ಹಾವೇರಿ: ಜಿಲ್ಲೆಯ ಬಂಕಾಪುರ– ಹಾನಗಲ್ ರಸ್ತೆಯಲ್ಲಿ ಹೆಚ್ಚಾಗಿರುವ ತಗ್ಗು–ಗುಂಡಿಗಳನ್ನು ಮಚ್ಚಲು ಲೋಕೋಪಯೋಗಿ ಇಲಾಖೆಯಿಂದ (ಪಿಡಬ್ಲ್ಯುಡಿ) ಜಲ್ಲಿಕಲ್ಲು ಹಾಕಲಾಗಿದ್ದು, ಒಂದೇ ದಿನದಲ್ಲಿ ಜಲ್ಲಿಕಲ್ಲು ಕಿತ್ತು ಹೋಗಿದೆ. ಕಾಟಾಚಾರಕ್ಕೆ ದುರಸ್ತಿ ಮಾಡಿದ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಬಂಕಾಪುರ ಬಳಿ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯಿಂದ ಆಗಸ್ಟ್ 5ರಂದು ಅಪಘಾತ ಸಂಭವಿಸಿ, ಬೈಕ್‌ನ ಹಿಂಬದಿ ಕುಳಿತಿದ್ದ ಹಾನಗಲ್ ತಾಲ್ಲೂಕಿನ ವರ್ದಿ ಗ್ರಾಮದ ಅನ್ನಪೂರ್ಣಾ ಕರೆಗೌಡ್ರ (45) ಎಂಬುವವರು ಮೃತಪಟ್ಟಿದ್ದಾರೆ. ಬೈಕ್ ಚಾಲನೆ ಮಾಡುತ್ತಿದ್ದ ಮಹಿಳೆಯ ಪತಿ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಂಡಿ ಮುಚ್ಚಲು ವಿಫಲರಾದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್ ದಾಖಲಿಸುವಂತೆ ಸಂಬಂಧಿಕರು ಆಗ್ರಹಿಸುತ್ತಿದ್ದಾರೆ.
‘ರಸ್ತೆಯಲ್ಲಿ ಬಿದ್ದಿದ್ದ ಗುಂಡಿಯಲ್ಲಿ ಬೈಕ್‌ನ ಚಕ್ರ ಇಳಿದಿದ್ದರಿಂದ ಅಪಘಾತ ಸಂಭವಿಸಿದೆ’ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆ ‘ಪ್ರಜಾವಾಣಿ’ ಪತ್ರಿಕೆಯಲ್ಲಿ ವರದಿ ಪ್ರಕಟಗೊಳ್ಳುತ್ತಿದ್ದಂತೆ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ತಗ್ಗು ಇರುವ ಸ್ಥಳಗಳಲ್ಲಿ ಭಾನುವಾರ ಜಲ್ಲಿಕಲ್ಲು ಹಾಕಿಸಿದ್ದಾರೆ.
ಅಧಿಕಾರಿಗಳ ಸೂಚನೆಯಂತೆ ಕಾರ್ಮಿಕರು, ಟ್ರ್ಯಾಕ್ಟರ್‌ನಲ್ಲಿ ಸಂಚರಿಸಿ ಜಲ್ಲಿಕಲ್ಲು ಎಸೆದು ಹೋಗಿದ್ದಾರೆ. ಇದನ್ನು ಅಧಿಕಾರಿಗಳು ಪರಿಶೀಲನೆ ಮಾಡಿಲ್ಲ. ಅವೈಜ್ಞಾನಿಕ ಕ್ರಮದಿಂದಾಗಿ ಸೋಮವಾರವೇ ಜಲ್ಲಿಕಲ್ಲು ಸಹ ಕಿತ್ತು ಹೋಗಿ ರಸ್ತೆಯಲ್ಲಿ ಹರಡಿಕೊಂಡಿದ್ದು ಕಂಡುಬಂತು.
