ADVERTISEMENT

ಬಾಗಿಲು ಮುಚ್ಚಿದ ಅಕ್ಕ ಕೆಫೆ: ಲಿಂಗತ್ವ ಅಲ್ಪಸಂಖ್ಯಾತರು ನಡೆಸುತ್ತಿದ್ದ ಹೋಟೆಲ್

ಸಂತೋಷ ಜಿಗಳಿಕೊಪ್ಪ
Published 19 ಫೆಬ್ರುವರಿ 2026, 5:27 IST
Last Updated 19 ಫೆಬ್ರುವರಿ 2026, 5:27 IST
ಹಾವೇರಿ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಆರಂಭಿಸಿದ್ದ ಅಕ್ಕ ಕೆಫೆ ಬಾಗಿಲು ಬಂದ್ ಆಗಿರುವುದು
ಹಾವೇರಿ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಆರಂಭಿಸಿದ್ದ ಅಕ್ಕ ಕೆಫೆ ಬಾಗಿಲು ಬಂದ್ ಆಗಿರುವುದು   

ಹಾವೇರಿ: ರಾಜ್ಯದಲ್ಲಿಯೇ ಮೊದಲ ಬಾರಿಗೆ ಸರ್ಕಾರದ ನೆರವಿನಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ನಡೆಸುತ್ತಿದ್ದ ಅಕ್ಕ ಕೆಫೆ, ನಿರ್ವಹಣೆ ಕೊರತೆಯಿಂದ ಬಾಗಿಲು ಮುಚ್ಚಿದೆ.

ಜಿಲ್ಲೆಯಲ್ಲಿರುವ ಲಿಂಗತ್ವ ಅಲ್ಪಸಂಖ್ಯಾತರ ಸ್ವಾವಲಂಬಿ ಬದುಕಿಗೆ ಆಸರೆಯಾಗಿ ಆರಂಭಿಸಿದ್ದ ‘ಅಕ್ಕ ಕೆಫೆ’, ಆರಂಭಗೊಂಡ ಒಂದೇ ವರ್ಷದಲ್ಲಿ ಬಂದ್ ಆಗಿದೆ. 

ನಗರದ ಹೊರವಲಯದಲ್ಲಿರುವ ಜಿಲ್ಲಾ ಪಂಚಾಯಿತಿ ಕಟ್ಟಡದ ನೆಲಮಹಡಿಯಲ್ಲಿ ಸುಸಜ್ಜಿತ ಸೌಲಭ್ಯದೊಂದಿಗೆ 2025ರ ಜನವರಿಯಲ್ಲಿ ಅಕ್ಕ ಕೆಫೆ ಆರಂಭಿಸಲಾಗಿತ್ತು. ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದ ಸಂಘದ ಸದಸ್ಯರ ನಡುವಿನ ಕೆಲ ವಿಚಾರಗಳಿಂದಾಗಿ ಕೆಫೆಗೆ ಈ ಸ್ಥಿತಿ ಬಂದೊದಗಿದೆ.

ADVERTISEMENT

ಕೆಫೆ ನಿರ್ವಹಣೆಗಾಗಿ ಐವರು ಲಿಂಗತ್ವ ಅಲ್ಪಸಂಖ್ಯಾತರಿಗೆ ತರಬೇತಿ ನೀಡಲಾಗಿತ್ತು. ಈ ಐವರು, ನಿತ್ಯವೂ ಕೆಫೆ ನಿರ್ವಹಣೆ ಮಾಡುತ್ತಿದ್ದರು. ಅವರ ಜೊತೆಗೆ ಇತರೆ ಸಿಬ್ಬಂದಿ ಸಹಕಾರ ನೀಡುತ್ತಿದ್ದರು. ಆದರೆ, ಆರ್ಥಿಕ ಹೊರೆ ಹಾಗೂ ಇತರೆ ಸಮಸ್ಯೆಗಳು ಕೆಫೆ ಬಾಗಿಲು ಮುಚ್ಚುವಂತೆ ಮಾಡಿವೆ.

