ADVERTISEMENT

‘ಗೃಹಲಕ್ಷ್ಮಿ’ ಹಣ ಸರ್ಕಾರಿ ಶಾಲೆಗೆ ದೇಣಿಗೆ ನೀಡಿದ ಆಶಾ ಕಾರ್ಯಕರ್ತೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 23:57 IST
Last Updated 4 ಫೆಬ್ರುವರಿ 2025, 23:57 IST
<div class="paragraphs"><p>ಗಂಗಮ್ಮ ಮಹೇಶಪ್ಪ ಲಗುಬಿಗಿ</p></div>

ಗಂಗಮ್ಮ ಮಹೇಶಪ್ಪ ಲಗುಬಿಗಿ

   

ರಾಣೆಬೆನ್ನೂರು (ಹಾವೇರಿ ಜಿಲ್ಲೆ): ತಾಲ್ಲೂಕಿನ ಐರಣಿ ಗ್ರಾಮದ ಆಶಾ ಕಾರ್ಯಕರ್ತೆ ಗಂಗಮ್ಮ ಮಹೇಶಪ್ಪ ಲಗುಬಿಗಿ ಅವರು ಗೃಹಲಕ್ಷ್ಮಿ ಯೋಜನೆಯಿಂದ ತಮಗೆ ಬಂದಿರುವ ₹ 24 ಸಾವಿರವನ್ನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ.

‘ಶಾಲಾ ಮಕ್ಕಳಿಗೆ ಆರೋಗ್ಯ ಇಲಾಖೆಯ ಜಂತಿನ ಗುಳಿಗಿ ವಿತರಣೆ ಹಾಗೂ ಇನ್ನಿತರ ಆರೋಗ್ಯ ಇಲಾಖೆ ಕಾರ್ಯಕ್ರಮಗಳಲ್ಲಿ ನಿರಂತರ ಭಾಗವಹಿಸುತ್ತೇನೆ. ಆಗ ಅಲ್ಲಿನ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇರುವುದು ಕಂಡು ಬಂತು. ದೂರದಿಂದ ಶುದ್ಧ ನೀರಿನ ಘಟಕದಿಂದ ನೀರು ತರುತ್ತಿದ್ದರು. ಶಾಲೆಯ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ಮಿನಿ ಘಟಕ ಅಥವಾ ನಲಿಕಲಿ ಸ್ಮಾರ್ಟ್‌ ಕ್ಲಾಸ್‌ ಮಾಡಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಹಣ ನೀಡಲು ಮುಂದಾದೆ’ ಎಂದು ಗಂಗಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅಲ್ಲದೇ, ಗ್ರಾಮಸ್ಥರು ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅದನ್ನು ಕಂಡು ನನಗೂ ಶಾಲೆಗೆ ದೇಣಿಗೆ ಕೊಡಬೇಕೆಂದು ಪ್ರೇರಣೆ ಬಂತು. ಇದಕ್ಕೆ ನಮ್ಮ ಮನೆಯವರು ಒಪ್ಪಿಗೆ ನೀಡಿದರು’ ಎಂದರು.

ಮುಖ್ಯ ಶಿಕ್ಷಕಿ ಅನ್ನಪೂರ್ಣ ಎನ್. ಬಣಕಾರ, ‘ಗಂಗಮ್ಮ ಅವರು ನೀಡಿದ ಹಣವನ್ನು ಶಾಲೆಯ ಅಭಿವೃದ್ಧಿಗೆ ಬಳಸಲಾಗುವುದು. ಅವರ ಇಚ್ಛೆಯಂತೆ ಶುದ್ಧ ಕುಡಿಯುವ ನೀರಿನ ಮಿನಿ ಘಟಕ ಅಥವಾ ಸ್ಮಾರ್ಟ್‌ ಕ್ಲಾಸ್‌ ಮಾಡಲು ಬಳಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.