‘ಬಂಕಾಪುರ– ಹಾನಗಲ್ ರಸ್ತೆ ಅಲ್ಲಲ್ಲಿ ತೀರಾ ಹದಗೆಟ್ಟಿದೆ. ಕೆಲ ಭಾಗದಲ್ಲಿ ಉತ್ತಮ ರಸ್ತೆಯಿದೆ. ಎಲ್ಲ ಕಡೆಯೂ ರಸ್ತೆ ಚೆನ್ನಾಗಿರಬಹುದೆಂದು ತಿಳಿದು ಬೈಕ್ ಸವಾರರು ವೇಗದಲ್ಲಿ ಹೋಗುತ್ತಾರೆ. ದಿಢೀರ್ ತಗ್ಗುಗಳು ಬಂದಾಗ, ಬೈಕ್ ಸಮೇತ ಉರುಳಿ ಬೀಳುತ್ತಿದ್ದಾರೆ. ಇಂಥದ್ದೇ ಗುಂಡಿಯಿಂದ ಮಹಿಳೆ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮಾಸನಕಟ್ಟಿಯ ಗ್ರಾಮಸ್ಥರು ಹೇಳಿದರು.
‘ಕಾಟಾಚಾರಕ್ಕೆಂದು ಗುಂಡಿಯಲ್ಲಿ ಮೇಲ್ಭಾಗದಲ್ಲಷ್ಟೇ ಜಲ್ಲಿಕಲ್ಲು ಹಾಕಿದರೆ ಪ್ರಯೋಜನವಿಲ್ಲ. ಭಾನುವಾರ ಹಾಕಿದ್ದ ಜಲ್ಲಿಕಲ್ಲು, ಸೋಮವಾರ ಕಿತ್ತು ಹೋಗಿದೆ. ಮಳೆ ಬಂದರೆ ಪುನಃ ಗುಂಡಿಯಲ್ಲಿ ನೀರು ನಿಂತುಕೊಳ್ಳುತ್ತದೆ. ಪುನಃ ಅಪಘಾತಗಳು ಸಂಭವಿಸುತ್ತವೆ’ ಎಂದು ತಿಳಿಸಿದರು.
‘ರಸ್ತೆಯ ಅಕ್ಕ–ಪಕ್ಕದಲ್ಲಿ ಗ್ರಾಮಗಳು ಹೆಚ್ಚಿವೆ. ಬಹುತೇಕರು, ಅಗತ್ಯವಸ್ತುಗಳ ಖರೀದಿ ಹಾಗೂ ಇತರೆ ಕೆಲಸಕ್ಕಾಗಿ ಬೈಕ್‌ಗಳಲ್ಲಿಯೇ ಬೇರೆ ಬೇರೆ ಊರುಗಳಿಗೆ ಹೋಗಿ ಬರುತ್ತಾರೆ. ಗುಂಡಿಗಳು ಹೆಚ್ಚಿರುವುದರಿಂದ ಬೈಕ್‌ಗಳೇ ಹೆಚ್ಚಾಗಿ ಉರುಳಿಬೀಳುತ್ತಿವೆ. ರಸ್ತೆ ದುರಸ್ತಿ ಮಾಡದಿದ್ದರಿಂದ ಮಹಿಳೆ ಮೃತಪಟ್ಟಿದ್ದು, ಇವರ ಸಾವಿಗೆ ಯಾರು ಹೊಣೆ’ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
‘ರಸ್ತೆ ಸುಧಾರಣೆಗೆ ಟೆಂಡರ್’
ಹಾನಗಲ್–ಬಂಕಾಪುರ ರಸ್ತೆಯಲ್ಲಿ ತಾತ್ಕಾಲಿಕವಾಗಿ ಗುಂಡಿ ಮುಚ್ಚಿರುವುದಾಗಿ ಹೇಳುತ್ತಿರುವ ಅಧಿಕಾರಿಗಳು ಇಡೀ ರಸ್ತೆ ಸುಧಾರಣೆಗೆ ಸದ್ಯದಲ್ಲೇ ಟೆಂಡರ್ ಕರೆಯುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.