ಕೆಫೆ ನಿರ್ವಹಣೆ ಸಂಘದ ಪ್ರಮುಖ ಮುಖಂಡರೊಬ್ಬರು, ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದರು. ಈ ಘಟನೆಯಿಂದಾಗಿ ಉಳಿದ ಸದಸ್ಯರು ಮುಜುಗುರಕ್ಕೆ ಒಳಗಾದರು. ನಂತರ, ಕೆಫೆ ನಿರ್ವಹಣೆ ಆಸಕ್ತಿ ಕಳೆದುಕೊಂಡರು. ತರಬೇತಿ ಪಡೆದವರು ಆಸಕ್ತಿ ತೋರಿಸಿದರೂ, ಇತರರು ಕೆಫೆ ನಿರ್ವಹಣೆಗೆ ನಿರಾಸಕ್ತಿ ತೋರಿದರು. ಇದೇ ಕಾರಣಕ್ಕೆ, ಕೆಫೆಯ ವಹಿವಾಟು ಸಂಪೂರ್ಣ ಬಂದ್ ಆಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ಕರ್ನಾಟಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ರಾಷ್ಟ್ರೀಯ ಜೀವನೋಪಾಯ ಮಿಷನ್ (ಎನ್‌ಎಲ್‌ಎಂ) ಅಡಿ ಬೆಂಗಳೂರಿನ ಗಾಂಧಿನಗರದ ‌ಪಂಚಾಯತ್ ರಾಜ್ ಆಯುಕ್ತಾಲಯದ ಆವರಣದಲ್ಲಿ ಮೊದಲ ‘ಅಕ್ಕ ಕೆಫೆ’ ಉದ್ಘಾಟಿಸಲಾಗಿತ್ತು. ಈ ಕೆಫೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದರಿಂದ, ರಾಜ್ಯದ ಹಲವು ಜಿಲ್ಲೆಗಳಿಗೂ ವಿಸ್ತರಿಸಲಾಗಿತ್ತು. ಹಾವೇರಿಯಲ್ಲಿಯೂ ಅಕ್ಕ ಕೆಫೆ ನಿರ್ಮಿಸಲಾಗಿತ್ತು.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಹಾವೇರಿಯ ಅಕ್ಕ ಕೆಫೆಯನ್ನು ಮೀಸಲಿಡಲಾಗಿತ್ತು. ಆರಂಭದ ದಿನದಿಂದಲೇ ಆಹಾರ ತಯಾರಿಗೆಗೆ ಕೆಫೆ ಹೆಸರು ಮಾಡಿತ್ತು. ಜಿಲ್ಲಾ ಪಂಚಾಯಿತಿ ಕಾರ್ಯಕ್ರಮ, ಸಭೆಗಳಿಗೆ ಇದೇ ಕೆಫೆಯಿಂದ ಆಹಾರ ಸರಬರಾಜು ಆಗುತ್ತಿತ್ತು. ಆದರೆ, ಕ್ರಮೇಣ ಕೆಫೆಯ ನಿರ್ವಹಣೆ ಕಷ್ಟವಾಯಿತು.

ಕೆಫೆ ಬಂದ್ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್, ‘ಲಿಂಗತ್ವ ಅಲ್ಪಸಂಖ್ಯಾತರ ಸ್ವಾವಲಂಬಿ ಜೀವನಕ್ಕಾಗಿ ಅಕ್ಕ ಕೆಫೆ ಆರಂಭಿಸಲಾಗಿತ್ತು. ನಿರ್ವಹಣೆಯಲ್ಲಿ ಉಂಟಾದ ಕೆಲಸ ಸಮಸ್ಯೆಗಳಿಂದಾಗಿ ಈಗ ಕೆಫೆ ತಾತ್ಕಾಲಿಕವಾಗಿ ಬಂದ್ ಆಗಿದೆ’ ಎಂದು ಹೇಳಿದರು.

‘ನಿರ್ವಹಣೆ ಜವಾಬ್ದಾರಿ ಹೊತ್ತುಕೊಂಡಿದ್ದವರು, ಕೆಫೆ ನಡೆಸಲು ಆಗುವುದಿಲ್ಲವೆಂದು ಹಿಂದೆ ಸರಿದಿದ್ದಾರೆ. ಈಗ ಕೆಲ ಲಿಂಗತ್ವ ಅಲ್ಪಸಂಖ್ಯಾತರೇ, ಕೆಫೆ ಆರಂಭಿಸಲು ಮುಂದೆ ಬಂದಿದ್ದಾರೆ. ಅವರನ್ನು ಪರಿಗಣಿಸಿ ಪುನಃ ಕೆಫೆ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ’ ಎಂದರು.

ಸುಸಜ್ಜಿತ ವ್ಯವಸ್ಥೆ: ಹೋಟೆಲ್‌ಗಿಂತಲೂ ಭಿನ್ನವಾದ ಸುಸಜ್ಜಿತ ವ್ಯವಸ್ಥೆಗಳ ಮೂಲಕ ಕೆಫೆಯನ್ನು ನಿರ್ಮಿಸಲಾಗಿತ್ತು. ಸೂಕ್ತ ಆಸನಗಳನ್ನು ಮಾಡಲಾಗಿತ್ತು. ಕೆಫೆ ಹೊರಭಾಗದಲ್ಲೂ ಸುಂದರ ಉದ್ಯಾನ ಹಾಗೂ ಅದರಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಅದರ ಬಳಿಯೇ ನಂದಿನಿ ಪಾರ್ಲರ್ ಸಹ ತೆರೆಯಲಾಗಿತ್ತು. ಪಾರ್ಲರ್ ಸಹ ಬಾಗಿಲು ಮುಚ್ಚಿದೆ.

