ADVERTISEMENT

ಪೌಷ್ಟಿಕ ಆಹಾರ ಸೇವನೆಯಿಂದ ಸುಂದರ ತ್ವಚೆ

‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಚರ್ಮರೋಗ ತಜ್ಞ ಡಾ.ರಾಘವೇಂದ್ರ ಜಿಗಳಿಕೊಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಜೂನ್ 2022, 16:34 IST
Last Updated 30 ಜೂನ್ 2022, 16:34 IST
ಡಾ.ರಾಘವೇಂದ್ರ ಜಿಗಳಿಕೊಪ್ಪ, ಚರ್ಮರೋಗ ತಜ್ಞ – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ
ಡಾ.ರಾಘವೇಂದ್ರ ಜಿಗಳಿಕೊಪ್ಪ, ಚರ್ಮರೋಗ ತಜ್ಞ – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ   

ಹಾವೇರಿ: ‘ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರ ಸೇವನೆ ಮತ್ತು ಕ್ರಮಬದ್ಧ ಜೀವನಶೈಲಿಯಿಂದ ತ್ವಚೆಯ ಸೌಂದರ್ಯ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಿತ್ಯ 3 ರಿಂದ 4 ಲೀಟರ್‌ ನೀರು ಕುಡಿಯುವುದರಿಂದ ಚರ್ಮದ ಕಾಂತಿಯನ್ನು ಕಾಪಿಟ್ಟುಕೊಳ್ಳಬಹುದು’ ಎನ್ನುತ್ತಾರೆ ಚರ್ಮರೋಗ ತಜ್ಞ ಡಾ.ರಾಘವೇಂದ್ರ ಜಿಗಳಿಕೊಪ್ಪ.

ಎಣ್ಣೆಯಲ್ಲಿ ಖರೀದ ಪದಾರ್ಥ, ಸಿಹಿ ತಿಂಡಿಗಳು, ಜಂಕ್‌ ಫುಡ್‌ ಮುಂತಾದವುಗಳ ಸೇವನೆಯಿಂದ ಆದಷ್ಟೂ ದೂರವಿರಬೇಕು. ವಿಟಮಿನ್‌ ‘ಸಿ’ ಇರುವ ಹಣ್ಣುಗಳನ್ನು ಹೆಚ್ಚಾಗಿ ಸೇವಿಸುವುದು, ನಿತ್ಯ 3 ಲೀಟರ್‌ ನೀರಿನ ಜತೆಗೆ ಹಣ್ಣು ಮತ್ತು ತರಕಾರಿಗಳ ಜ್ಯೂಸ್‌ ಬಳಸುವುದು, ಕ್ರಮಬದ್ಧ ನಿದ್ರೆ, ನಿತ್ಯ ಸ್ನಾನ, ನಿಯಮಿತ ವ್ಯಾಯಾಮ, ಶುಭ್ರ ಬಟ್ಟೆ ಧರಿಸುವುದು ಸೇರಿದಂತೆ ಉತ್ತಮ ಜೀವನಶೈಲಿ ರೂಢಿಸಿಕೊಂಡರೆ ಚರ್ಮದ ತಾಜಾತನ ಕಾಪಾಡಿಕೊಳ್ಳಬಹುದು ಎಂಬುದು ಅವರ ಸಲಹೆ.

‘ಸುಂದರ ತ್ವಚೆ ಹಾಗೂ ಹೊಳೆಯುವ ಮೈಕಾಂತಿ ಸೌಂದರ್ಯದ ಪ್ರತೀಕ ಎಂದು ಬಹಳಷ್ಟು ಜನರು ಭಾವಿಸಿದ್ದಾರೆ. ಚರ್ಮದ ಕಾಂತಿ ಮಾನಸಿಕ ಮತ್ತು ದೈಹಿಕ ಆರೋಗ್ಯದ ಸೂಚಕವೂ ಹೌದು. ಜಾಹೀರಾತುಗಳಿಗೆ ಮಾರು ಹೋಗಿ ಅತಿಯಾದ ಸೌಂದರ್ಯವರ್ಧಕ ಬಳಕೆಯಿಂದ ಉತ್ತಮ ಮೈಕಾಂತಿ ಪಡೆಯಲು ಸಾಧ್ಯವಿಲ್ಲ’ ಎಂಬುದು ಅವರ ಖಚಿತ ನುಡಿ.

