ADVERTISEMENT

ಕೋವಿಡ್‌ ಪರೀಕ್ಷಾ ಲ್ಯಾಬ್‌ ಶೀಘ್ರ ಆರಂಭ: ಬಸವರಾಜ ಬೊಮ್ಮಾಯಿ

ಕೊರೊನಾ ನಿಯಂತ್ರಣಕ್ಕೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಲು ವೈದ್ಯರಿಗೆ ಸಚಿವ ತಾಕೀತು

​ಪ್ರಜಾವಾಣಿ ವಾರ್ತೆ
Published 19 ಮೇ 2020, 15:52 IST
Last Updated 19 ಮೇ 2020, 15:52 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ಸಭೆ ನಡೆಸಿದರು –ಪ್ರಜಾವಾಣಿ ಚಿತ್ರ 
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ಸಭೆ ನಡೆಸಿದರು –ಪ್ರಜಾವಾಣಿ ಚಿತ್ರ    

ಹಾವೇರಿ: ಕೊರೊನಾ ಸೋಂಕು ಪತ್ತೆ ಹೆಚ್ಚಲು ಮತ್ತು ಶೀಘ್ರ ವರದಿಗಳನ್ನು ಪಡೆಯಲು ಜಿಲ್ಲೆಗೆ ‘ಕೋವಿಡ್‌–19 ಪರೀಕ್ಷಾ ಲ್ಯಾಬ್‌’ ಮಂಜೂರು ಮಾಡಲಾಗಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ₹1ಕೋಟಿ ವೆಚ್ಚದಲ್ಲಿ ಜೂನ್‌ ಮೊದಲ ವಾರದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಕೋವಿಡ್ ನಿಯಂತ್ರಣ ಕ್ರಮಗಳು, ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ ಹಾಗೂ ವಲಸೆ ಕಾರ್ಮಿಕರ ನಿರ್ವಹಣೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ಕೋವಿಡ್‌ –19 ಪರೀಕ್ಷಾ ಲ್ಯಾಬ್‌ಕಾಮಗಾರಿಗಳು ಹಾಗೂ ಯಂತ್ರಗಳ ಅಳವಡಿಕೆ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು. ಕಾಮಗಾರಿ ವಿಳಂಬದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಕೋವಿಡ್ ಲಾಕ್‍ಡೌನ್ 4.0 ಜಾರಿಗೊಂಡಿರುವುದರಿಂದ ಕೆಲ ನಿರ್ಬಂಧಗಳನ್ನು ಹೊರತುಪಡಿಸಿ ಸಾಕಷ್ಟು ಆರ್ಥಿಕ ಚಟುವಟಿಕೆಗಳು ಪುನರ್ ಆರಂಭಗೊಂಡಿವೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗದಂತೆ ಹೆಚ್ಚಿನ ಗಮನ ಹರಿಸಬೇಕು. ಆಸ್ಪತ್ರೆಗಳ ಮೂಲ ಸೌಕರ್ಯಗಳಲ್ಲಿ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ವೈದ್ಯಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ADVERTISEMENT

ಐಸಿಯುನಲ್ಲಿ 20 ಹಾಸಿಗೆ:ಜಿಲ್ಲಾಸ್ಪತ್ರೆಯಲ್ಲಿ 20 ಹಾಸಿಗೆಯ ಆಧುನಿಕ ವೈದ್ಯಕೀಯ ಸೌಲಭ್ಯವುಳ್ಳ ತೀವ್ರ ನಿಗಾ ಘಟಕದ ವ್ಯವಸ್ಥೆ ಸಹ ಪೂರ್ಣಗೊಂಡಿದೆ. ಇದೇ ಮಾದರಿಯಲ್ಲಿ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಳ ಮಾಡಿಕೊಳ್ಳಿ. ತಾಲ್ಲೂಕು ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್‍ಗಳನ್ನು ಹೆಚ್ಚಳ ಮಾಡಿಕೊಳ್ಳಿ, ಬೇಕಾದ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಸೂಚನೆ ನೀಡಿದರು.

ಕ್ವಾರಂಟೈನ್‍ನಲ್ಲಿ ಮೂಲಸೌಕರ್ಯಗಳ ಕೊರತೆಯಾಗಬಾರದು. ಶೌಚಾಲಯ, ಊಟ-ಉಪಹಾರದ ಕೊರತೆ, ನಿರಂತರ ವೈದ್ಯಕೀಯ ತಪಾಸಣೆ ನಡೆಸಬೇಕು. 12ನೇ ದಿನ ಮಾದರಿ ತೆಗೆದು ನೆಗಟಿವ್ ವರದಿ ಬಂದರೆ ಅವರನ್ನು ಮನೆಗೆ ಕಳುಹಿಸಲು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

3509 ಪಿಪಿಇ ಕಿಟ್‌ ಖರೀದಿ:3509 ಪಿಪಿಇ ಕಿಟ್‍ಗಳನ್ನು ತರಿಸಲಾಗಿದ್ದು, ಪ್ರಸ್ತುತ 1800 ಪಿಪಿಇ ಕಿಟ್‍ಗಳು ದಾಸ್ತಾನಿವೆ. ಒಂದು ತಿಂಗಳಿಗೆ 2400 ಪಿಪಿಇ ಕಿಟ್‍ಗಳ ಅವಶ್ಯ ಇದೆ. 14,935 ಮಾಸ್ಕ್‌ಗಳ ದಾಸ್ತಾನಿದ್ದು, ಈವರೆಗೆ 8619 ಮಾಸ್ಕ್‌ಗಳನ್ನು ಬಳಸಿದ್ದೇವೆ. 5604 ಮಾಸ್ಕ್‌ಗಳು ದಾಸ್ತಾನು ಇರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಮುದಾಯ ಆರೋಗ್ಯ ತಪಾಸಣೆಯಲ್ಲಿ 34 ಸಾವಿರ ಮನೆಗಳ ಸಂಪರ್ಕಿಸಿ 16,21,082 ಜನರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಪೈಕಿ 9995 ಜನರನ್ನು ಖುದ್ದಾಗಿ ವೈದ್ಯರೇ ತಪಾಸಣೆ ನಡೆಸಿದ್ದಾರೆ. ಈ ಪೈಕಿ 731 ಮಾದರಿಗಳನ್ನು ಲ್ಯಾಬ್ ತಪಾಸಣೆಗೆ ಕಳುಹಿಸಲಾಗಿದೆ. ಎಲ್ಲವೂ ನೆಗಟಿವ್ ಬಂದಿದೆ ಎಂದು ಮಾಹಿತಿ ನೀಡಿದರು.

ಸಂಸದರಾದ ಶಿವಕುಮಾರ, ಉದಾಸಿ, ಶಾಸಕರಾದ ಸಿ.ಎಂ.ಉದಾಸಿ, ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ಒಳಗೊಂಡಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.