ADVERTISEMENT

ಜನರ ಆಶೀರ್ವಾದವೇ ನನಗೆ ಶಕ್ತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 13:23 IST
Last Updated 28 ಆಗಸ್ಟ್ 2021, 13:23 IST
ಹಾವೇರಿ ತಾಲ್ಲೂಕಿನ ಜಂಗಮನಕೊಪ್ಪದಲ್ಲಿ ₹90 ಕೋಟಿ ವೆಚ್ಚದ ಕರ್ನಾಟಕ ಸಹಕಾರ ಹಾಲು ಮಹಾಮಂಡಳದ ‘ಯುಎಚ್‌ಟಿ ಹಾಲು ಪ್ಯಾಕಿಂಗ್‌ ಘಟಕ’ಕ್ಕೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೂಮಿಪೂಜೆ ನೆರವೇರಿಸಿದರು. ಸಚಿವರಾದ ಬಿ.ಸಿ.ಪಾಟೀಲ, ಪ್ರಭು ಚೌಹಾಣ, ಶಾಸಕ ನೆಹರು ಓಲೇಕಾರ ಇದ್ದಾರೆ
ಹಾವೇರಿ ತಾಲ್ಲೂಕಿನ ಜಂಗಮನಕೊಪ್ಪದಲ್ಲಿ ₹90 ಕೋಟಿ ವೆಚ್ಚದ ಕರ್ನಾಟಕ ಸಹಕಾರ ಹಾಲು ಮಹಾಮಂಡಳದ ‘ಯುಎಚ್‌ಟಿ ಹಾಲು ಪ್ಯಾಕಿಂಗ್‌ ಘಟಕ’ಕ್ಕೆ ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೂಮಿಪೂಜೆ ನೆರವೇರಿಸಿದರು. ಸಚಿವರಾದ ಬಿ.ಸಿ.ಪಾಟೀಲ, ಪ್ರಭು ಚೌಹಾಣ, ಶಾಸಕ ನೆಹರು ಓಲೇಕಾರ ಇದ್ದಾರೆ   

ಹಾವೇರಿ: ‘ಮುಖ್ಯಮಂತ್ರಿಯಾಗಿ ನನ್ನ ಒಂದು ತಿಂಗಳ ಆಡಳಿತದ ಬಗ್ಗೆ ನೀವು ಚರ್ಚೆ ಮಾಡಿ. ನಾನು ಸಾಗುವ ಹಾದಿ ದೊಡ್ಡದಿದೆ. ಜನರ ಆಶೀರ್ವಾದವೇ ನನಗೆ ದೊಡ್ಡ ಶಕ್ತಿ. ಅಲ್ಪ ಸಮಯದಲ್ಲಿ ಕನ್ನಡಿಗರು, ಬಡವರು, ಶೋಷಿತರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳ ಬದುಕಿನಲ್ಲಿ ಬದಲಾವಣೆ ತರುವ ವಿಶ್ವಾಸ ಹೊಂದಿದ್ದೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ತಾಲ್ಲೂಕಿನ ಜಂಗಮನಕೊಪ್ಪದಲ್ಲಿ ₹90 ಕೋಟಿ ವೆಚ್ಚದ ಕರ್ನಾಟಕ ಸಹಕಾರ ಹಾಲು ಮಹಾಮಂಡಳದ ‘ಯುಎಚ್‌ಟಿ ಹಾಲು ಪ್ಯಾಕಿಂಗ್‌ ಘಟಕ’ಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಉತ್ತಮ ಆಡಳಿತದಿಂದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಸರ್ಕಾರಿ ಕಚೇರಿಗಳಲ್ಲಿ ಜನರಿಗೆ ತ್ವರಿತ ಸೇವೆ ನೀಡಲು ಹೊಸ ಯೋಜನೆ ಜಾರಿಗೊಳಿಸುತ್ತೇನೆ. ಹೊಸ ಶಿಕ್ಷಣ ನೀತಿಯನ್ನು ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಅ.1ರಿಂದ ಜಾರಿಗೊಳಿಸುತ್ತೇವೆ. ಎಲ್ಲ ಸಮಸ್ಯೆ, ಗೊಂದಲಗಳನ್ನು ನಿವಾರಿಸಲಾಗುತ್ತದೆ. 2023ರೊಳಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಬದ್ಧನಾಗಿದ್ದೇನೆ ಎಂದು ಹೇಳಿದರು.

ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌: ರಾಜ್ಯದಲ್ಲಿ ಉದ್ಯೋಗ ಸೃಷ್ಟಿಗೆ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪಿಸಲಾಗುವುದು. ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಸರ್ಕಾರದಿಂದ ಉತ್ತೇಜನ ನೀಡಲಾಗುವುದು. ಪ್ರತಿ ಹಳ್ಳಿಗಳಿಗೂ ಉತ್ತಮ ನೆಟ್‌ವರ್ಕ್‌ ದೊರಕಿಸಿದಾಗ ಮಾತ್ರ ಸರ್ಕಾರದ ಸವಲತ್ತು, ಕಾರ್ಯಕ್ರಮಗಳು ಜನರನ್ನು ತಲುಪುತ್ತವೆ. ಈ ನಿಟ್ಟಿನಲ್ಲೂ ಪ್ರಯತ್ನ ನಡೆದಿದೆ ಎಂದರು.

ಮೇಕೆದಾಟು ಯೋಜನೆ ಜಾರಿಗೊಳಿಸುವ ಸಂಬಂಧ ತಜ್ಞರ ಜತೆ ಈಗಾಗಲೇ ಚರ್ಚಿಸಿದ್ದೇನೆ. ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಸಿದ್ದೇವೆ. ನಮ್ಮ ಹಕ್ಕನ್ನು ಪಡೆದುಕೊಳ್ಳಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.