ADVERTISEMENT

* ಲಿಂಗರಾಜ, ಮತ್ತೂರ– ತಲೆಯಲ್ಲಿ ಹೊಟ್ಟು ಜಾಸ್ತಿಯಾಗಿದ್ದು, ಪರಿಹಾರ ತಿಳಿಸಿ.
– ನೀವು ವಾರಕ್ಕೊಮ್ಮೆ ತಲೆ ಸ್ನಾನ ಮಾಡುತ್ತಿದ್ದು, ವಾರದಲ್ಲಿ ಕನಿಷ್ಠ ಮೂರು ದಿನವಾದರೂ ಸ್ನಾನ ಮಾಡಬೇಕು. ಅತಿಯಾದ ಬಿಸಿಲು ಮತ್ತು ದೂಳಿನಿಂದ ಬೆವರು ಜಾಸ್ತಿಯಾಗಿ ಹೊಟ್ಟು ಕಾಣಿಸಿಕೊಂಡಿದೆ. ಡ್ಯಾಂಡ್ರಫ್‌ ನಿವಾರಕ ಶಾಂಪು ಬಳಕೆಯಿಂದ ಹೊಟ್ಟು ಕ್ರಮೇಣ ನಿವಾರಣೆಯಾಗಲಿದೆ.

*ಗಣೇಶ ಹತ್ತಿಮತ್ತೂರ– ಗಾರೆ ಕೆಲಸ ಮಾಡುತ್ತೇನೆ, ಬಿಸಿಲಿಗೆ ಮುಖ ಕೆಂಪಾಗುತ್ತಿದೆ.
– ನೀವು ಬಿಸಿಲಿನಲ್ಲಿ ಕೆಲಸ ಮಾಡುವುದರಿಂದ ಬೆವರು ಜಾಸ್ತಿಯಾಗಿ ನೆವೆ ಕಾಣಿಸಿಕೊಂಡು ಚರ್ಮ ಕೆಂಪಾಗುತ್ತದೆ. ಸನ್‌ಬರ್ನ್‌ನಿಂದ ರಕ್ಷಣೆ ಪಡೆಯಲು ಸನ್‌ಸ್ಕ್ರೀನ್‌ ಬಳಸಬೇಕು. ಜತೆಗೆ ಮೈತುಂಬ ಬಟ್ಟೆ, ತಲೆಗೆ ಕ್ಯಾಪ್‌ ಬಳಸುವುದು ಉತ್ತಮ.

* ಜಾವೇದ್‌, ಬ್ಯಾಡಗಿ– ಮೈಯಲ್ಲಿ ಕೆರೆತ ಮತ್ತು ಕಪ್ಪು ಚುಕ್ಕೆಗಳಾಗಿವೆ. ಎರಡು–ಮೂರು ಕಡೆಗಳಲ್ಲಿ ತೋರಿಸಿದ್ದರೂ ಗುಣವಾಗಿಲ್ಲ.
–ಬಹುಶಃ ನಿಮಗೆ ಗಜಕರ್ಣ ಆಗಿರಬಹುದು. ಇದೊಂದು ಅಂಟುರೋಗವಾಗಿದ್ದು, ಮನೆಯ ಇತರ ಸದಸ್ಯರಿಗೂ ಹರಡುವ ಸಾಧ್ಯತೆಗಳಿರುತ್ತವೆ. ಇದಕ್ಕೆ 3 ತಿಂಗಳ ಚಿಕಿತ್ಸೆ ಅವಶ್ಯವಿದ್ದು, ಚರ್ಮ ರೋಗ ತಜ್ಞರ ಬಳಿ ಪರೀಕ್ಷಿಸಿಕೊಳ್ಳಿ.

