ADVERTISEMENT

ಬೊಮ್ಮಾಯಿಯವರ ಸಿಎಂ ಸ್ಥಾನಕ್ಕೆ ಧಕ್ಕೆಯಿಲ್ಲ: ಕಾರ್ಣಿಕ ಗೊರವಯ್ಯ ರಾಮಪ್ಪಜ್ಜ

ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುವ ಗೊರವಯ್ಯ ರಾಮಪ್ಪಜ್ಜ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 12:50 IST
Last Updated 4 ಆಗಸ್ಟ್ 2021, 12:50 IST
ಗೊರವಯ್ಯ ರಾಮಪ್ಪಜ್ಜ 
ಗೊರವಯ್ಯ ರಾಮಪ್ಪಜ್ಜ    

ಹಾವೇರಿ: ‘ಬಸವರಾಜ ಬೊಮ್ಮಾಯಿ ಅವರು 6 ತಿಂಗಳು ಮಾತ್ರ ಮುಖ್ಯಮಂತ್ರಿಯಾಗಿರುತ್ತಾರೆ. ನಂತರ ಗಡ್ಡಧಾರಿಯೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕೇರುತ್ತಾರೆ ಎಂದು ಮೈಲಾರಲಿಂಗೇಶ್ವರ ದೇವಸ್ಥಾನದ ಅರ್ಚಕ ವೆಂಕಪ್ಪಯ್ಯ ಒಡೆಯರ್‌ ಹೇಳಿದ ಹೇಳಿಕೆ ಸುಳ್ಳು. ಬಾಕಿ 17 ತಿಂಗಳೂ ಬೊಮ್ಮಾಯಿ ಅವರೇ ಸಿ.ಎಂ. ಆಗಿರುತ್ತಾರೆ ಎಂಬ ನಂಬಿಕೆಯಿದೆ’ ಎಂದು ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುವ ಗೊರವಯ್ಯ ರಾಮಪ್ಪಜ್ಜ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಅರ್ಚಕ ವೆಂಕಪ್ಪಯ್ಯ ಒಡೆಯರ್‌ ಅವರು ಧರ್ಮದರ್ಶಿ ಎಂದು ಹೇಳಿಕೊಂಡು, ಸುಳ್ಳು ಹೇಳಿಕೆಗಳ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ. ಪ್ರಚಾರಕ್ಕಾಗಿ 3 ತಿಂಗಳು, 6 ತಿಂಗಳಿಗೊಂದು ಹೇಳಿಕೆ ಕೊಡುತ್ತಾ, ಮೈಲಾರಲಿಂಗಪ್ಪನ ಹೆಸರಿಗೆ ಕಳಂಕ ತರುತ್ತಿದ್ದಾರೆ’ ಎಂದು ಆರೋಪಿಸಿದರು.

ಮೈಲಾರಲಿಂಗೇಶ್ವರ ದೇವಸ್ಥಾನದ ಬಾಬುದಾರರಾದ ಜಜ್ಜುರಿ ಲಿಂಗಪ್ಪ ಮಾತನಾಡಿ, ‘ಕಾರ್ಣಿಕ ಗೊರವಯ್ಯ 11 ದಿನ ಉಪವಾಸವಿದ್ದು, ರಥಸಪ್ತಮಿ ದಿನ ಸಂಜೆ 5.30ಕ್ಕೆ ಮೈಲಾರಲಿಂಗಪ್ಪನ ಬಿಲ್ಲನ್ನು ಏರಿ, ಮೈಲಾರಲಿಂಗ ಕೊಡುವ ವಾಣಿಯನ್ನು ನುಡಿಯುತ್ತಾರೆ. ಮಳೆ–ಬೆಳೆ ಮತ್ತು ರಾಜಕೀಯಕ್ಕೆ ಸಂಬಂಧಿಸಿದಂತೆ ವರ್ಷಕ್ಕೊಮ್ಮೆ ನುಡಿಯುವ ಈ ಕಾರ್ಣಿಕವನ್ನು ಭಕ್ತರು ಹಲವಾರು ವರ್ಷಗಳಿಂದ ನಂಬಿಕೊಂಡು ಬಂದಿದ್ದಾರೆ. ಆದರೆ, ವೆಂಕಪ್ಪಯ್ಯ ಒಡೆಯರ್‌ ಸುಳ್ಳು ಹೇಳಿಕೆ ನೀಡುವ ಮೂಲಕ ಭಕ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ’ ಎಂದು ದೂರಿದರು.

ADVERTISEMENT

‘ಕೆಲ ದಿನಗಳ ಹಿಂದೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಕೆ.ಎಸ್‌. ಈಶ್ವರಪ್ಪ ಮತ್ತು ಬಸವರಾಜ ಬೊಮ್ಮಾಯಿ ಇಬ್ಬರಿಗೂ ಸಿ.ಎಂ. ಸ್ಥಾನ ಸಿಗುತ್ತದೆ ಎಂದು ಅರ್ಚಕ ವೆಂಕಪ್ಪಯ್ಯ ಒಡೆಯರ್‌ ಭವಿಷ್ಯ ನುಡಿದಿದ್ದರು. ಡಿ.ಕೆ. ಶಿವಕುಮಾರ್‌ ಕೊಟ್ಟ ‘ಬೆಳ್ಳಿ ಹೆಲಿಕಾಪ್ಟರ್‌’ ಅನ್ನು ತಮ್ಮ ಮನೆಯಲ್ಲಿಟ್ಟುಕೊಂಡಿದ್ದಾರೆ. ಪ್ರಚಾರಕ್ಕಾಗಿ ರಾಜಕೀಯ ಮುಖಂಡರ ಕುರಿತು ಹೇಳಿಕೆ ಹರಿಬಿಡುತ್ತಾರೆ’ ಎಂದು ದೂರಿದರು.

ವೆಂಕಪ್ಪಯ್ಯ ಒಡೆಯರ್‌ ಅವರನ್ನು ಅರ್ಚಕ ಹುದ್ದೆಯಿಂದ ಪದಚ್ಯುತಿಗೊಳಿಸುವಂತೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸುತ್ತೇವೆ ಎಂದು ದೇಗುಲದ ಬಾಬುದಾರರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಲತೇಶಪ್ಪ, ಚಿಕ್ಕಪ್ಪ ಬೂಸಮ್ಮನವರ, ಮಲ್ಲಾಡಿ ಪುಟ್ಟಪ್ಪ, ಈಟಿ ಲಿಂಗರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.