ಹಾವೇರಿ: ‘ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಈ ಕ್ಷೇತ್ರದ ಸಂಸದನನ್ನಾಗಿ ಆಯ್ಕೆ ಮಾಡಿದರೆ, ನಿಮ್ಮ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಸಿಂಹ ಗರ್ಜನೆ ರೀತಿಯಲ್ಲಿ ಗುಡುಗಿ, ನಿಮ್ಮ ಸೇವೆಯನ್ನು ಮಾಡುತ್ತೇನೆ’ ಎಂದು ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
ಸವಣೂರು ತಾಲ್ಲೂಕಿನ ಕಳಸೂರು, ಹಿರೇಮಗದೂರು, ಡೊಂಬರಮತ್ತೂರು, ಹಿರೇಮರಳಿಹಳ್ಳಿ, ಇಚ್ಚಂಗಿ, ಹೆಸರೂರು ಗ್ರಾಮಗಳಲ್ಲಿ ‘ರೋಡ್ ಶೋ’ ಮಾಡುವ ಮೂಲಕ ಮತ ಯಾಚನೆ ಮಾಡಿದರು.
‘ಪ್ರಧಾನಿ ನರೇಂದ್ರ ಮೋದಿಯವರು ಬಲಿಷ್ಠ ನಾಯಕರಾಗಿದ್ದಾರೆ. ಭಾರತ ಭಿಕ್ಷುಕರ ದೇಶವಲ್ಲ, ದಾನ ಮಾಡುವ ದೇಶ ಎಂದು ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ. ಮೋದಿಯವರು ರಾಜಕೀಯ ರಂಗದ ಪವರ್ ಸ್ಟಾರ್ ಎಂದು ಬಣ್ಣಿಸಿದರು.
ದೇಶದಲ್ಲಿ ದುರ್ಬಲ ನಾಯಕತ್ವ ಇದ್ದಾಗ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತವೆ. ಬಲಿಷ್ಠ ನಾಯಕತ್ವ ಇದ್ದರೆ ಎಲ್ಲರೂ ಹೆದರುತ್ತಾರೆ. ಮೋದಿಯವರು ರಷ್ಯಾ– ಉಕ್ರೇನ್ ಯುದ್ಧಕ್ಕೆ ವಿರಾಮ ಕೊಡಿಸಿ, ನಮ್ಮ ದೇಶದ 24 ಸಾವಿರ ಮಕ್ಕಳನ್ನು ರಕ್ಷಣೆ ಮಾಡಿ ಕರೆದುಕೊಂಡು ಬಂದರು ಎಂದು ಗುಣಗಾನ ಮಾಡಿದರು.
ನಾನು ಸಿಎಂ ಇದ್ದಾಗ ಹಾನಗಲ್, ಸವಣೂರು ತಾಲ್ಲೂಕುಗಳಿಗೆ ₹480 ಕೋಟಿ ವೆಚ್ಚದ ಜಲ ಜೀವನ್ ಮಿಷನ್ ಯೋಜನೆಯನ್ನು ತುಂಗಭದ್ರಾ ನದಿಯಿಂದ ಸಿಂಗಟಾಲೂರು ಡ್ಯಾಮ್‌ನಿಂದ ನೀರು ತಂದು ಯೋಜನೆ ಜಾರಿ ಮಾಡಲಾಗುತ್ತಿದೆ ಎಂದರು.
ಆರ್ಥಿಕ ಪರಿಸ್ಥಿತಿ ದಿವಾಳಿ:
ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಆಡಳಿತ ಪಕ್ಷದ ಶಾಸಕರು ಅನುದಾನಕ್ಕೆ ಪತ್ರ ಕೊಟ್ಟರೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈ ವರ್ಷ ಪತ್ರ ಕೊಡಬೇಡಿ ಹಣ ಇಲ್ಲ ಎಂದು ಹೇಳಿದ್ದಾರೆ. ಪ್ರತಿಪಕ್ಷದವರಿಗೆ ಬೇಡ, ಅವರ ಪಕ್ಷದ ಶಾಸಕರಿಗಾದರೂ ಅನುದಾನ ಕೊಡಲಿ ಎಂದರು.
ನಾನು ಸಿ.ಎಂ ಆಗಿದ್ದಾಗ ಪ್ರತಿ ಪಕ್ಷದ ಶಾಸಕರ ಕ್ಷೇತ್ರಗಳಿಗೂ ₹25 ಕೋಟಿ ಅನುದಾನ ನೀಡಿದ್ದೆ. ಗ್ರಾಮ ಪಂಚಾಯಿತಿಗಳಿಗೆ ವಿಶೇಷ ಅನುದಾನ ನೀಡಿದ್ದೆ. ಇದು ಬಡವರ, ದಲಿತರ ವಿರೋಧಿ ಸರ್ಕಾರ. ಬರಗಾಲ ಬಂದರೂ ಒಂದು ಬೋರ್‌ವೆಲ್ ಕೊರೆಯಲು ಹಣ ಕೊಡುತ್ತಿಲ್ಲ. ನಮ್ಮ ಅವಧಿಯಲ್ಲಿ ಪ್ರವಾಹ ಬಂದಾಗ ಮನೆ ನಿರ್ಮಾಣಕ್ಕೆ ₹5 ಲಕ್ಷ ನೀಡಿದ್ದೇವೆ. ರೈತರಿಗೆ ಬೆಳೆ ಹಾನಿಗೆ ಎರಡು ಪಟ್ಟು ಪರಿಹಾರ ಕೊಟ್ಟಿದ್ದೇವೆ. ಇವರು ₹2 ಸಾವಿರ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.