* ಶಂಕ್ರಿಕೊಪ್ಪ ಗ್ರಾಮದ ಹೇಮಣ್ಣ ಶಿವೂರ, ಹಾನಗಲ್‌ನ ಮಲ್ಲೇಶ, ಸವಣೂರಿನ ಭೀಮಣ್ಣ– ಗಜಕರ್ಣದಿಂದ ಮೈಯೆಲ್ಲ ತುರಿಕೆ ಕಾಣಿಸಿಕೊಂಡಿದೆ. ಪರಿಹಾರ ತಿಳಿಸಿ.
– ನೀರಿನಲ್ಲಿ ಸದಾ ಕೆಲಸ ಮಾಡುವವರಿಗೆ, ತುಂಬಾ ಬೆವರುವವರಿಗೆ ಗಜಕರ್ಣ ಸಮಸ್ಯೆ ಹೆಚ್ಚು ಕಾಡುತ್ತದೆ. ಅತಿ ಬಿಗಿಯಾದ ಮತ್ತು ಹಸಿ (ಒದ್ದೆಯಾದ) ಬಟ್ಟೆಯನ್ನು ಧರಿಸಬಾರದು. ಇದು ದೊಡ್ಡ ಕಾಯಿಲೆ ಅಲ್ಲ. ಆದರೆ ಅಂಟು ಕಾಯಿಲೆ. 3 ತಿಂಗಳು ಫಂಗಸ್‌ ಮಾತ್ರೆ ತೆಗೆದುಕೊಂಡರೆ ನಿವಾರಣೆಯಾಗುತ್ತದೆ. ಚಿಕಿತ್ಸೆಗೆ ತಡ ಮಾಡಬಾರದು.

* ದಿಗಂಬರ, ನೆಗಳೂರ– ನನಗೆ 50 ವರ್ಷವಾಗಿದ್ದು, ಒಣ ತುರಿಕೆ ಸಮಸ್ಯೆ ಕಾಣಿಸಿಕೊಂಡಿದೆ.
– ಚಳಿಗಾಲದಲ್ಲಿ ಒಣತುರಿಕೆ ಸಮಸ್ಯೆ ಹೆಚ್ಚು ಬಾಧಿಸುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಚರ್ಮ ಒಣಗಿ ತುರಿಕೆ, ಇಸುಬು ಮತ್ತಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮಾಯಿಶ್ಚರೈಸಿಂಗ್‌ ಕ್ರೀಮ್‌ ಬಳಸುವುದರಿಂದ ಚರ್ಮ ಮೃದುವಾಗಿ ಒಣ ತುರಿಕೆ ನಿವಾರಣೆಯಾಗುತ್ತದೆ.

* ಸಿದ್ರಮ್ಮ, ಹಾವೇರಿ– ನನಗೆ 68 ವರ್ಷವಾಗಿದ್ದು, ಎಳೆಎಳೆಯಾಗಿ ಕೂದಲು ಉದರುತ್ತಿವೆ.
– ಸಸ್ಯಾಹಾರಿಗಳಿಗೆ ವಯಸ್ಸಾದ ನಂತರ ಕ್ಯಾಲ್ಸಿಯಂ, ಮಿನರಲ್ಸ್‌ ಹಾಗೂ ಕಬ್ಬಿಣದಂಶಗಳ ಕೊರತೆಯಾಗಿ ಕೂದಲು ಉದರುತ್ತದೆ. ನೀವು ಹಿಮೋಗ್ಲೊಬಿನ್‌, ಕ್ಯಾಲ್ಸಿಯಂ ಪ್ರಮಾಣ ಪರೀಕ್ಷಿಸಿಕೊಳ್ಳಿ. ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಉತ್ತಮ ಶಾಂಪು ಬಳಕೆಯಿಂದ ಕೂದಲು ಉದುರುವುದನ್ನು ನಿಯಂತ್ರಿಸಬಹುದು.

