ADVERTISEMENT

ಹಾವೇರಿ: ಜಿಲ್ಲೆಯಾದ್ಯಂತ ಅನುರಣಿಸಿದ ರಾಮನಾಮ ಜಪ

ರಾಮಮಂದಿರದಲ್ಲಿ ವಿಶೇಷ ಪೂಜೆ, ಹೋಮ–ಹವನ; ಸೀತೆ ಪುನೀತೆ' ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 16:29 IST
Last Updated 22 ಜನವರಿ 2024, 16:29 IST
ಹಾವೇರಿ ನಗರದಲ್ಲಿ ಮಹಾರಾಣಾ ಪ್ರತಾಪಸಿಂಗ್‌ ರಜಪೂತ ಸಮಾಜ ವತಿಯಿಂದ ಕರಸೇವಕರನ್ನು ಸೋಮವಾರ ಸನ್ಮಾನಿಸಲಾಯಿತು. ಅಧ್ಯಕ್ಷ ಮೋಹನ್‌ಸಿಂಗ್‌ ಹಾಗೂ ಪದಾಧಿಕಾರಿಗಳು ಇದ್ದಾರೆ 
ಹಾವೇರಿ ನಗರದಲ್ಲಿ ಮಹಾರಾಣಾ ಪ್ರತಾಪಸಿಂಗ್‌ ರಜಪೂತ ಸಮಾಜ ವತಿಯಿಂದ ಕರಸೇವಕರನ್ನು ಸೋಮವಾರ ಸನ್ಮಾನಿಸಲಾಯಿತು. ಅಧ್ಯಕ್ಷ ಮೋಹನ್‌ಸಿಂಗ್‌ ಹಾಗೂ ಪದಾಧಿಕಾರಿಗಳು ಇದ್ದಾರೆ    

ಹಾವೇರಿ: ‘ಶ್ರೀರಾಮ ಜಯರಾಮ ಜಯಜಯ ರಾಮ’ ಎಂಬ ರಾಮ ಜಪ ಸೋಮವಾರ ಜಿಲ್ಲೆಯಾದ್ಯಂತ ಅನುರಣಿಸಿತು. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ಬಾಲರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಎಲ್ಲೆಡೆ ಹಬ್ಬದ ವಾತಾವಣ ನಿರ್ಮಾಣವಾಗಿತ್ತು. 

ನಗರದ ರಾಮ ಮಂದಿರ, ಆಂಜನೇಯ ದೇವಸ್ಥಾನ ಸೇರಿದಂತೆ ವಿವಿಧ ದೇಗುಲ, ಪ್ರಮುಖ ವೃತ್ತಗಳಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಜನರು ಭಕ್ತಿ ಸಿಂಚನದಲ್ಲಿ ಮಿಂದು ಪುಳಕಿತರಾದರು. ವಿದ್ಯುತ್ ಅಲಂಕಾರದಿಂದ ಸಿಂಗರಿಸಿದ್ದ ನಗರದ ವಿವಿಧ ದೇವಸ್ಥಾನಗಳಲ್ಲಿ ಬೆಳ್ಳಂಬೆಳಗ್ಗೆ ವಿಶೇಷ ಪೂಜೆ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಇಡೀ ದಿನ ನಡೆದವು.

ಜೈಶ್ರೀರಾಮ್‌ ಘೋಷಣೆ: ಶ್ರೀ ರಾಮ ಹಾಗೂ ಹನುಮನ ಧ್ವಜ ಹಿಡಿದುಕೊಂಡು ರಾಮ ಭಕ್ತರು ಜೈ ಶ್ರೀರಾಮ್‌, ಜೈ ಹನುಮಾನ್‌ ಎಂದು ಘೋಷಣೆ ಕೂಗಿ ಭಕ್ತಿಯ ಪರಾಕಾಷ್ಠೆ ಮೆರೆದರು. ಪ್ರತಿ ಮನೆ– ಮನೆಗಳಲ್ಲೂ ವಿಶೇಷವಾಗಿ ರಾಮನ ಪೂಜೆ, ಸ್ಮರಣೆಗಳು ನಡೆದವು. ಹಿಂದೂಗಳ ಮನೆಯಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಕಂಡು ಬಂದಿತು.

ADVERTISEMENT

ರಾಮತಾರಕ ಮಹಾಯಜ್ಞ: ಹಾವೇರಿ ತಾಲ್ಲೂಕು ಬ್ರಾಹ್ಮಣ ಸಮಾಜ ಮತ್ತು ಅಖಿಲ ಕರ್ನಾಟ ತ್ರಿಮತಸ್ಥ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್‌ ಸಹಯೋಗದಲ್ಲಿ ನಗರದ ಶ್ರೀರಾಮ ಮಂದಿರದಲ್ಲಿ ರಾಮ ತಾರಕ ಮಹಾಯಜ್ಞ ನಡೆಸಿದರು. ಬೆಳಿಗ್ಗೆ 8ಕ್ಕೆ ಶ್ರೀರಾಮನಿಗೆ ಅಭಿಷೇಕ, ತ್ರಯೋದಶ ಸಹಸ್ರ ಹೋಮ, ಮಧ್ಯಾಹ್ನ ಪೂರ್ಣಾಹುತಿ ನಡೆಯಿತು.

ಮಧ್ಯಾಹ್ನ 12.35ಕ್ಕೆ ಪೂರ್ಣಾಹುತಿ, ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ರಾಮ, ಸೀತೆ, ಲಕ್ಷ್ಮಣ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಯೋಧ್ಯೆಯಲ್ಲಿ ಜರುಗಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ವೀಕ್ಷಣೆಗಾಗಿ ಬೃಹತ್ ಟಿವಿ ಅಳವಡಿಸಲಾಗಿತ್ತು. 

