
ಬ್ಯಾಡಗಿ : ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆಗೆ ಗುರುವಾರ ಕೇವಲ 8,886 ಚೀಲ (2,221 ಕ್ವಿಂಟಲ್) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಕುಸಿತವಾಗಿದೆ.
ಮಾರುಕಟ್ಟೆಗೆ ಕಳೆದ ಸೋಮವಾರ 13,790 ಚೀಲ (3,447 ಕ್ವಿಂಟಲ್) ಮೆಣಸಿನಕಾಯಿ ಆವಕವಾಗಿತ್ತು. ಪ್ರಸಕ್ತ ಹಂಗಾಮು ಕೊನೆಯ ಹಂತಕ್ಕೆ ತಲುಪಿದ್ದು, ಆವಕ ಇಳಿಕೆಯತ್ತ ಸಾಗಿದೆ. ಮಾರಾಟಕ್ಕೆ ತರುವ ಮೆಣಸಿನಕಾಯಿ ಗುಣಮಟ್ಟದ ಕೊರತೆ ಎದುರಿಸುತ್ತಿದ್ದು, ನೋ ಬಿಡ್‌ಗಳ ಸಂಖ್ಯೆ ಸಹ ಹೆಚ್ಚುತ್ತಿದೆ. ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹವಿರುವ ಮೆಣಸಿನಕಾಯಿಯಲ್ಲಿ ಅಲ್ಪಸ್ವಲ್ಪ ಮಾರಾಟ ಕೂಡಾ ನಡೆಯುತ್ತಿದೆ ಎನ್ನಲಾಗಿದೆ.
ಗುರುವಾರ 1,440 ಲಾಟ್ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 115 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. ಎರಡು ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹30,699 ರಂತೆ, 20 ಚೀಲ ಕಡ್ಡಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹27,009ರಂತೆ ಮತ್ತು ಗುಂಟೂರು ತಳಿ ₹17,429 ರಂತೆ ಗರಿಷ್ಟ ಬೆಲೆಯಲ್ಲಿ ಮಾರಾಟವಾಗಿವೆ. ಕಳೆದ ಸೋಮವಾರಕ್ಕಿಂತ ಡಬ್ಬಿ ಮೆಣಸಿನಕಾಯಿ ಗರಿಷ್ಠ ಬೆಲೆಯಲ್ಲಿ ಕ್ವಿಂಟಲ್‌ಗೆ ₹3 ಸಾವಿರ ಇಳಿಕೆಯಾಗಿದೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹28,009, ಬ್ಯಾಡಗಿ ಕಡ್ಡಿ ₹24,159 ಹಾಗೂ ಗುಂಟೂರ ತಳಿ ₹11,569 ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 172 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.