ADVERTISEMENT

ರಾಣೆಬೆನ್ನೂರು: ನಗರಸಭೆ ಕ್ರೀಡಾಂಗಣದಲ್ಲಿ ಮೈದಳೆದ ಅಯೋಧ್ಯೆ ರಾಮಮಂದಿರ

ಮುಕ್ತೇಶ ಕೂರಗುಂದಮಠ
Published 25 ಸೆಪ್ಟೆಂಬರ್ 2023, 4:48 IST
Last Updated 25 ಸೆಪ್ಟೆಂಬರ್ 2023, 4:48 IST
ರಾಣೆಬೆನ್ನೂರಿನ ನಗರಸಭೆ ಕ್ರೀಡಾಂಗಣದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯಿಂದ ನಿರ್ಮಿಸಲಾದ ಅಯೋಧ್ಯಾ ರಾಮಮಂದಿರ
ರಾಣೆಬೆನ್ನೂರಿನ ನಗರಸಭೆ ಕ್ರೀಡಾಂಗಣದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯಿಂದ ನಿರ್ಮಿಸಲಾದ ಅಯೋಧ್ಯಾ ರಾಮಮಂದಿರ   

ರಾಣೆಬೆನ್ನೂರು: ಇಲ್ಲಿನ ನಗರಸಭೆ ಕ್ರೀಡಾಂಗಣದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯಿಂದ 15 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ‘ರಾಣೆಬೆನ್ನೂರು ಕಾ ರಾಜಾ’ ಗಣೇಶೋತ್ಸವ ಮಂಟಪದಲ್ಲಿ ಅಯೋಧ್ಯಾಧಿಪತಿ ಶ್ರೀರಾಮಮಂದಿರವನ್ನು ನಿರ್ಮಿಸಲಾಗಿದೆ.

ಬೆಂಗಳೂರಿನ ಇಂದ್ರಲೋಕ ಆರ್ಟ್‌ ಸ್ಟುಡಿಯೊದ ಇಂದ್ರಕುಮಾರ್‌ ಎಚ್‌.ಕೆ ಮತ್ತು ಮೀಡಿಯಾ ಮಾಸ್ಟರ್‌ ಎಂ.ಎಸ್‌. ರಾಘವೇಂದ್ರ ಹಾಗೂ  30 ಕಲಾವಿದರ ತಂಡ ಎರಡು ತಿಂಗಳ ಕಾಲ ಶ್ರಮಿಸಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರದ ಮಾದರಿಯನ್ನು ನಿರ್ಮಿಸಿದ್ದಾರೆ.

ನಗರಸಭೆ ಕ್ರೀಡಾಂಗಣದಲ್ಲಿ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯಿಂದ ನಿರ್ಮಿಸಲಾದ ‘ರಾಣೆಬೆನ್ನೂರು ಕಾ ರಾಜಾ’ ಬೃಹತ್‌ ವಿಘ್ನೇಶ್ವರ ಮೂರ್ತಿ

ಅಂದಾಜು ₹ 1.5 ಕೋಟಿ ಅಂದಾಜು ವೆಚ್ಚದಲ್ಲಿ ಅಯೋಧ್ಯೆ ರಾಮಮಂದಿರದ ಮಾದರಿಯನ್ನು ನಿರ್ಮಿಸಿರುವುದು ಭಕ್ತರನ್ನು ಕೈ ಬೀಸಿ ಕರೆಯುತ್ತಿದೆ. ನಾಗರ ಶೈಲಿಯ ರಾಮಮಂದಿರವನ್ನು ನಿರ್ಮಿಸಲಾಗಿದೆ. ಪೂರ್ವದಲ್ಲಿ ಪ್ರವೇಶದ್ವಾರವನ್ನು ಗೋಪುರ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದು ದಕ್ಷಿಣದ ದೇವಾಲಯಗಳನ್ನು ಪ್ರತಿನಿಧಿಸುತ್ತದೆ. ದೇವಾಲಯದ ಗೋಡೆಗಳು ಭಗವಾನ್ ರಾಮನ ಜೀವನವನ್ನು ಚಿತ್ರಿಸುವ ಕಲಾಕೃತಿಗಳನ್ನು ಪ್ರದರ್ಶಿಸುತ್ತವೆ.

ADVERTISEMENT

ಮಂದಿರದ ಗರ್ಭಗೃಹವು ಅಷ್ಟಭುಜಾಕೃತಿಯಲ್ಲಿದ್ದರೆ, ರಚನೆಯ ಪರಿಧಿಯು ವೃತ್ತಾಕಾರವಾಗಿದೆ. ಮಂದಿರವು ಐದು ಗುಮ್ಮಟಗಳನ್ನು ಮತ್ತು ಎತ್ತರದ ಒಂದು ಗೋಪುರವನ್ನು ಹೊಂದಿದೆ. ಮೇಲಂತಸ್ತು ಮಾಡಲಾಗಿದೆ. ಗರ್ಭ ಗೃಹ – ರಾಮನ ವಿಗ್ರಹದ ಮೇಲೆ ಸೂರ್ಯನ ಕಿರಣಗಳು ಬೀಳುವಂತೆ ನಿರ್ಮಿಸಲಾಗಿದೆ. ಗರ್ಭಗುಡಿಯಂತೆ, ಗೃಹ ಮಂಟಪ, ಕೀರ್ತನ ಮಂಟಪ, ನೃತ್ಯ ಮಂಟಪ, ರಂಗ ಮಂಟಪ ಮತ್ತು ಎರಡು ಪ್ರಾರ್ಥನಾ ಮಂಟಪಗಳಿವೆ. ಒಳಭಾಗದಲ್ಲಿ ರಾಮ, ಲಕ್ಷ್ಮಣ, ಸೀತಾದೇವಿ ಹಾಗೂ ಆಂಜನೇಯನ ವಿಗ್ರಹಗಳು ಕಂಗೊಳಿಸುತ್ತಿವೆ.