* ಕೆ.ಎಚ್.ಹಡಗಲಿ, ಬ್ಯಾಡಗಿ– ನನ್ನ ಪತ್ನಿಗೆ 5 ವರ್ಷಗಳಿಂದ ‘ಬಂಗು’ ಸಮಸ್ಯೆ ಕಾಡುತ್ತಿದ್ದು, ಚರ್ಮದ ಮೇಲೆ ಕಲೆಗಳು ಉಂಟಾಗಿವೆ.
– ಬಂಗು ಮೂಲತಃ ಕಾಯಿಲೆಯೇ ಅಲ್ಲ. ಚರ್ಮದ ಒಂದು ಸಣ್ಣ ಸಮಸ್ಯೆ. ಬಿಸಿಲಿನಲ್ಲಿ ಜಾಸ್ತಿ ಓಡಾಡುವವರಿಗೆ ಹಾಗೂ ಹಾರ್ಮೋನ್‌ ವ್ಯತ್ಯಯದಿಂದ ಬಂಗು ಸಮಸ್ಯೆ ಕಾಣಿಸುತ್ತದೆ. ಬಿಸಿಲಿನಲ್ಲಿ ಹೋಗುವಾಗ ಸನ್‌ಸ್ಕ್ರೀನ್‌ ಬಳಸಬೇಕು. ರಾತ್ರಿ ವೇಳೆ ಬಂಗು ನಿವಾರಕ ಕ್ರಿಮ್‌ ಲೇಪನ ಮಾಡಿಕೊಳ್ಳಬೇಕು.

*ಲಕ್ಷ್ಮೀ ಹಾವೇರಿ– ನನಗೆ ಒಂದು ವಾರದಿಂದ ಮೈಮೇಲೆ ಕೆಂಪು ಗಂದೆಗಳು ಕಾಣಿಸಿಕೊಂಡಿವೆ.
–ರೋಗನಿರೋಧಕ ಶಕ್ತಿ (ಇಮ್ಯುನಿಟಿ ಪವರ್‌)ವ್ಯತ್ಯಯವಾದಾಗ, ಅಲರ್ಜಿಯುಕ್ತ ಆಹಾರ ಪದಾರ್ಥ ತಿಂದಾಗ ಹಾಗೂ ಅತಿ ತಂಪಾದ ಮತ್ತು ಬಿಸಿಯಾದ ಗಾಳಿಯಿಂದಲೂ ಈ ಸಮಸ್ಯೆ ತಲೆದೋರುತ್ತದೆ. ನೀವೇಹೇಳಿದಂತೆ ನಿಮಗೆ ನೆಗಡಿ, ಕೆಮ್ಮು ಆದ ನಂತರ ಈ ಸಮಸ್ಯೆ ಕಾಣಿಸಿಕೊಂಡಿದೆ. ಅಂದರೆ ವೈರಸ್‌ ಸೊಂಕಿನಿಂದ ಬಂದಿರುವ ಸಾಧ್ಯತೆ ಇದೆ. 15 ದಿನ ಮಾತ್ರೆ ತೆಗೆದುಕೊಂಡರೆ ನೀವು ಆರಾಮಾಗುತ್ತೀರಿ.

*ಶ್ರೀನಿವಾಸ, ಮೇವುಂಡಿ– ನನಗೆ 26 ವರ್ಷ, ಅತಿಯಾಗಿ ಕೂದಲು ಉದುರುತ್ತಿವೆ.
– ಹಾರ್ಮೋನ್‌ ವ್ಯತ್ಯಾಸದಿಂದ ಮತ್ತು ಡ್ಯಾಂಡ್ರಫ್‌ನಿಂದ ಕೂದಲು ಉದರುತ್ತವೆ. ಅನುವಂಶೀಯತೆ, ವಿಟಮಿನ್‌ ಕೊರತೆ ಕೂಡ ಕಾರಣವಾಗಿರಬಹುದು. ನೀವು ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆದರೆ ‘ಹೇರ್‌ ಫಾಲ್‌’ ನಿಯಂತ್ರಿಸಬಹುದು.

*ದಾನೇಶ್ವರಿ, ರಟ್ಟಿಹಳ್ಳಿ– ನನಗೆ 59 ವರ್ಷ. ಅಂಗೈಯಲ್ಲಿ ಅಲರ್ಜಿಯಾಗಿದ್ದು, ಚರ್ಮ ಕಪ್ಪಾಗುತ್ತಿದೆ.
– ಇದು ಸೋರಿಯಾಸಿಸ್‌ ಅಥವಾ ಇಸುಬು ಇರಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರಿಗೆ ಸೋರಿಯಾಸಿಸ್‌ ದೇಹದ ತುಂಬ ಹರಡುತ್ತದೆ. ಇಮ್ಯುನಿಟಿ ಉತ್ತಮವಾಗಿದ್ದಾಗ ಇತರ ಭಾಗಗಳಿಗೆ ಹರಡುವ ಸಾಧ್ಯತೆ ಕಡಿಮೆ. ಚಿಕಿತ್ಸೆ ಪಡೆದರೆ, ನೂರಕ್ಕೆ ನೂರರಷ್ಟು ಗುಣವಾಗಬಹುದು. ವಾಸಿಯಾದ ನಂತರವೂ 3 ವರ್ಷ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆ ತೆಗೆದುಕೊಳ್ಳುವುದು ಕಡ್ಡಾಯ.

