ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಂಕಾಪುರದಿಂದ ಮುಂಡಗೋಡ–ಕಾರವಾರ ಮಾರ್ಗವಾಗಿ ಗೋವಾ ರಾಜ್ಯಕ್ಕೆ ತೆರಳುವ ಜನರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಬೇಕೆಂಬ ಚಿಂತನೆ ಆರಂಭವಾಗಿದೆ. ಈ ಹೆದ್ದಾರಿ ನಿರ್ಮಾಣವಾದರೆ, ಹುಬ್ಬಳ್ಳಿ–ಧಾರವಾಡ ಬದಲು ಬಂಕಾಪುರ ಮೂಲಕ ಕಡಿಮೆ ಸಮಯದಲ್ಲಿ ಗೋವಾ ರಾಜ್ಯಕ್ಕೆ ಸಂಪರ್ಕ ಸಾಧಿಸುವುದು ಸುಲಭವಾಗಲಿದೆ.
ದಕ್ಷಿಣ ಕರ್ನಾಟಕದ ಜಿಲ್ಲೆಗಳು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಿಂದ ಗೋವಾ ರಾಜ್ಯಕ್ಕೆ ತೆರಳುವ ಬಹುತೇಕ ಜನರು, ಸದ್ಯ ಹುಬ್ಬಳ್ಳಿ–ಧಾರವಾಡ ಮೂಲಕ ಪ್ರಯಾಣಿಸುತ್ತಿದ್ದಾರೆ. ಆದರೆ, ಈ ಮಾರ್ಗ ಹೆಚ್ಚು ದೂರ ಎಂಬುದು ಜನರ ಲೆಕ್ಕಾಚಾರ. ಹೀಗಾಗಿ, ಬಂಕಾಪುರ ಮೂಲಕ ಕಾರವಾರ ಮಾರ್ಗವಾಗಿ ಗೋವಾ ತಲುಪಲು ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಬೆಂಗಳೂರು ಕಡೆಯಿಂದ ಗೋವಾ ರಾಜ್ಯಕ್ಕೆ ಹೋಗಲು ಬೈಕ್, ಕಾರು ಹಾಗೂ ಖಾಸಗಿ ವಾಹನಗಳಲ್ಲಿ ಬರುವ ಜನರು, ಶಿಗ್ಗಾವಿ ತಾಲ್ಲೂಕಿನ ಬಂಕಾಪುರ–ಕೋಣನಕೆರೆ–ಮುಂಡಗೋಡ–ಯಲ್ಲಾಪುರ ರಸ್ತೆ ಮೂಲಕ ಕಾರವಾರ ತಲುಪುತ್ತಿದ್ದಾರೆ. ಅಲ್ಲಿಂದ, ಗೋವಾ ರಾಜ್ಯ ಪ್ರವೇಶಿಸುತ್ತಿದ್ದಾರೆ. ಈ ರಸ್ತೆ ಕಿರಿದಾಗಿದ್ದರಿಂದ, ದೊಡ್ಡ ವಾಹನಗಳ ಓಡಾಟ ಸಾಧ್ಯವಾಗುತ್ತಿಲ್ಲ. ಅಂಥ ದೊಡ್ಡ ವಾಹನಗಳು ಅನಿವಾರ್ಯವಾಗಿ ಹುಬ್ಬಳ್ಳಿ–ಧಾರವಾಡ ಮೂಲಕವೇ ಗೋವಾ ರಾಜ್ಯಕ್ಕೆ ಹೋಗಿ ಬರುತ್ತಿವೆ.
ಬಂಕಾಪುರದಿಂದ ಕಾರವಾರ ಮಾರ್ಗವಾಗಿ ಗೋವಾ ರಾಜ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದರೆ, ಪ್ರತಿಯೊಂದು ವಾಹನಗಳು ಇದೇ ಮಾರ್ಗದಲ್ಲಿ ಓಡಾಡುತ್ತವೆ. ಶಿಗ್ಗಾವಿ, ಮುಂಡಗೋಡ, ಯಲ್ಲಾಪುರ ತಾಲ್ಲೂಕಿನ ಪ್ರದೇಶಗಳು ಸಹ ಅಭಿವೃದ್ಧಿಯಾಗುತ್ತವೆ. ಇದೊಂದು ವಿಶೇಷ ಆರ್ಥಿಕ ಕಾರಿಡಾರ್ ಆಗಿಯೂ ಮಾರ್ಪಡಲಿದೆ ಎಂಬುದು ಸ್ಥಳೀಯರು ಅಭಿಪ್ರಾಯ.
