ADVERTISEMENT

‘ಬಂಕಾಪುರ ತಾಲ್ಲೂಕು’ ಹೋರಾಟ: ಮತದಾನ ಬಹಿಷ್ಕಾರ?

ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆ ಹೊತ್ತಿನಲ್ಲಿ ಜನಾಗ್ರಹ * ಜನರ ಬಹುದಿನಗಳ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 16:00 IST
Last Updated 22 ಅಕ್ಟೋಬರ್ 2024, 16:00 IST
ಬಂಕಾಪುರ ಪಟ್ಟಣದ ಫಕ್ಕೀರೇಶ್ವರ ಮಂಗಲ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಸಭೆಯಲ್ಲಿ ಸಾಹಿತಿ ಎ.ಕೆ.ಆದವಾನಿಮಠ ಮಾತನಾಡಿದರು
ಬಂಕಾಪುರ ಪಟ್ಟಣದ ಫಕ್ಕೀರೇಶ್ವರ ಮಂಗಲ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ ಸಭೆಯಲ್ಲಿ ಸಾಹಿತಿ ಎ.ಕೆ.ಆದವಾನಿಮಠ ಮಾತನಾಡಿದರು   

ಶಿಗ್ಗಾವಿ: ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ, ಬಂಕಾಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕೆಂಬ ಹೋರಾಟ ಶುರುವಾಗಿದೆ.  ಬೇಡಿಕೆ ಈಡೇರದಿದ್ದರೆ, ಉಪ ಚುನಾವಣೆಯ ಮತದಾನ ಬಹಿಷ್ಕರಿಸಲು ಸ್ಥಳೀಯರು ಚಿಂತನೆ ನಡೆಸಿದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕು ವ್ಯಾಪ್ತಿಯ ಬಂಕಾಪುರ, ಸದ್ಯ ಪುರಸಭೆ ಹೊಂದಿದೆ. 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಪಟ್ಟಣವಾಗಿದೆ. ಬಂಕಾಪುರ ಸುತ್ತಮುತ್ತ 30ಕ್ಕೂ ಹೆಚ್ಚು ಹಳ್ಳಿಗಳಿವೆ. ಸವಣೂರು ತಾಲ್ಲೂಕಿನ ಕೆಲ ಗ್ರಾಮಗಳು ಸಹ, ಬಂಕಾಪುರ ಪಟ್ಟಣದ ಹತ್ತಿರದಲ್ಲಿವೆ. ಇದೇ ಕಾರಣಕ್ಕೆ, ಬಂಕಾಪುರವನ್ನು ತಾಲ್ಲೂಕು ಕೇಂದ್ರವೆಂದು ಘೋಷಣೆ ಮಾಡುವಂತೆ ಸ್ಥಳೀಯರು ಹೋರಾಟ ಆರಂಭಿಸಿದ್ದಾರೆ.

‘ತಾಲ್ಲೂಕು ಪುನರುತ್ಥಾನ ಹೋರಾಟ ಸಮಿತಿ’ ರಚಿಸಿಕೊಂಡಿರುವ ಸ್ಥಳೀಯರು, ಅದರ ಮೂಲಕ ಹೋರಾಟದ ರೂಪುರೇಷೆ ಸಿದ್ಧಪಡಿಸಿದ್ದಾರೆ. ಬಂಕಾಪುರ ತಾಲ್ಲೂಕು ಕೇಂದ್ರಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿರುವ ಸಮಿತಿಯ ಪದಾಧಿಕಾರಿಗಳು, ಉಪ ಚುನಾವಣೆ ಸಂದರ್ಭದಲ್ಲಿ ಹೋರಾಟವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ADVERTISEMENT

ಬಂಕಾಪುರ ಪಟ್ಟಣದ ಫಕ್ಕೀರೇಶ್ವರ ಮಂಗಲಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಿತಿಯ ಸಭೆಯಲ್ಲಿ ಮಾತನಾಡಿದ ಸಾಹಿತಿ ಎ.ಕೆ. ಆದವಾನಿಮಠ, ‘20 ವರ್ಷಗಳಿಂದ ತಾಲ್ಲೂಕು ರಚನೆಗಾಗಿ ಹೋರಾಟ ಮಾಡುತ್ತಿದ್ದೇವೆ. ಕ್ಷೇತ್ರದ ಜನಪ್ರತಿನಿಧಿಗಳು ಸ್ಪಂದಿಸದಿರುವುದು ನೋವಿನ ಸಂಗತಿ. ಹೀಗಾಗಿ, ತಾಲ್ಲೂಕು ಘೋಷಣೆ ಆಗುವವರೆಗೆ ನಿರಂತರವಾಗಿ ಹೋರಾಟ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದರು.