* ದೀಪಾ, ಶಿಗ್ಗಾವಿ– ಅಪ್ಪನಿಗೆ ತುರಿಕೆ ಸಮಸ್ಯೆ ಕಾಣಿಸಿಕೊಂಡಿದ್ದು, ಕಿರಿಕಿರಿ ಅನುಭವಿಸುತ್ತಿದ್ದಾರೆ.
– ಬಹುಶಃ ಇದು ಗಜಕರ್ಣ ಸಮಸ್ಯೆ ಇರಬಹುದು. ನಿತ್ಯ ಸ್ನಾನ ಮಾಡಿದ ನಂತರ ದೇಹದಲ್ಲಿ ತೇವಾಂಶ ಉಳಿಯದಂತೆ ನೋಡಿಕೊಳ್ಳಬೇಕು, ಒಣಗಿದ ಮತ್ತು ಸಡಿಲವಾದ ಬಟ್ಟೆ ಧರಿಸಬೇಕು. ದಿನಕ್ಕೆ 5 ರಿಂದ 6 ಲೀಟರ್‌ ನೀರು ಕುಡಿಯುವ ಮೂಲಕ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ವೈದ್ಯರ ಬಳಿ ಚಿಕಿತ್ಸೆ ಪಡೆದರೆ ಗಜಕರ್ಣ ನಿವಾರಣೆಯಾಗುತ್ತದೆ.

* ಗುಡವೇಶ, ಹಾವೇರಿ–ಅತಿಯಾಗಿ ಕೂದಲು ಉದರುತ್ತಿದ್ದು, ಬೋಳು ತಲೆಯಾಗುವ ಆತಂಕ ಕಾಡುತ್ತಿದೆ.
– ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕೂದಲು ಉದುರುವ ಸಮಸ್ಯೆ ಇದ್ದರೆ, ಅನುವಂಶೀಯತೆಯಿಂದ ನಿಮಗೂ ಬಂದಿರುವ ಸಾಧ್ಯತೆ ಇದೆ. ನಿತ್ಯ ವ್ಯಾಯಾಮ ಮಾಡುವುದು ಹಾಗೂ ಹೊರಗಡೆ ಜಂಕ್‌ಫುಡ್‌, ಫಾಸ್ಟ್‌ಫುಡ್‌ ತಿನ್ನುವುದನ್ನು ಕಡಿಮೆ ಮಾಡಿ. ಒತ್ತಡ ನಿವಾರಿಸಿಕೊಂಡು ಉತ್ತಮ ಜೀವನ ಶೈಲಿ ಅಳವಡಿಸಿಕೊಂಡರೆ ಕೂದಲು ಉದುರುವಿಕೆ ನಿಯಂತ್ರಣಕ್ಕೆ ಬರುತ್ತದೆ. ಇದಕ್ಕೆ ಚಿಕಿತ್ಸೆ ಕೂಡ ಲಭ್ಯವಿದೆ.

* ರಾಮಣ್ಣನವರ, ಬಮ್ಮನಹಳ್ಳಿ–ನನಗೆ ಮಧುಮೇಹವಿದ್ದು, ಫಂಗಸ್‌ ಮತ್ತು ಮೈತುರಿಕೆ ಸಮಸ್ಯೆ ಕಾಣಿಸಿಕೊಂಡಿದೆ.
– ವಯಸ್ಸಾದ ಹಾಗೆ ನರಗಳಲ್ಲಿ ಶಕ್ತಿ ಕಡಿಮೆಯಾಗಿ ಚರ್ಮ ತೆಳುವಾಗಿ ನಾನಾ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ವಾರಕ್ಕೆ ಮೂರು ಬಾರಿ ಎಣ್ಣೆ ಸ್ನಾನ ಮಾಡಬೇಕು. ಶುಗರ್‌ ಮಟ್ಟ 180 ದಾಟದಂತೆ ನೋಡಿಕೊಳ್ಳಬೇಕು. ವಿಟಮಿನ್‌ ಸಿ ಹಣ್ಣುಗಳನ್ನು (ಕಿತ್ತಳೆ, ಮೂಸಂಬಿ, ದ್ರಾಕ್ಷಿ) ನಿಯಮಿತವಾಗಿ ಸೇವಿಸಬೇಕು. ತುರಿಕೆ ಜಾಸ್ತಿ ಇದ್ದರೆ, ಚರ್ಮರೋಗ ವೈದ್ಯರ ಬಳಿ ಚಿಕಿತ್ಸೆ ಪಡೆಯಿರಿ.

