ADVERTISEMENT

‘ಸರ್ಕಾರ ಬದಲಾದಂತೆ ಶಿಕ್ಷಣ ನೀತಿ ಬದಲು’-ಬಸವರಾಜ ಹೊರಟ್ಟಿ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಬಸವರಾಜ ಹೊರಟ್ಟಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 14:27 IST
Last Updated 30 ಆಗಸ್ಟ್ 2021, 14:27 IST
ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸಭಾಪತಿ 
ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸಭಾಪತಿ    

ಹಾವೇರಿ: ‘ಬೇರೆದೇಶಗಳಲ್ಲಿ ಸರ್ಕಾರ ಬದಲಾದರೂ ಶಿಕ್ಷಣ ನೀತಿಗಳು ಬದಲಾಗುವುದಿಲ್ಲ. ನಮ್ಮ ದೇಶದಲ್ಲಿ ಸರ್ಕಾರ ಬದಲಾದಂತೆ ಶಿಕ್ಷಣ ನೀತಿಗಳು ಬದಲಾಗುತ್ತವೆ. ಇದರಿಂದ ಶಿಕ್ಷಣ ಕ್ಷೇತ್ರಕ್ಕೆ ತೊಂದರೆಯಾಗುತ್ತದೆ’ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಸೋಮವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಹೊಸ ಶಿಕ್ಷಣ ನೀತಿ ಬಗ್ಗೆ ವಿಸ್ತೃತವಾದ ಅಧ್ಯಯನವಾಗಬೇಕು. ಕೆಲವು ಅಂಶಗಳು ತಿದ್ದುಪಡಿಯಾಗಬೇಕು. ನರ್ಸರಿ ಮತ್ತು ಶಾಲಾ ಶಿಕ್ಷಕರ ತರಬೇತಿ ಬೇರೆ ಬೇರೆಯಾದ್ದರಿಂದ, ಎರಡನ್ನೂ ಒಟ್ಟುಗೂಡಿಸುವುದು ಸರಿಯಲ್ಲ. ಮೊದಲಿದ್ದ ಶಾಲಾ ತರಗತಿಗಳ ವರ್ಗೀಕರಣವೇ (ಪ್ರಾಥಮಿಕ, ಮಾಧ್ಯಮಿಕ, ಪ್ರೌಢ) ಸರಿಯಿತ್ತು. ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗಬೇಕು’ ಎಂದರು.

ಈ ‘ಹೊಸ ರಾಷ್ಟ್ರೀಯ ಶಿಕ್ಷಣ ನೀತಿ’ ನಮ್ಮ ದೇಶದಲ್ಲಿ ಮೂರನೆಯದ್ದು. 1948ರಲ್ಲಿ ರಾಧಾಕೃಷ್ಣನ್‌ ಅವರು ಮೊದಲ ವರದಿ ಕೊಟ್ಟರು. 1952ರಲ್ಲಿ ರಂಗಸ್ವಾಮಿ ಮೊದಲಿಯಾರ್‌ ಎರಡನೇ ವರದಿ ಕೊಟ್ಟರು. 1964ರಲ್ಲಿ ಕೊಠಾರಿ ವರದಿ ಸಲ್ಲಿಕೆಯಾಯಿತು. ನಂತರ ಪ್ರಧಾನಿ ಇಂದಿರಾಗಾಂಧಿ ಅವರು ಮೊಟ್ಟಮೊದಲ ರಾಷ್ಟ್ರೀಯ ಶಿಕ್ಷಣ ಯೋಜನೆ ಜಾರಿಗೆ ತಂದರು. ನಂತರ ರಾಜೀವ್‌ಗಾಂಧಿ, ಈಗ ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ADVERTISEMENT

ಶಾಲೆ ಆರಂಭದ ಬಗ್ಗೆ ಪ್ರತಿಕ್ರಿಯಿಸಿ, ‘ಶಾಲೆ ಪ್ರಾರಂಭ ಮಾಡಲು ನಾನೇ ಸರ್ಕಾರಕ್ಕೆ ಹೇಳಿದ್ದೆ. ಶಾಲೆ ಬಂದ್‌ ಆದಾಗ ಮಕ್ಕಳು ಮತ್ತು ಶಾಲೆಯ ಸಂಬಂಧ ಕಡಿದು ಹೋಯಿತು. ಎಲ್ಲರನ್ನೂ ಪಾಸ್‌ ಮಾಡುತ್ತಾರೆ ಎಂಬುದು ಮಕ್ಕಳ ತಲೆಗೆ ಬಂದಿದೆ. ಇದು ಅಪಾಯಕಾರಿ ಬೆಳವಣಿಗೆ. ಶಾಲಾ ಮಕ್ಕಳನ್ನು ವರ್ಗೀಕರಿಸಿ, ಹಂತ ಹಂತವಾಗಿ ಭೌತಿಕ ತರಗತಿ ನಡೆಸುವುದು ಸೂಕ್ತ ಎಂದರು.

ಖಾಸಗಿ ಶಾಲೆಗಳ ಶಿಕ್ಷಕರು ಸಂಬಳವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿ, ‘ಅನುದಾನರಹಿತ ಶಾಲೆಗಳ ಕೆಲವು ಆಡಳಿತ ಮಂಡಳಿಗಳು ಶಿಕ್ಷಕರಿಗೆ ಕಿರುಕುಳ ನೀಡುತ್ತಿವೆ. ಇಂಗ್ಲಿಷ್‌ ಮಾಧ್ಯಮವಿದ್ದ ಕಡೆ ಸ್ವಲ್ಪ ಪಗಾರ ಕೊಡುತ್ತಿದ್ದಾರೆ. ಕನ್ನಡ ಮಾಧ್ಯಮವಿದ್ದ ಕಡೆ ಸಂಬಳ ಕೊಡುತ್ತಿಲ್ಲ. ನಾನು ಶಿಕ್ಷಣ ಸಚಿವನಾಗಿದ್ದಾಗ ₹500 ಕೋಟಿ ಬಿಡುಗಡೆ ಮಾಡಿಸಿದ್ದೆ. ಶಿಕ್ಷಕರ ಪರಿಸ್ಥಿತಿ ಕಷ್ಟವಿದೆ. ಅವರಿಗೆ ಕನಿಷ್ಠ ಸಂಬಳ ಕೊಡಬೇಕು ಎಂಬ ನಿಯಮವಿದ್ದರೂ ಕೆಲವು ಆಡಳಿತ ಮಂಡಳಿಗಳು ಪಾಲಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.