‘ನಮ್ಮ ಹೋರಾಟಕ್ಕೆ ಫಲ ಸಿಗಬೇಕು. ಹೋರಾಟವನ್ನೂ ಬಿಗಿಗೊಳಿಸಬೇಕು. ಬಂಕಾಪುರದ ಸಮಗ್ರ ಅಭಿವೃದ್ಧಿ ಹಾಗೂ ತಾಲ್ಲೂಕು ಕೇಂದ್ರಕ್ಕಾಗಿ ಉಪ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಅಕ್ಟೋಬರ್ 25ರಂದು ಮಧ್ಯಾಹ್ನ 3 ಗಂಟೆಗೆ ಬಂಕಾಪುರದ ರೇಣುಕಾ ಪ್ಯಾಲೇಸ್ ಸಭಾಭವನದಲ್ಲಿ ಬಹಿರಂಗ ಸಭೆ ಕರೆಯಲಾಗಿದೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು, ವ್ಯಾಪಾರಸ್ಥರು, ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ’ ಎಂದರು.

‘ಬಂಕಾಪುರ, ಐತಿಹಾಸಿಕ ಹಿನ್ನೆಲೆಯುಳ್ಳ ಪಟ್ಟಣ. ರಾಷ್ಟ್ರಕೂಟರಿಂದ ನವಾಬರ ಕಾಲದವರೆಗೆ 800 ವರ್ಷಗಳ ಕಾಲ ರಾಜಧಾನಿಯಾಗಿ ಮೆರೆದ ಪಟ್ಟಣ. 1951ರವರೆಗೆ ತಾಲ್ಲೂಕಾ ಕೇಂದ್ರ ಸಹ ಆಗಿತ್ತು. ಬಂಕಾಪುರದ ಇತಿಹಾಸವನ್ನು ಪುನರುತ್ಥಾನಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ಶಾಸಕರೂ ಆಗಿದ್ದ ಇಂದಿನ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ, ಇದುವರೆಗೂ ನಮ್ಮ ಬೇಡಿಕೆ ಈಡೇರಿಲ್ಲ’ ಎಂದು ದೂರಿದರು.

ಮುಖಂಡ ಮಂಜುನಾಥ ಕೂಲಿ ಮಾತನಾಡಿ, ‘ಹುಬ್ಬಳ್ಳಿಯ ಬಂಕಾಪುರ ಚೌಕದಿಂದ ರಾಣೆಬೆನ್ನೂರವರೆಗೆ ಬಂಕಾಪುರ ಪಟ್ಟಣ ಆಡಳಿತ ಕೇಂದ್ರವಾಗಿತ್ತು. ಪಟ್ಟಣದ ಅಭಿವೃದ್ಧಿ ಶೂನ್ಯವಾಗಿದ್ದು, ಸ್ಥಳೀಯರ ಹೋರಾಟಕ್ಕೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಬಂಕಾಪುರವನ್ನು ತಾಲ್ಲೂಕು ಮಾಡಲು ಹೋರಾಟ ಅನಿವಾರ್ಯವಾಗಿದೆ’ ಎಂದರು.

ಪುರಸಭೆ ಉಪಾಧ್ಯಕ್ಷ ಆಂಜನೇಯ ಗುಡಗೇರಿ, ತಾಲ್ಲೂಕಾ ಪುನರುತ್ಥಾನ ಹೋರಾಟ ಸಮಿತಿ ಕಾರ್ಯದರ್ಶಿ ಅಬ್ದುಲ್ ರಜಾಕ ತಹಶೀಲ್ದಾರ್, ಶಂಭು ಕುರಗೋಡಿ, ದೇವಣ್ಣ ಹಳವಳ್ಳಿ, ಶಿವಾನಂದ ಕೋತಂಬ್ರಿ, ದೇವರಾಜ ಅರಳಿಕಟ್ಟಿ, ರವಿ ಕುರಗೋಡಿ, ಮಂಜುನಾಥ ವಳಗೇರಿ, ರಾಮಕೃಷ್ಣ ಆಲದಕಟ್ಟಿ, ಮಹೇಶ ಪುಕಾಳೆ, ರವಿ ಸಂಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.