ಹಾವೇರಿ: ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಅತ್ತಿಕಟ್ಟೆ ಗ್ರಾಮದ ಕೆರೆಯ ಏರಿ ಒಡೆದಿದ್ದು, ಕೆರೆಯ ನೀರು ಸಂಪೂರ್ಣ ಖಾಲಿಯಾಗಿದೆ. ಅದೇ ನೀರು ರೈತರ ಜಮೀನಿಗೆ ನುಗ್ಗಿದ್ದು, ಬೆಳೆಗಳು ಜಲಾವೃತಗೊಂಡಿವೆ.
ಸೂಡಂಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅತ್ತಿಕಟ್ಟೆ ಗ್ರಾಮದ ಸರ್ವೆ ನಂಬರ್ 168ರಲ್ಲಿ ಸುಮಾರು 13 ಎಕರೆ ವಿಸ್ತೀರ್ಣದಲ್ಲಿ ಕೆರೆಯಿದೆ. ಬ್ಯಾಡಗಿ ತಾಲ್ಲೂಕಿನಲ್ಲಿ ಹಲವು ದಿನಗಳಿಂದ ಬಿಡುವು ನೀಡುತ್ತಲೇ ನಿರಂತರವಾಗಿ ಮಳೆಯಾಗುತ್ತಿದ್ದು, ಇದೇ ನೀರು ಕೆರೆ ಸೇರುತ್ತಿತ್ತು. ಇದರ ಜೊತೆಯಲ್ಲಿಯೇ ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ ಮೂಲಕವೂ ಕೆರೆಗೆ ನೀರು ಹರಿಸಲಾಗುತ್ತಿತ್ತು.
ಸುತ್ತಮುತ್ತಲಿನ ಗ್ರಾಮಗಳ ಕೆರೆಯ ನೀರು ಸಹ ಅತ್ತಿಕಟ್ಟೆಯ ಕೆರೆಗೆ ಬರುತ್ತಿತ್ತು. ಕೆರೆಯಲ್ಲಿ ನೀರು ಹೆಚ್ಚಾಗಿದ್ದರಿಂದ, ಶುಕ್ರವಾರ ನಸುಕಿನ ಜಾವದಲ್ಲಿ 30 ಅಡಿಯಷ್ಟು ಅಗಲದಲ್ಲಿ ಏರಿ ಒಡೆದಿದೆ. ಈ ಭಾಗದಿಂದಲೇ ಕೆರೆಯ ನೀರು ಸಂಪೂರ್ಣವಾಗಿ ಹೊರಗೆ ಬಂದು, ಸುಮಾರು 15 ರೈತರ ಜಮೀನಿಗೆ ನುಗ್ಗಿದೆ.
ಕೆರೆಗೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಅಡಿಕೆ, ಗೋವಿನ ಜೋಳ, ಭತ್ತ ಬೆಳೆಯಲಾಗಿದೆ. ಈ ಜಮೀನಿಗೆ ನೀರು ನುಗ್ಗಿದ್ದರಿಂದ, ಬೆಳೆಗಳು ಜಲಾವೃತಗೊಂಡಿದ್ದವು. ಜಮೀನಿಗೆ ನೀರು ನುಗ್ಗಿದ್ದ ಮಾಹಿತಿ ತಿಳಿಯುತ್ತಿದ್ದಂತೆ ರೈತರು ಸ್ಥಳಕ್ಕೆ ಬಂದರು. ಜಮೀನಿನಲ್ಲಿ ನಿಂತಿರುವ ನೀರು ನೋಡಿ ಗೋಳಾಡಿದರು.