ಬೈಕ್‌ಗಳ ರಸ್ತೆ: ಬೆಂಗಳೂರು ಕಡೆಯಿಂದ ಬೈಕ್‌ಗಳಲ್ಲಿ ಬರುವ ಪ್ರವಾಸಿಗರು, ಬಂಕಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುವು ಪಡೆದುಕೊಂಡು ಕೋಣನಕೆರೆ–ಮುಂಡಗೋಡ–ಯಲ್ಲಾಪುರ–ಕಾರವಾರ ಮೂಲಕ ಗೋವಾ ತೆರಳುತ್ತಿದ್ದಾರೆ. ಈ ರಸ್ತೆ ಸದ್ಯ ರಾಜ್ಯ ಹೆದ್ದಾರಿಯಾಗಿದೆ. ಬಹುಬೇಗ ಗೋವಾ ತಲುಪಬಹುದು ಎಂಬ ಕಾರಣಕ್ಕೆ ಈ ರಸ್ತೆಯು ಬೈಕ್ ಸವಾರರ ಮೆಚ್ಚಿನ ರಸ್ತೆಯಾಗಿದೆ.
‘ಪ್ರತಿ ವರ್ಷವೂ ಬೆಂಗಳೂರಿನಿಂದ ಗೋವಾ ರಾಜ್ಯಕ್ಕೆ ಬೈಕ್‌ನಲ್ಲಿ ಹೋಗಿ ಬರುತ್ತೇವೆ. ಆರಂಭದಲ್ಲಿ ಹುಬ್ಬಳ್ಳಿ–ಧಾರವಾಡ ಮಾರ್ಗವಾಗಿ ಪ್ರಯಾಣಿಸುತ್ತಿದ್ದೆವು. ಅದು ಹೆಚ್ಚು ದೂರವಾಗಿತ್ತು. ಒಮ್ಮೆ ಬಂಕಾಪುರ–ಕೋಣನಕೆರೆ–ಮುಂಡಗೋಡ–ಯಲ್ಲಾಪುರ–ಕಾರವಾರ ಮೂಲಕ ಗೋವಾ ಹೋಗಿದ್ದೆವು. ಇದರಿಂದ ಸುಮಾರು 60 ಕಿ.ಮೀ. ಉಳಿಯಿತು. ಈಗ ನಾವು ಪ್ರತಿ ಬಾರಿಯೂ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದೇವೆ. ತೈಲ, ಹಣ ಹಾಗೂ ಸಮಯ ಎಲ್ಲವೂ ಉಳಿಯುತ್ತದೆ’ ಎಂದು ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಪಿ. ಸಾಗರ್ ಹೇಳಿದರು.
ಘಾಟ್ ಮುಕ್ತ ರಸ್ತೆ: ಹುಬ್ಬಳ್ಳಿ–ಧಾರವಾಡ ಮೂಲಕ ಗೋವಾ ರಾಜ್ಯಕ್ಕೆ ಹೋಗಿಬರಲು ಹಲವು ಘಾಟ್‌ಗಳನ್ನು ದಾಟಬೇಕು. ಆದರೆ, ಬಂಕಾಪುರ–ಕೋಣನಕೆರೆ ಮೂಲಕ ಗೋವಾ ರಾಜ್ಯಕ್ಕೆ ರಾಷ್ಟ್ರೀಯ ಹೆದ್ದಾರಿಯಾದರೆ, ಹೆಚ್ಚು ಘಾಟಗಳು ಬರುವುದಿಲ್ಲ. ಇದೊಂದು ಘಾಟ್ ಮುಕ್ತ ರಸ್ತೆಯಾಗುವುದಾಗಿ ಜನರು ಹೇಳುತ್ತಿದ್ದಾರೆ.
ಕೃಷಿ ಉತ್ಪನ್ನ ಸಾಗಣೆಗೆ ಅನುಕೂಲ: ಗೋವಾ ರಾಜ್ಯ ಕೇವಲ ಪ್ರವಾಸಿ ತಾಣವಾಗಿಲ್ಲ. ಹಾವೇರಿ ಜಿಲ್ಲೆಯಲ್ಲಿ ಬೆಳೆದಿರುವ ತರಕಾರಿ, ಹೂವು, ಹಣ್ಣು ಹಾಗೂ ಇತರೆ ಕೃಷಿ ಉತ್ಪನ್ನವು ಗೋವಾ ರಾಜ್ಯಕ್ಕೆ ನಿತ್ಯವೂ ರಫ್ತಾಗುತ್ತದೆ. ಉತ್ಪನ್ನ ರಫ್ತು ಮಾಡುವ ವಾಹನಗಳು ಸಹ ಹುಬ್ಬಳ್ಳಿ–ಧಾರವಾಡ ಮಾರ್ಗವಾಗಿ ಗೋವಾ ರಾಜ್ಯಕ್ಕೆ ಹೋಗಿ ಬರುತ್ತಿವೆ. ಶಿಗ್ಗಾವಿ–ಕೋಣನಕೆರೆ ಮಾರ್ಗದ ರಸ್ತೆ ಕಿರಿದಾಗಿದ್ದರಿಂದ, ಉತ್ಪನ್ನ ರಫ್ತಿಗೆ ಅಡ್ಡಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಾದರೆ, ಕೃಷಿ ಉತ್ಪನ್ನಗಳ ಸಾಗಣೆಗೂ ಅನುಕೂಲವಾಗಲಿದೆ.
