ADVERTISEMENT

ಬಸವರಾಜ ಬೊಮ್ಮಾಯಿಗೆ ಸಿಎಂ ಪಟ್ಟ: ಹಾವೇರಿ ಜಿಲ್ಲೆಯಲ್ಲಿ ಗರಿಗೆದರಿದ ನಿರೀಕ್ಷೆಗಳು

‘ಮಾದರಿ ಜಿಲ್ಲೆ’ಯ ಕನಸು ಕಾಣುತ್ತಿರುವ ಜನ

ಸಿದ್ದು ಆರ್.ಜಿ.ಹಳ್ಳಿ
Published 28 ಜುಲೈ 2021, 19:30 IST
Last Updated 28 ಜುಲೈ 2021, 19:30 IST
ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿರುವ ಕನಕ ಅರಮನೆಯ ವಿಹಂಗಮ ನೋಟ (ಸಾಂದರ್ಭಿಕ ಚಿತ್ರ)
ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮದಲ್ಲಿರುವ ಕನಕ ಅರಮನೆಯ ವಿಹಂಗಮ ನೋಟ (ಸಾಂದರ್ಭಿಕ ಚಿತ್ರ)   

ಹಾವೇರಿ: ‘ಶಿಗ್ಗಾವಿ ಸರದಾರ’ ಬಸವರಾಜ ಬೊಮ್ಮಾಯಿ ಅವರು ನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ,‘ಉತ್ತರ ಕರ್ನಾಟಕದ ಹೆಬ್ಬಾಗಿಲು’ ಹಾವೇರಿ ಜಿಲ್ಲೆಯಲ್ಲಿ ಅಭಿವೃದ್ಧಿಯ ನಿರೀಕ್ಷೆಗಳು ಗರಿಗೆದರಿವೆ.

ಹಾವೇರಿ ಜಿಲ್ಲೆ ಉದಯವಾಗಿ 24 ವರ್ಷಗಳು ಕಳೆದರೂ, ‘ಹಿಂದುಳಿದ ಜಿಲ್ಲೆ’ ಎಂಬ ಹಣೆಪಟ್ಟಿ ಕಳಚಿಲ್ಲ. ದಶಕಗಳಿಂದ ನನೆಗುದಿಗೆ ಬಿದ್ದ ಕಾಮಗಾರಿಗಳು, ಹಳ್ಳ ಹಿಡಿದ ಯೋಜನೆಗಳು, ಅರ್ಹರನ್ನು ತಲುಪದ ಸೌಲಭ್ಯಗಳು... ಹೀಗೆ ಸಮಸ್ಯೆಗಳು ಬೆಟ್ಟದಷ್ಟಿವೆ.

ಶಾಸಕರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಿರುವ ಬಸವರಾಜ ಬೊಮ್ಮಾಯಿ ಅವರು ಈಗ ಮುಖ್ಯಮಂತ್ರಿ ಆಗಿರುವುದರಿಂದ ಜಿಲ್ಲೆಗೆ ಅನುದಾನದ ಹೊಳೆ ಹರಿಸಿ, ಅಭಿವೃದ್ಧಿಯ ಬೆಳೆ ತೆಗೆದು, ‘ಮಾದರಿ ಜಿಲ್ಲೆ’ಯನ್ನಾಗಿ ರೂಪಿಸುತ್ತಾರೆ ಎಂಬುದು ಜಿಲ್ಲೆಯ ಜನರ ಕನಸಾಗಿದೆ.

ADVERTISEMENT

ಬಡವರಿಗೆ ಸೂರು ಸಿಗಲಿ

‘ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ 24x7 ಶುದ್ಧ ಕುಡಿಯುವ ನೀರು ಎಂಬುದು ಜನರ ಪಾಲಿಗೆ ಮರೀಚಿಕೆಯಾಗಿದೆ. ಒಳಚರಂಡಿ ಯೋಜನೆ ಹಳ್ಳ ಹಿಡಿದು, ಹಂದಿಗಳ ಜತೆಯಲ್ಲೇ ಜನರು ಸಹಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಉತ್ತಮ ರಸ್ತೆಗಳಿಲ್ಲ. ಹಾವೇರಿಯಿಂದ–ದೇವಗಿರಿವರೆಗೆ 60 ಅಡಿ ರಸ್ತೆ ನಿರ್ಮಾಣವಾಗಬೇಕು. 25 ವರ್ಷ ಕಳೆದರೂ ‘ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರ’ ಬಡಾವಣೆಯನ್ನೇ ನಿರ್ಮಿಸಿಲ್ಲ. ಹೀಗಾಗಿ, ಬಡ–ಮಧ್ಯಮ ವರ್ಗದ ಜನರಿಗೆ ಸೂರು ಕಲ್ಪಿಸುವ ಯೋಜನೆ ಜಾರಿಯಾಗಬೇಕು’ ಎನ್ನುತ್ತಾರೆ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್‌.ಕೋರಿಶೆಟ್ಟರ್‌.

ತುಂಗಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲಿ

‘ತುಂಗಾ ಮೇಲ್ದಂಡೆ ಯೋಜನೆ ಕಾಮಗಾರಿ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಭೂಮಿ ಕಳೆದುಕೊಂಡ ರೈತರಿಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಉಪಕಾಲುವೆಗಳನ್ನು ನಿರ್ಮಿಸಿ, ಯೋಜನೆ ಪೂರ್ಣಗೊಳಿಸಿದರೆ ರಾಣೆಬೆನ್ನೂರು, ಹಾವೇರಿ, ಹಿರೇಕೆರೂರು ತಾಲ್ಲೂಕಿನ ಕೃಷಿ ಜಮೀನುಗಳಿಗೆ ನೀರಾವರಿ ಸೌಲಭ್ಯ ಸಿಗುತ್ತದೆ. ಜಿಲ್ಲೆಯಲ್ಲಿ 8ರಿಂದ 10 ಲಕ್ಷ ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಯಾದರೆ, ರೈತರಿಗೆ ಹೆಚ್ಚಿನ ದರ ಸಿಗುತ್ತದೆ. ಚಳವಳಿ ಹಿನ್ನೆಲೆಯಿಂದ ಬಂದ ಬೊಮ್ಮಾಯಿ ಅವರು ಈ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆಯಿದೆ’ ಎಂಬುದು ರೈತ ಮುಖಂಡ ರಾಮಣ್ಣ ಕೆಂಚಳ್ಳೇರ ಅವರ ವಿಶ್ವಾಸದ ನುಡಿ.

‘ಕೈಗಾರಿಕಾ ಎಸ್ಟೇಟ್‌’ ಸ್ಥಾಪನೆಯಾಗಲಿ

‘ನಮ್ಮ ಸಂಸ್ಥೆಯಲ್ಲಿ 400ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಜಿಲ್ಲೆಯಲ್ಲಿ ‘ಕೈಗಾರಿಕಾ ಎಸ್ಟೇಟ್‌’ ಸ್ಥಾಪನೆಯಾಗಬೇಕು ಎಂಬುದು ದಶಕಗಳ ಕನಸಾಗಿದೆ. ಕೋಳೂರು ಸಮೀಪ 400 ಎಕರೆ ಭೂಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಕೈಗಾರಿಕಾ ಪ್ರದೇಶ ಸ್ಥಾಪನೆಯಾದರೆಸಣ್ಣ ಸಣ್ಣ ಕೈಗಾರಿಕಾದ್ಯೋಮಿಗಳಿಗೆ ಮೂಲಸೌಕರ್ಯ ದೊರೆಯುತ್ತದೆ. ಆರ್ಥಿಕ ಚಟುವಟಿಕೆ ಗರಿಗೆದರಿ, ಜಿಲ್ಲೆ ಅಭಿವೃದ್ಧಿಯಾಗುತ್ತದೆ.ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬಸವರಾಜ ಬೊಮ್ಮಾಯಿ ಅವರು ಒಂದು ಸಾವಿರ ಎಕರೆಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪನೆಯ ಭರವಸೆ ನೀಡಿದ್ದರು. ಅದನ್ನು ಈಗ ಜಾರಿಗೊಳಿಸಲಿ’ ಎನ್ನುತ್ತಾರೆಹಾವೇರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಉಪಾಧ್ಯಕ್ಷ ರವಿ ಮೆಣಸಿನಕಾಯಿ.

ಬೆಳೆ ವಿಮೆ, ಮನೆ ಹಾನಿ, ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ರೈತರಿಗೆ ಮತ್ತು ಜನರಿಗೆ ಸಮರ್ಪಕವಾಗಿ ಪರಿಹಾರ ಸಿಕ್ಕಿಲ್ಲ. ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ, ವೈದ್ಯಕೀಯ ಉಪಕರಣಗಳ ಕೊರತೆ, ವಾಹನಗಳ ಕೊರತೆ ಹೀಗೆ ಸಾಲು ಸಾಲು ಸಮಸ್ಯೆಗಳಿವೆ. ಈ ಎಲ್ಲ ಸಮಸ್ಯೆಗಳಿಗೆ ಬೊಮ್ಮಾಯಿ ಅವರು ಹಂತ–ಹಂತವಾಗಿ ಪರಿಹಾರ ಕಲ್ಪಿಸಬಹುದು ಎಂಬುದು ಜನರ ನಿರೀಕ್ಷೆಯಾಗಿದೆ.

‘ಹೋರಾಟ ನಡೆಸಿದವರೇ ಜಾರಿಗೊಳಿಸಲಿ’

‘ಬಸವರಾಜ ಬೊಮ್ಮಾಯಿ ಅವರು ಪ್ರತಿಪಕ್ಷದಲ್ಲಿದ್ದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪಿಸಲು ಹೋರಾಟ ಮಾಡಿದ್ದರು. ಈಗ ಮುಖ್ಯಮಂತ್ರಿಯಾಗಿರುವ ಅವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆಯಾದರೆ ₹3 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ಸಿಗುತ್ತದೆ. ಉದ್ಯೋಗಾವಕಾಶಗಳು ಹೆಚ್ಚುತ್ತವೆ’ ಎನ್ನುತ್ತಾರೆ ಮಾಜಿ ಸಚಿವ, ಕಾಂಗ್ರೆಸ್‌ ಮುಖಂಡ ಬಸವರಾಜ ಶಿವಣ್ಣನವರ.

***

ಕಾನೂನು ಕಾಲೇಜು, ಎಲ್ಲ ತಾಲ್ಲೂಕುಗಳಲ್ಲಿ ಐಟಿಐ ಕಾಲೇಜು ಸ್ಥಾಪನೆಯಾಗಬೇಕು. ಮೆಡಿಕಲ್‌ ಕಾಲೇಜು ಈ ವರ್ಷದಿಂದಲೇ ಕಾರ್ಯಾರಂಭ ಮಾಡಬೇಕು

– ಬಸವರಾಜ ಭೋವಿ, ಜಿಲ್ಲಾ ಸಹ ಕಾರ್ಯದರ್ಶಿ, ಎಸ್‌ಎಫ್‌ಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.