ ಸಂಗೀತ ಸಂಭ್ರಮ
ಸರಸ್ವತಿ ಸಂಗೀತ ವಿದ್ಯಾಲಯದ ಕಲಾವಿದೆ ಪ್ರತಿಕ್ಷಾ ನರಸಿಂಹ ಕೋಮಾರ ಗುರುಕುಮಾರೇಶ ಕೃಪಾ ಸಂಗೀತ ತರಬೇತಿ ಕೇಂದ್ರದ ಕಲಾವಿದ ಗಗನದೀಪ ಜಗದೀಶ ಮಡಿವಾಳರ ಹಾಗೂ ಸಂಗಡಿಗರಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಿತು. ಕಲಾವಿದ ಬಾಲಚಂದ್ರ ಅಂಬಿಗೇರ ಜನಪದ ಹಾಗೂ ರಂಗ ಗೀತೆ ಹಾಡಿದರು. ಅಮೃತಾ ಬೆಳಕೇರಿ ನಿರೀಕ್ಷಾ ಮಾನೋಜಿ ವಿಜಯಲಕ್ಷ್ಮೀ ಕಳ್ಳಿ ಭರತ ನಾಟ್ಯದ ಎಲ್ಲರ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.