‘ನಿರಂತರವಾಗಿ ಮಳೆಯಾಗುತ್ತಿದ್ದು, ಜವಳಿನಿಂದಾಗಿ ಬೆಳೆ ಹಾಳಾಗುವ ಆತಂಕವಿತ್ತು. ಈಗ ಕೆರೆಯ ನೀರು ಜಮೀನಿಗೆ ನುಗ್ಗಿದ್ದು, ಬೆಳೆ ಕೊಳೆಯುವ ಭಯವಿದೆ’ ಎಂದು ರೈತರು ಅಳಲು ತೋಡಿಕೊಂಡರು.
‘ಅಕ್ಕ–ಪಕ್ಕದ ಕೆರೆಗಳ ನೀರು, ಅತ್ತಿಕಟ್ಟೆ ಕೆರೆಗೆ ಬರುತ್ತದೆ. ಕೆರೆಯ ಏರಿ ಗಟ್ಟಿಯಾಗಿರಲಿಲ್ಲ. ಕೆರೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದಲೇ ಏರಿ ಒಡೆದಿದೆ. ಇದರ ಜೊತೆಯಲ್ಲಿ ಕೆರೆಯ ನೀರು ಸಂಪೂರ್ಣವಾಗಿ ಖಾಲಿಯಾಗಿರುವುದು ಮತ್ತಷ್ಟು ಆತಂಕ ಮೂಡಿಸಿದೆ’ ಎಂದರು.
‘ಅತ್ತಿಕಟ್ಟೆ ಕೆರೆ ಭರ್ತಿಯಾದರೆ, ಬೇಸಿಗೆಯಲ್ಲಿ ಗ್ರಾಮದ ಜಾನುವಾರುಗಳಿಗೆ ಕುಡಿಯುವ ನೀರು ಸಿಗುತ್ತೆ. ಈಗ ಕೆರೆ ಏರಿ ಒಡೆದು ನೀರು ಸಂಪೂರ್ಣ ಖಾಲಿಯಾಗಿರುವುದರಿಂದ, ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆಯಾಗಬಹುದು. ತ್ವರಿತವಾಗಿ ಏರಿ ದುರಸ್ತಿಪಡಿಸಬೇಕು. ಏತ ನೀರಾವರಿ ನೀರು ಬಳಸಿಕೊಂಡು ಕೆರೆಯನ್ನು ಪುನಃ ಭರ್ತಿ ಮಾಡಬೇಕು’ ಎಂದು ಒತ್ತಾಯಿಸಿದರು.
‘2024ರಲ್ಲಿಯೂ ಅತ್ತಿಕಟ್ಟೆ ಕೆರೆಯ ಏರಿ ಒಡೆದಿತ್ತು. ರೈತರ ಜಮೀನಿಗೂ ನೀರು ನುಗ್ಗಿತ್ತು. ಇದರ ಪರಿಶೀಲನೆ ನಡೆಸಿದ್ದ ಶಾಸಕ ಬಸವರಾಜ ಶಿವಣ್ಣನವರ, ಕೆರೆಯ ಏರಿ ಅಭಿವೃದ್ಧಿಗಾಗಿ ಶಾಸಕರ ಅನುದಾನದಲ್ಲಿ ₹ 5 ಲಕ್ಷ ನೀಡಿದ್ದರು. ಈ ಹಣದಲ್ಲಿ ಕಳಪೆ ಕಾಮಗಾರಿ ನಡೆದಿದ್ದು, ಇದೇ ಕಾರಣಕ್ಕೆ ಇಂದು ಕೆರೆಯ ಏರಿ ಪುನಃ ಒಡೆದಿದೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಪಂಚಾಯತ್ ರಾಜ್ ಇಲಾಖೆಯಿಂದ ಕಾಮಗಾರಿ ನಡೆದಿತ್ತು. ಕೆಲಸ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ, ಏರಿಯನ್ನು ವೈಜ್ಞಾನಿಕವಾಗಿ ಸಿದ್ಧಪಡಿಸಿಲ್ಲ. ಕೇವಲ ಮಣ್ಣು ಹಾಕಿ, ಕಳಪೆ ಕಾಮಗಾರಿ ಮಾಡಿದ್ದಾನೆ. ಇದು