ಕೆಫೆ ಒಳಭಾಗದಲ್ಲಿ ಅಡುಗೆ ಮನೆ, ಆಹಾರ ನೀಡುವ ಕೌಂಟರ್, ಶೌಚಾಲಯ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಭದ್ರತೆ ದೃಷ್ಟಿಯಿಂದ ಕೆಫೆಯ ಒಳಭಾಗ ಹಾಗೂ ಹೊರಭಾಗದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು. ಕೆಫೆಯ ಪ್ರವೇಶ ದ್ವಾರದಲ್ಲಿರುವ ಗೋಡೆಗಳಿಗೆ ಜನಪದ ಶೈಲಿಯ ಚಿತ್ರಗಳನ್ನು ಬಿಡಿಸಲಾಗಿತ್ತು. 

ರುಚಿ ಬಿಂದಲ್
ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅಕ್ಕ ಕೆಫೆ ಹೆಚ್ಚು ಅನುಕೂಲ. ಬಂದ್ ಆಗಿರುವ ಕೆಫೆಯನ್ನು ಆದಷ್ಟು ಬೇಗ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ
ರುಚಿ ಬಿಂದಲ್ ಜಿಲ್ಲಾ ಪಂಚಾಯಿತಿ ಸಿಇಒ

ರಾಣೆಬೆನ್ನೂರಿನಲ್ಲೂ ಹೊಸ ‘ಅಕ್ಕ ಕೆಫೆ’

ಹಾವೇರಿ ಅಕ್ಕ ಕೆಫೆ ಮಾದರಿಯಲ್ಲಿಯೇ ರಾಣೆಬೆನ್ನೂರಿನಲ್ಲೂ ಅಕ್ಕ ಕೆಫೆ ಆರಂಭಿಸಲು ಜಿಲ್ಲಾ ಪಂಚಾಯಿತಿ ತಯಾರಿ ನಡೆಸುತ್ತಿದೆ. ನ್ಯಾಯಾಲಯದ ಸಮೀಪದಲ್ಲಿ ಈಗಾಗಲೇ ಜಾಗ ಗುರುತಿಸಲಾಗಿದೆ. ಈ ಬಾರಿ ಅಂಗವಿಕಲ ಮಹಿಳೆಯರಿಗೆ ನಿರ್ವಹಣೆ ಜವಾಬ್ದಾರಿ ವಹಿಸಲು ತೀರ್ಮಾನಿಸಲಾಗಿದೆ. ‘ದುಡಿಯುವ ಮಹಿಳೆಯರಿಗೆ ಕೆಲಸ ಒದಗಿಸಲು ಹಾಗೂ ಅವರು ಸ್ವಾವಲಂಬಿ ಜೀವನ ನಡೆಸುವಂತೆ ಮಾಡುವುದು ಅಕ್ಕ ಕೆಫೆಯ ಉದ್ದೇಶ. ರಾಣೆಬೆನ್ನೂರಿನಲ್ಲೂ ಈಗ ಅಕ್ಕ ಕೆಫೆ ಮಾಡಲಾಗುತ್ತಿದ್ದು ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಅಂಗವಿಕಲರಿಗೆ ಕೆಫೆ ನಿರ್ವಹಣೆ ನೀಡಲಾಗುತ್ತಿದೆ’ ಎಂದು ಸಿಇಒ ರುಚಿ ಬಿಂದಲ್ ತಿಳಿಸಿದರು.

‘ಲಾಭಕ್ಕಿಂತ ನಷ್ಟವೇ ಹೆಚ್ಚು’ ‘

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿಗೆ ಬಂದು ಹೋಗುವ ಜನರ ಸಂಖ್ಯೆ ಕಡಿಮೆ. ಈ ಸ್ಥಳದಲ್ಲಿ ಈಗಾಗಲೇ ಎರಡು ಹೋಟೆಲ್‌ಗಳಿವೆ. ಇದರಿಂದಾಗಿ ಅಕ್ಕ ಕೆಫೆ ಲಾಭಕ್ಕಿಂತ ನಷ್ಟವನ್ನೇ ಅನುಭವಿಸಬೇಕಾಯಿತು’ ಎಂದು ಮೂಲಗಳು ಹೇಳಿವೆ. ‘ನಿರ್ವಹಣೆಗೆ ಕೈಯಿಂದ ಹಣ ಭರಿಸಬೇಕಿತ್ತು. ಲಾಭ ಬಂದರೆ ಮಾತ್ರ ಕೆಫೆ ನಡೆಸಲು ಅನುಕೂಲವಾಗುತ್ತಿತ್ತು. ದಿನವೂ ನಷ್ಟವಾದರೆ ಕೆಫೆಯನ್ನು ನಡೆಸುವುದು ಹೇಗೆ? ಇಂಥ ಹಲವು ಕಾರಣಗಳಿಂದ ಈಗ ಕೆಫೆ ಬಂದ್ ಮಾಡುವ ಸ್ಥಿತಿ ಬಂತು’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.