ಹಾವೇರಿ: ‘ವಾಸ್ತವ ಬದುಕಿನ ವಿಚಾರಗಳನ್ನು ಜನರಿಗೆ ತಿಳಿಸಲು ಗ್ರಾಮೀಣ ಕಲಾವಿದರು ಸೇರಿಕೊಂಡು ‘ಬ್ಯಾಡ್‌ಲಕ್’ ಸಿನಿಮಾ ನಿರ್ಮಿಸಲಾಗಿದ್ದು, ಇದೇ ನವೆಂಬರ್ 7ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ’ ಎಂದು ಚಿತ್ರದ ನಾಯಕ ನಟರೂ ಆಗಿರುವ ನಿರ್ದೇಶಕ ಮಂಜುನಾಥ ಬಾರ್ಕಿ ತಿಳಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಬ್ಯಾಡ್‌ಲಕ್’ ಸಿನಿಮಾ ಪೋಸ್ಟರ್ ಹಾಗೂ ವಿಡಿಯೊ ಹಾಡು ಬಿಡುಗಡೆಗೊಳಿಸಿದರು.
‘ಸಾಮಾನ್ಯ ಜನರ ಬದುಕಿನ ವಿವಿಧ ಮಜಲುಗಳು, ಮನಸ್ಸಿನ ಉತ್ಸುಕತೆ ಮತ್ತು ತಲ್ಲಣ, ಸಮಾಜದ ಆಚಾರ–-ವಿಚಾರಗಳನ್ನು ಇಟ್ಟುಕೊಂಡು ಕಥೆ ಬರೆಯಲಾಗಿದೆ. ಪ್ರೇಮ ಜೀವನದ ಆಸೆ-–ನಿರಾಶೆಗಳು, ಭರವಸೆಗಳು, ಬದುಕಿನ ತಲ್ಲಣಗಳು, ಮನರಂಜನೆ, ಸುಮಧುರ ಗೀತೆಗಳ ಮಾಧುರ್ಯ, ಕುತೂಹಲ ಭರಿತ ಪ್ರಸಂಗಗಳು, ನವೀರಾದ ಹಾಸ್ಯ ಸಿನಿಮಾದಲ್ಲಿದೆ’ ಎಂದು ಅವರು ಹೇಳಿದರು.
‘ಮೂರು ವರ್ಷಗಳ ಸಮಯ ಕಥೆ ಬರೆಯಲಾಗಿದೆ. 55 ದಿನಗಳ ಕಾಲ ಚಿತ್ರೀಕರಣ ಪೂರ್ಣಗೊಳಿಸಲಾಗಿದ್ದು, ಸಿನಿಮಾದ ಅಂತಿಮ ಕೆಲಸಗಳು ನಡೆಯುತ್ತಿವೆ. ಹಾವೇರಿ, ಮಂಡ್ಯ, ಬೆಂಗಳೂರು, ದಾವಣಗೆರೆ, ಶಿಗ್ಗಾವಿ, ಹುಬ್ಬಳ್ಳಿ ಹಾಗೂ ಇತರೆ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಎಲೆಮರೆ ಕಾಯಿಯಂತಿದ್ದ ಅಪ್ಪಟ ಗ್ರಾಮೀಣ ಕಲಾವಿದರನ್ನು ಗುರುತಿಸಿ ಚಿತ್ರದಲ್ಲಿ ಅವಕಾಶ ನೀಡಲಾಗಿದೆ. ನ. 7ರಂದು ಹಾವೇರಿ, ಹುಬ್ಬಳ್ಳಿ, ದಾವಣಗೆರೆ, ಚಿತ್ರದುರ್ಗ, ಮಂಡ್ಯ ಸೇರಿ ರಾಜ್ಯದ 22 ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ’ ಎಂದರು.
ಸಿನಿಮಾ ನಿರ್ಮಾಪಕ ಮಾಲತೇಶ ಬಾರ್ಕಿ, ಉಮೇಶ ಎಚ್., ಬಿ. ಮಹೇಶ, ಪೂರ್ಣಿಮಾ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.