ಬಸವರಾಜ ಬೊಮ್ಮಾಯಿ
ಹಾವೇರಿ: ‘ಹಾವೇರಿ ಜಿಲ್ಲೆಯಲ್ಲಿ ಜೂಜು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಕ್ರಮ ಚಟುವಟಿಕೆಗಳಿಗೆ ಪೊಲೀಸರೇ ಸಾಥ್ ನೀಡುತ್ತಿರುವ ಅನುಮಾನ ಜನರಲ್ಲಿ ಮೂಡಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ದೂರಿದ್ದಾರೆ.
ಪ್ರಕಟಣೆ ನೀಡಿರುವ ಅವರು, ‘ರಾಜಾರೋಷವಾಗಿ ಜೂಜು ಆಡುತ್ತಿರುವವರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಹಾವೇರಿ ಎಎಸ್‌ಪಿ ಕಚೇರಿ ಎದರು ಗಂಭೀರ ಪ್ರತಿಭಟನೆ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
‘ಹಗಲು ಹೊತ್ತಿನಲ್ಲಿಯೇ ರಾಜಾರೋಷವಾಗಿ ಜೂಜು ಆಡಿಸಲಾಗುತ್ತಿದೆ. ಇಷ್ಟೊಂದು ಬಹಿರಂಗವಾಗಿ ಜೂಜು ಆಡುತ್ತಿರುವ ಬಗ್ಗೆ ಸಾರ್ವಜನಿಕರು, ಮಾಧ್ಯಮದವರು ಪೊಲೀಸರ ಗಮನಕ್ಕೆ ತರುತ್ತಿದ್ದಾರೆ. ಅಷ್ಟಾದರೂ ಯಾವುದೇ ಕ್ರಮ ಕೈಗೊಳ್ಳದೇ ಪೊಲೀಸರು ಮೂಕ ಪ್ರೇಕ್ಷರಾಗಿ ನೋಡುತ್ತಿದ್ದಾರೆ. ಅಕ್ರಮ ಮಾಡುವವರಿಗೆ ಸರ್ಕಾರವೇ ಶ್ರೀರಕ್ಷೆಯಾಗಿ ನಿಂತಿರುವ ಭಾವನೆ ಮೂಡುತ್ತಿದೆ’ ಎಂದಿದ್ದಾರೆ.
‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಹಾವೇರಿ ಜಿಲ್ಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.