‘ಶಿಗ್ಗಾವಿ–ಹುಬ್ಬಳ್ಳಿ ಮೂಲಕ ಗೋವಾ ರಾಜ್ಯಕ್ಕೆ ಹೋಗಲು 190ರಿಂದ 200 ಕಿ.ಮೀ. ಆಗುತ್ತದೆ. ಅದೇ ಕಾರವಾರ ಮೂಲಕ ಹೋದರೆ, ಸುಮಾರು 60 ಕಿ.ಮೀ. ಉಳಿಯುತ್ತದೆ. ರಸ್ತೆ ಗೊತ್ತಿರುವ ಕೆಲವರು, ಕೋಣನಕೆರೆ–ಮುಂಡಗೋಡ–ಯಲ್ಲಾಪುರ–ಕಾರವಾರ ಮೂಲಕ ಗೋವಾ ರಾಜ್ಯಕ್ಕೆ ಹೋಗಿ ಬರುತ್ತಿದ್ದಾರೆ. ಉಳಿದವರು, ಹುಬ್ಬಳ್ಳಿ ಮೂಲಕವೇ ಗೋವಾ ರಾಜ್ಯಕ್ಕೆ ಪ್ರಯಾಣಿಸುತ್ತಿದ್ದಾರೆ. ಕೋಣನಕೆರೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾದರೆ, ವೆಚ್ಚ ಕಡಿಮೆಯಾಗುತ್ತದೆ’ ಎಂದು ಶಿಗ್ಗಾವಿಯ ವೀಳ್ಯೆದೆಲೆ ವ್ಯಾಪಾರ ಕಲಂದರ್ ಹೇಳಿದರು.
ಸಂಸದರ ಬಳಿ ಬೇಡಿಕೆ: ಶಾಸಕ ಪಠಾಣ
‘ಶಿಗ್ಗಾವಿ ತಾಲ್ಲೂಕಿನ ಬಂಕಾಪುರ–ಕೋಣನಕೆರೆ–ಮುಂಡಗೋಡ–ಯಲ್ಲಾಪುರ–ಕಾರವಾರ ಮೂಲಕ ಗೋವಾ ರಾಜ್ಯಕ್ಕೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲು ಆಗ್ರಹಿಸಿ ಸಂಸದ ಪ್ರಹ್ಲಾದ್ ಜೋಷಿ ಅವರ ಬಳಿ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಶಿಗ್ಗಾವಿ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ತಿಳಿಸಿದರು. ‘ಶಿಗ್ಗಾವಿ ಸವಣೂರು ಹಾಗೂ ಇತರೆ ತಾಲ್ಲೂಕಿನ ಜನರು ವ್ಯಾಪಾರದ ಉದ್ದೇಶಕ್ಕಾಗಿ ಗೋವಾ ರಾಜ್ಯಕ್ಕೆ ಹೋಗಿಬರುತ್ತಾರೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳು ಹಾಗೂ ದಕ್ಷಿಣ ಭಾರತದ ಹಲವು ರಾಜ್ಯಗಳ ಜನರೂ ರಸ್ತೆ ಮಾರ್ಗವಾಗಿ ಗೋವಾ ರಾಜ್ಯಕ್ಕೆ ಪ್ರಯಾಣಿಸುತ್ತಾರೆ. ಇವರೆಲ್ಲರೂ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಅಗತ್ಯವಿದೆ’ ಎಂದು ಹೇಳಿದರು. ‘ಕೋಣನಕೆರೆಯಿಂದ ಗಡಿಭಾಗದವರೆಗಿನ ರಸ್ತೆ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಲಾಗಿದ್ದು ಸದ್ಯದಲ್ಲೇ ಕಾಮಗಾರಿ ಶುರುವಾಗಲಿದೆ. ಪಕ್ಕದ ತಾಲ್ಲೂಕುಗಳ ರಸ್ತೆ ಅಭಿವೃದ್ಧಿಯಾಗಬೇಕು. ಇದರ ಜೊತೆಯಲ್ಲಿ ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತದೆ. ಹೆದ್ದಾರಿಗಾಗಿ ನಿರಂತರವಾಗಿ ಪ್ರಯತ್ನ ನಡೆಸುತ್ತೇವೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.