ADVERTISEMENT

ಆಶಾ ಕಾರ್ಯಕರ್ತೆಯರ ಹೋರಾಟ ತೀವ್ರ

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 14:01 IST
Last Updated 12 ಜುಲೈ 2020, 14:01 IST
ಆಶಾ ಕಾರ್ಯಕರ್ತೆಯರ ಪ್ರತಿಭಟನೆ (ಫೈಲ್ ಚಿತ್ರ)
ಆಶಾ ಕಾರ್ಯಕರ್ತೆಯರ ಪ್ರತಿಭಟನೆ (ಫೈಲ್ ಚಿತ್ರ)   

ಹಾವೇರಿ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ರಾಜ್ಯದಾದ್ಯಂತ ಆರೋಗ್ಯ ಸೇವೆ ಸ್ಥಗಿತಗೊಳಿಸಿ ಅನಿರ್ದಿಷ್ಟ ಅವಧಿಯವರೆಗೆ ಕೈಗೊಂಡಿರುವ ಹೋರಾಟವನ್ನು ತೀವ್ರಗೊಳಿಸಲು ಆಶಾ ಕಾರ್ಯಕರ್ತೆಯರು ನಿರ್ಧಾರ ಕೈಗೊಂಡಿದ್ದಾರೆ.

ಆಶಾ ಕಾರ್ಯಕರ್ತೆಯರು ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ನಿರಂತರ ಹೋರಾಟಗಳನ್ನು ನಡೆಸುತ್ತಿದ್ದು, ಇಲ್ಲಿಯವರೆಗೆ ಆಶಾ ಸಂಘದಿಂದ ರಾಜ್ಯ ವ್ಯಾಪಿ ಹೋರಾಟಗಳು ಅತ್ಯಂತ ಯಶಸ್ವಿಯಾಗಿ ಜರುಗಿವೆ. ಸರ್ಕಾರದ ನಿರ್ಲಕ್ಷ್ಯ ಮತ್ತು ಜನವಿರೋಧಿ ಧೋರಣೆಯ ವಿರುದ್ಧ ರಾಜಿರಹಿತ ಹೋರಾಟಕ್ಕೆ ಸಜ್ಜುಗೊಳ್ಳಬೇಕು ಎಂದು ಸಂಘದ ಮುಖಂಡರು ತೀರ್ಮಾನಿಸಿದ್ದಾರೆ.

ಜುಲೈ 13ರಂದುರಾಜ್ಯದ ಎಲ್ಲಾ ಪಂಚಾಯಿತಿ ಮುಂದೆ, ಆಯಾ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ. ಜುಲೈ 14ರಂದು ಜಿಲ್ಲಾ, ತಾಲ್ಲೂಕು, ಪಟ್ಟಣ ಕೇಂದ್ರಗಳಲ್ಲಿ ‘ಮಾನವ ಸರಪಳಿ’ ಮಾಡಿ ಹೋರಾಟ ನಡೆಸಲಿದ್ದಾರೆ. ಜುಲೈ 15ರಂದುಎಲ್ಲಾ ಆಶಾ ಕಾರ್ಯಕರ್ತೆಯರು ಮುಖ್ಯಮಂತ್ರಿಗೆ ಪತ್ರ ಬರೆಯುವ ‘ಪತ್ರ ಚಳವಳಿ’ ನಡೆಸಲಿದ್ದಾರೆ. ಜುಲೈ 16ರಂದು ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆ ಆಶಾ ಕಾರ್ಯಕರ್ತೆಯರು ಧರಣಿ ಮಾಡುವುದಾಗಿ ತಿಳಿಸಿದ್ದಾರೆ.

ADVERTISEMENT

ಜುಲೈ 17ರಂದು ಕುಟುಂಬ ಸಮೇತ ಆಶಾ ಕಾರ್ಯಕರ್ತೆಯರು ಬೇಡಿಕೆಯ ಪೋಸ್ಟರ್ ಹಿಡಿದು ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಮುಖಂಡರಾದ ಗಂಗಾಧರ ಬಡಿಗೇರ ಮತ್ತು ಜಯಶೀಲಾ ಬಂಕಾಪುರಮಠ ಪ್ರಕಟಣೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.