ದೇವಾಲಯದ ಮಾದರಿಯನ್ನು ನೋಡಲು ರಾಜ್ಯದ ವಿವಿಧೆಡೆಗಳಿಂದ ಜನ ಬರುತ್ತಿದ್ದಾರೆ. ಮಹಿಳೆಯರಿಗೆ ಬಸ್‌ ಟಿಕೆಟ್‌ ಉಚಿತವಾಗಿರುವುದರಿಂದ ಗ್ರಾಮೀಣ ಪ್ರದೇಶದಿಂದ ಮಹಿಳೆಯರ ತಂಡವೇ ಹೆಚ್ಚು ಕಾಣುತ್ತಿದೆ. ಪ್ರದರ್ಶನ ವೀಕ್ಷಣೆ ಪ್ರತಿ ದಿನ ಸಂಜೆ 6 ರಿಂದ ರಾತ್ರಿ 10ರವರೆಗೆ ಇದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ. ಅ. 14 ರಂದು ಬೃಹತ್‌ ಶೋಭಾಯಾತ್ರೆಯ ಮೂಲಕ ಗಣೇಶ ವಿಸರ್ಜನೆ ನಡೆಯಲಿದೆ ಎಂದು ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಸಂಸ್ಥೆ ತಿಳಿಸಿದೆ.

ನಗರಸಭೆ ಕ್ರೀಡಾಂಗಣದಲ್ಲಿ ನಿರ್ಮಿಸಲಾದ ರಾಮಮಂದಿರ ಮಾದರಿ

ಸಂಸ್ಥೆಯು 2008 ರಲ್ಲಿ ಸ್ಥಾಪನೆಯಾಗಿದ್ದು ಶಿಕ್ಷಣ, ಗಣೇಶೋತ್ಸವಕ್ಕೆ ಸೀಮಿತವಾಗದೇ ಹಿಂದೂ ಸಂಘಟನೆ, ಅರಿವು, ಶಿಕ್ಷಣ, ಕ್ರೀಡೆ ಸೇರಿದಂತೆ ಜನೋಪಕಾರಿ ಕೆಸಲಗಳನ್ನು ಮಾಡುತ್ತಿದೆ. 8 ವರ್ಷಗಳಿಂದ ವಿಘ್ನೇಶ್ವರ ಮಂಟಪ, ಸನ್ನಿವೇಶಗಳನ್ನು ಬಿಂಬಿಸುವ ಕಲಾಕೃತಿಗಳು ಹಾಗೂ ಬೃಹದಾಕಾರದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಸಾಮೂಹಿಕ ವಿವಾಹ, ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೊಂದ ಬಡಜನರ, ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಸಂಘಟನೆ, ಶಿಕ್ಷಣ ಮತ್ತು ಸೇವೆ ಈ ಮೂರು ಧ್ಯೇಯದೊಂದಿಗೆ ಸಂಸ್ಥೆ ಕರ್ತವ್ಯ ನಿರ್ವಹಿಸುತ್ತಿದೆ ಎಂದು ವಂದೇ ಮಾತರಂ ಸ್ವಯಂ ಸಂಸ್ಥೆ ಅಧ್ಯಕ್ಷ ಪ್ರಕಾಶ ಬುರಡೀಕಟ್ಟಿ ತಿಳಿಸಿದರು.

ರಾಣೆಬೆನ್ನೂರಿನ ಅಯೋಧ್ಯೆ ರಾಮಮಂದಿರ ಮಾದರಿಯಲ್ಲಿ ರಾಮ ಲಕ್ಷ್ಮಣ ಸೀತಾದೇವಿ ಆಂಜನೇಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ
ಯುವ ಪೀಳಿಗೆಯಲ್ಲಿ ದೇಶದ ಧರ್ಮ ಸಂಸ್ಕೃತಿಯ ಜತೆಗೆ ರಾಮಾಯಣ- ಮಹಾಭಾರದ ಕಥಾನಕಗಳ ಬಗ್ಗೆ ತಿಳಿಸಬೇಕಿದೆ. ಸನಾತನ ಸಂಸ್ಕೃತಿ ಉಳಿಸಿ ಬೆಳೆಸಬೇಕಿದೆ
- ಪ್ರಕಾಶ ಬುರಡೀಕಟ್ಟಿ, ನಗರಸಭೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.