ADVERTISEMENT

ಮಾಜಿ ಯೋಧನ ಮೇಲೆ ಹಲ್ಲೆ: ಪ್ರತಿಭಟನೆ

ಬಸ್ ಸೀಟಿನ ಕ್ಷುಲ್ಲಕ ವಿಚಾರಕ್ಕಾಗಿ ಹಲ್ಲೆ ನಡೆಸಿದ ಪುಂಡರ ಗುಂಪು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 19:16 IST
Last Updated 23 ಫೆಬ್ರುವರಿ 2019, 19:16 IST

ಹಾವೇರಿ:ನಗರದ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಶನಿವಾರ ಸಂಜೆ ಸೀಟಿನ ವಿಚಾರವಾಗಿ ವಾಗ್ವಾದ ನಡೆದಿದ್ದು, ಬ್ಯಾಡಗಿ ತಾಲ್ಲೂಕಿನ ಕುಮ್ಮೂರಿನ ಮಾಜಿ ಯೋಧ ಪರಮೇಶಪ್ಪ ಬಾರಂಗಿ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ 2 ವರ್ಷದ ಮಗುವನ್ನು ಬಿಡುಗಡೆ ಮಾಡಿ, ಪತ್ನಿ ಅಕ್ಕಮಹಾದೇವಿ ಜೊತೆ ಊರಿಗೆ ತೆರಳುಸಲುವಾಗಿಮಾಜಿ ಯೋಧ ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಹಾವೇರಿ–ಹಿರೇಕೆರೂರ ಬಸ್‌ನಲ್ಲಿ ಸೀಟು ಹಿಡಿಯುವ ಸಲುವಾಗಿ ಬ್ಯಾಗ್‌ ಇರಿಸಿದ್ದಾರೆ. ಇದೇ ವೇಳೆ ಇನ್ನೊಂದು ಕುಟುಂಬವೂ ಸೀಟಿಗಾಗಿ ವಸ್ತುಗಳನ್ನು ಹಾಕಿವೆ. ಸೀಟಿನ ಕುರಿತು ಮಾಜಿ ಯೋಧ ಹಾಗೂ ಇನ್ನೊಂದು ಕುಟುಂಬದ ಸದಸ್ಯರ ಜೊತೆ ವಾಗ್ವಾದ ನಡೆದಿದೆ.

‘ಆ ವೇಳೆಯಲ್ಲಿ ಅವರು ನನ್ನ ಗಂಡನ ಮೈಗೆ ಕೈ ಹಾಕಿದ್ದಾರೆ. ಅಲ್ಲದೇ, ತಕ್ಷಣವೇ ಫೋನ್ ಮಾಡಿ, ಏಳೆಂಟು ಜನರನ್ನು ಕರೆಯಿಸಿಕೊಂಡು ಹಲ್ಲೆ ನಡೆಸಿದ್ದಾರೆ. ದಯವಿಟ್ಟು ಬಿಟ್ಟುಬಿಡಿ ಎಂದು ಅಂಗಲಾಚಿದರೂ ಬಿಡಲಿಲ್ಲ’ ಎಂದು ಮಾಜಿ ಯೋಧನ ಪತ್ನಿ ಅಕ್ಕಮಹಾದೇವಿ ತಿಳಿಸಿದರು.

ADVERTISEMENT

ದಿಕ್ಕೇ ತೋಚದಾಗಿ, ‘ನನ್ನ ಪತಿ ಮಾಜಿ ಯೋಧರಿದ್ದಾರೆ. ದಯಮಾಡಿ ಹಲ್ಲೆ ಮಾಡಬೇಡಿ’ ಎಂದ ವಿನಂತಿಸಿಕೊಂಡೆನು. ಆಗ, ಪುಂಡರ ಗುಂಪು, ‘ಯೋಧನಾಗಿದ್ದರೆ ಬಿಡಬೇಡಿ’ ಎಂದು ಹೇಳಿ ತೀವ್ರವಾಗಿ ಹಲ್ಲೆ ನಡೆಸಿತು ಎಂದು ಅವರು ನೋವು ತೋಡಿಕೊಂಡರು.

‘ಅನಂತರ, ಬಸ್ ಚಾಲಕರು, ನಿರ್ವಾಹಕರು, ಪೊಲೀಸರು ಬಂದು ಬಿಡಿಸಿ, ಆಸ್ಪತ್ರೆಗೆ ಸೇರಿಸಿದರು’ ಎಂದರು. ಮಾಜಿ ಯೋಧ ಪರಮೇಶಪ್ಪ ಬಾರಂಗಿ ನವೆಂಬರ್‌ನಲ್ಲಿ ಸೇನೆಯಿಂದ ನಿವೃತ್ತಿಗೊಂಡಿದ್ದರು.

ಮಾಜಿ ಯೋಧರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಪ್ರತಿಭಟನೆ:ಮಾಜಿ ಯೋಧರ ಮೇಲಿನ ಸುದ್ದಿ ತಿಳಿದ ಸ್ಥಳೀಯರು, ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು. ಆರೋಪಿಗಳನ್ನು ನಮ್ಮ ಕೈಗೆ ಕೊಡಿ. ತಕ್ಕ ಪಾಠ ಕಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಠಾಣೆ ಮುಂದೆ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.