ADVERTISEMENT

ಬೇಡಿಕೆ ಈಡೇರಿಕೆಗೆ ಆಶಾಗಳ ಮನವಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 15:45 IST
Last Updated 9 ಆಗಸ್ಟ್ 2021, 15:45 IST
‘ಭಾರತ ರಕ್ಷಿಸಿ ದಿನ’ ದೇಶವ್ಯಾಪಿ ಪ್ರತಿಭಟನೆ ಅಂಗವಾಗಿ ‘ಸ್ಕೀಮ್‌ ವರ್ಕರ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ’ (ಎಸ್‌ಡಬ್ಲ್ಯುಎಫ್‌ಐ) ವತಿಯಿಂದ ಹಾವೇರಿಯಲ್ಲಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು
‘ಭಾರತ ರಕ್ಷಿಸಿ ದಿನ’ ದೇಶವ್ಯಾಪಿ ಪ್ರತಿಭಟನೆ ಅಂಗವಾಗಿ ‘ಸ್ಕೀಮ್‌ ವರ್ಕರ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ’ (ಎಸ್‌ಡಬ್ಲ್ಯುಎಫ್‌ಐ) ವತಿಯಿಂದ ಹಾವೇರಿಯಲ್ಲಿ ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು   

ಹಾವೇರಿ: ‘ಭಾರತ ರಕ್ಷಿಸಿ ದಿನ’ ದೇಶವ್ಯಾಪಿ ಪ್ರತಿಭಟನೆ ಅಂಗವಾಗಿ ‘ಎಐಯುಟಿಯುಸಿ’ಗೆ ಸೇರಿದ ‘ಸ್ಕೀಮ್‌ ವರ್ಕರ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ’ (ಎಸ್‌ಡಬ್ಲ್ಯುಎಫ್‌ಐ) ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ದೇಶದಾದ್ಯಂತ ಸುಮಾರು ಒಂದು ಕೋಟಿ ಸ್ಕೀಮ್ ನೌಕರರು, ಅದರಲ್ಲೂ ಬಹುತೇಕವಾಗಿ ಮಹಿಳೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು, ಬಿಸಿಯೂಟ ನೌಕರರು ಗ್ರಾಮೀಣ ಪ್ರದೇಶಗಳಲ್ಲಿ ಹಗಲಿರುಳೆನ್ನದೆ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.ಇವರಿಂದ ‘ಸ್ಕೀಮ್ ವರ್ಕರ್ಸ್’ ಹೆಸರಿನಲ್ಲಿ ಅತ್ಯಲ್ಪ ವೇತನಕ್ಕೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಈ ನೌಕರರು ಅತ್ಯಂತ ಬಡವರಾಗಿದ್ದು, ಇವರ ತಿಂಗಳ ವೇತನ ₹1,100ರಿಂದ ₹10,000 ಇದ್ದು, ಈ ವೇತನವನ್ನೂ ಸಹ ಸಮಯಕ್ಕೆ ಸರಿಯಾಗಿ ನೀಡುವುದಿಲ್ಲ. ಕಷ್ಟಪಟ್ಟು ಗಳಿಸಿದ ವೇತನವನ್ನು ಪಡೆಯಲು ಅವರು ತಿಂಗಳಾನುಗಟ್ಟಲೆ ಅಲೆಯಬೇಕು. ಜೀವಮಾನವಿಡೀ ಸರ್ಕಾರಿ ನೌಕರರ ಸಮಾನಕ್ಕೆ ದುಡಿದರೂ, ನಿವೃತ್ತಿ ಹೊಂದಿದ ಮೇಲೆ ಅವರಿಗೆ ಯಾವುದೇ ಸಾಮಾಜಿಕ ಭದ್ರತೆ ಇರುವುದಿಲ್ಲ ಎಂದು ದೂರಿದರು.

ADVERTISEMENT

‘ಭಾರತ ರಕ್ಷಿಸಿ ದಿನ’ ದಿನದಂದು ದೇಶದ ವಿವಿಧ ಕಾರ್ಮಿಕ-ರೈತರೊಂದಿಗೆ ಒಗ್ಗೂಡಿ, ಎಲ್ಲಾ ದುಡಿಯುವ ವರ್ಗದ ಬೇಡಿಕೆಗಳಾದ ಕನಿಷ್ಟ ₹21,000 ಮಾಸಿಕ ವೇತನ ಮತ್ತು ₹10,000 ಪಿಂಚಣಿ ನೀಡಬೇಕು. ನಿವೃತ್ತಿ ಹೊಂದುವ ಕಾರ್ಯಕರ್ತೆಯರಿಗೆ ₹5 ಲಕ್ಷ ನಿವೃತ್ತಿ ಇಡುಗಂಟು ನೀಡಬೇಕು. ಕೊರೊನಾ ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ಉಚಿತ ಚಿಕಿತ್ಸೆ, ಕನಿಷ್ಟ ₹1 ಲಕ್ಷ ಆರೋಗ್ಯ ಸಹಾಯಧನ ಮತ್ತು ಸಾವಿಗೀಡಾದ ಕುಟುಂಬಗಳಿಗೆ ಘೋಷಿತ ₹50 ಲಕ್ಷ ಪರಿಹಾರಧನ ತಕ್ಷಣ ನೀಡಬೇಕು ಎಂದು ಮನವಿ ಮಾಡಿದರು.

ಆಶಾ ಕಾರ್ಯಕರ್ತೆಯರಾದ ರತ್ನಾ ಗಿರಣಿ, ಶೀಲಾ ಗುಂಡಮ್ಮನವರ್, ರಿಹಾನಾ ಭಾನು ಮೆಳ್ಳಳ್ಳಿ, ಚನ್ನಮ್ಮ ರಾಮಾಪೂರ, ಸುಮಾ ಮಾಳಗಿ, ಸರಸ್ವತಿ ಮಾಯಣ್ಣನವರ್, ಸುಧಾ ಕುಮ್ಮಣ್ಣನವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.