ಸೀತೆ ಪುನೀತೆ ನಾಟಕ: ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಿಸಲಾಯಿತು. ಸಂಜೆ ಮಹಿಳಾ ಮಂಡಳದವರಿಂದ ರಾಮಾಯಣದ ಆಯ್ದಭಾಗ, ‘ಸೀತೆ ಪುನೀತೆ' ನಾಟಕ ಪ್ರದರ್ಶನಗೊಂಡಿತು. ರಾಮಜನ್ಮದ ಗೀತೆಯೊಂದಿಗೆ ಕೋಲಾಟ, ಅಷ್ಟಾವಧಾನ, ಮಹಾಮಂಗಳಾರತಿ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.

ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗಾಯತ್ರಿ ತಪೋಭೂಮಿಯಲ್ಲಿ ಅಯೋಧ್ಯೆ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿದವು. ಬೆಳಗ್ಗೆ ರಾಮ ತಾರಕ ಹಾಗೂ ಗಾಯತ್ರಿ ಹೋಮ, ಶ್ರೀ ರಾಮ ಭಜನೆ, ರಾಮ ರಕ್ಷ ಪಠಣ, ಹನುಮಾನ್ ಚಾಲೀಸ್ ಪಾಠಣ ನಡೆಯಲಿತು. ಸಂಜೆ 7ಕ್ಕೆ ವಿಜೃಂಭಣೆಯಿಂದ ದೀಪೋತ್ಸವ ನಡೆಯಿತು.

ಜಿಲ್ಲೆಯ ಜನತೆ ದಿನವಿಡೀ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಜೆ ಮನೆಗಳಲ್ಲಿ ದೀಪ ಬೆಳಗುವ ಮೂಲಕ ಧನ್ಯತಾ ಭಾವ ಮೆರೆದರು.

ಹಾವೇರಿ ನಗರದ ಶ್ರೀರಾಮ ಮಂದಿರದಲ್ಲಿ ಸೋಮವಾರ ಹಾವೇರಿ ತಾಲ್ಲೂಕು ಬ್ರಾಹ್ಮಣ ಸಮಾಜದ ವತಿಯಿಂದ ರಾಮ ತಾರಕ ಮಹಾಯಜ್ಞ ನಡೆಯಿತು 
ಹಾವೇರಿ ನಗರದ ಶ್ರೀರಾಮ ಮಂದಿರದಲ್ಲಿ ಮಹಿಳೆಯರು ರಾಮ ನಾಮ ಜಪಿಸಿದರು 
ಹಾವೇರಿ ನಗರದಲ್ಲಿ ಭಕ್ತರಿಗೆ ಪಾನಕ ವಿತರಿಸಲಾಯಿತು 

Cut-off box - ಶ್ರೀರಾಮ ಭಾವಚಿತ್ರದ ಮೆರವಣಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಶ್ರೀರಾಮ ಭಾವಚಿತ್ರದ ಮೆರವಣಿಗೆ ಸೋಮವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಶ್ರೀರಾಮ ದೇವರ ಗುಡಿಯಿಂದ ಸಕಲ ವಾದ್ಯ ವೈಭವದೊಂದಿಗೆ ಆರಂಭಗೊಂಡ ಮೆರವಣಿಗೆ ಗದ್ದಿಗೇರ ಓಣಿ ಕಾಮಣ್ಣನ ಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶ್ರೀರಾಮ ದೇವರ ಗುಡಿಗೆ ಮರಳಿತು. ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಜೈ ಶ್ರೀರಾಮ ಘೋಷಣೆ ಕೂಗಿ ಧನ್ಯತಾಭಾವ ಮೆರೆದರು.

Cut-off box - ಕರಸೇವಕರಿಗೆ ಸನ್ಮಾನ ಹಾವೇರಿ ನಗರದಲ್ಲಿ ಶ್ರೀ ಮಹಾರಾಣಾ ಪ್ರತಾಪಸಿಂಗ್‌ ರಜಪೂತ ಸಮಾಜ ವತಿಯಿಂದ ಕರ ಸೇವಕರಾದ ಕಮಲಾಕರ ಹೆಗಡೆ ಬಾಬಣ್ಣ ವೀರಪ್ಪ ಅಂಗಡಿ ಶಿವಾನಂದ ಕಟ್ಟಿಮನಿ ಶಿವಾನಂದ ಮಾಳಿ ನಿಂಗಪ್ಪ ಗುದಗಿ ಅವರನ್ನು ಸನ್ಮಾನಿಸಲಾಯಿತು.  ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಜಪೂತ ಸಮಾಜದ ಅಧ್ಯಕ್ಷ ಮೋಹನಸಿಂಗ್‌ ಉಪಾಧ್ಯಕ್ಷರಾದ ಲಕ್ಷ್ಮಣಸಿಂಗ್‌ ಕಾರ್ಯದರ್ಶಿ ಸಂತೋಷಸಿಂಗ್‌ ಸದಸ್ಯರಾದ ಭೀಮಸಿಂಗ್ ನವೀನಸಿಂಗ್‌ ಜೀವನಸಿಂಗ್‌ಜಯಸಿಂಗ್‌ ನಾಗರಾಜಸಿಂಗ್‌ ಪ್ರಕಾಶಸಿಂಗ್‌ ಪ್ರಸನ್ನಸಿಂಗ್‌ಪ್ರಕಾಶಸಿಂಗ್‌ ಅನಂತಸಿಂಗ್‌ ಗಿರಿಧರಸಿಂಗ್‌ ಇನ್ನೂ ಅನೇಕ ಜನ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.