ಗೊತ್ತಿದ್ದರೂ ಲಂಚದ ಆಸೆಗಾಗಿ ಎಂಜಿನಿಯರ್‌ಗಳು ಕಾಮಗಾರಿಗೆ ಒಪ್ಪಿಗೆ ನೀಡಿದ್ದಾರೆ. ಗುತ್ತಿಗೆದಾರ ಹಾಗೂ ಎಂಜಿನಿಯರ್‌ಗಳ ನಿರ್ಲಕ್ಷ್ಯದಿಂದ ಕೆರೆಯ ಏರಿ ಪುನಃ ಒಡೆದಿದೆ. ಕಾಮಗಾರಿ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಒಡೆದಿರುವ ಕೆರೆ ಏರಿ ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು, ‘ಕೆರೆಯ ಕೋಡಿ ಕಾಲುವೆಯನ್ನು ಮುಚ್ಚಲಾಗಿದೆ. ಇದರಿಂದ ನೀರಿನ ಒತ್ತಡ ಹೆಚ್ಚಾಗಿ ಏರಿ ಒಡೆದಿರುವುದು ಗಮನಕ್ಕೆ ಬಂದಿದೆ’ ಎಂದರು.
2024ರಲ್ಲಿ ನಡೆಸಿದ್ದ ಕಾಮಗಾರಿ ಕಳಪೆಯಾಗಿದ್ದರಿಂದ ಏರಿ ಒಡೆದಿದೆ. ತಪ್ಪಿತಸ್ಥ ಗುತ್ತಿಗೆದಾರ–ಎಂಜಿನಿಯರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.ಕೆರೆ ಅಭಿವೃದ್ಧಿಗೆ ಒತ್ತು ನೀಡಬೇಕು ಅತ್ತಿಕಟ್ಟೆ ಗ್ರಾಮಸ್ಥರು
‘ಅತ್ತಿಕಟ್ಟೆ ಕೆರೆಯಲ್ಲಿ ನೀರು ಹೆಚ್ಚಾಗಿರುವುದು ಗಮನಕ್ಕೆ ಬಂದಿತ್ತು. ಏರಿ ಒಡೆಯುವ ಲಕ್ಷಣವೂ ಗೋಚರಿಸಿತ್ತು. ಗ್ರಾಮ ಪಂಚಾಯಿತಿ ವತಿಯಿಂದ ಕೆರೆ ಪ್ರದೇಶದಲ್ಲಿ ಜೆಸಿಬಿ ಯಂತ್ರದಿಂದ ತಾತ್ಕಾಲಿಕ ಕೆಲಸ ಮಾಡಿಸಲಾಗಿತ್ತು. ಆದರೆ ಈಗ ಶುಕ್ರವಾರ ನಸುಕಿನಲ್ಲಿ ಕೆರೆ ಏರಿ ಒಡೆದಿದೆ’ ಎಂದು ಸೂಡಂಬಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಕೋಟೆಪ್ಪ ಪುಟ್ಟಪ್ಪನವರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಸುಮಾರು 15 ರೈತರ ಜಮೀನಿಗೆ ನೀರು ನುಗ್ಗಿತ್ತು. ಇದೇ ನೀರು ದೊಮ್ಮಿಹಾಳ ಹಾಗೂ ತಿಳವಳ್ಳಿ ಕೆರೆಗೆ ಹೋಗಿದೆ. ಏರಿ ಒಡೆದಿದ್ದರಿಂದ ಕೆರೆಯ ನೀರು ಸಂಪೂರ್ಣ ಖಾಲಿಯಾಗಿದೆ. ಎಲ್ಲೆಲ್ಲಿ ಹಾನಿ ಆಗಿದೆ ಎಂಬುದನ್ನು ತಿಳಿದುಕೊಳ್ಳುತ್ತಿದ್ಧೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.