* ಪೂಜಾ, ಹಾವೇರಿ–ಸ್ಪ್ಲಿಟ್‌ಹೇರ್‌ ಸಮಸ್ಯೆ ಕಾಡುತ್ತಿದೆ. ಪರಿಹಾರವೇನು?
– ಅತಿಯಾದ ಶಾಂಪು ಬಳಕೆಯಿಂದ ಕ್ಯೂಟಿಕಲ್‌ ಡ್ಯಾಮೇಜ್‌ ಆಗಿ ಸ್ಪ್ಲಿಟ್‌ ಹೇರ್‌ ಆಗುತ್ತದೆ. ಕೂದಲು ಒಣಗಿ ಉದುರುವ ಸಮಸ್ಯೆಯೂ ಕಾಡುತ್ತದೆ. ಸ್ನಾನ ಮಾಡುವಾಗ ಶಾಂಪು ಬಳಕೆ ನಂತರ ಹೇರ್‌ಕಂಡೀಶನರ್‌ ಬಳಸಬೇಕು. ಮ್ಯಾಯಿಶ್ಚರೈಸಿಂಗ್‌ ಶಾಂಪು ಬಳಸುವುದು ಅಗತ್ಯ. ಪೌಷ್ಟಿಕ ಆಹಾರ ಸೇವನೆಯಿಂದ ಚರ್ಮದ ಕಾಂತಿ ಮತ್ತು ಕೇಶರಾಶಿಯ ಆರೋಗ್ಯ ಕಾಪಾಡಿಕೊಳ್ಳಬಹುದು.

***

ಬಹೂಪಯೋಗಿ ‘ಲೇಸರ್‌ ಚಿಕಿತ್ಸೆ’
ಮೊಡವೆಯಿಂದ ಉಂಟಾಗುವ ಕಲೆಗಳ ನಿವಾರಣೆಗೆ, ಪರ್ಮನೆಂಟ್‌ ಟ್ಯಾಟೂ ಅಳಿಸಲು, ಹೆಣ್ಣುಮಕ್ಕಳಿಗೆ ಮುಖದ ಮೇಲೆ ಬೆಳೆಯುವ ಅನಗತ್ಯ ಕೂದಲು ನಿವಾರಣೆಗೆ, ಕೂದಲು ಉದುರುವುದನ್ನು ನಿಯಂತ್ರಿಸಲು, ತೊನ್ನು ಹಾಗೂ ಕರೇಸಿಬ್ಬು ಹೋಗಲಾಡಿಸಲು ‘ಲೇಸರ್‌ ಟ್ರೀಟ್‌ಮೆಂಟ್‌’ ಬಳಸುತ್ತೇವೆ.

ಲೇಸರ್‌ ಚಿಕಿತ್ಸೆ ಪಡೆದ ನಂತರ 3ರಿಂದ 5 ದಿನಗಳವರೆಗೆ ಬಿಸಿಲಿಗೆ ಹೋದರೆ ಚರ್ಮದಲ್ಲಿ ಉರಿ, ಬಾವು, ಮತ್ತು ಕೆಂಪಾಗುವ ಸಮಸ್ಯೆಗಳು ಕಾಣಿಸಿಕೊಂಡು ನಂತರ ಕಡಿಮೆಯಾಗುತ್ತವೆ. ಧೀರ್ಘಕಾಲಿನ ಅಡ್ಡಪರಿಣಾಮಗಳು ಇಲ್ಲದೇ ಇರುವುದರಿಂದ ಅಗತ್ಯ ಇರುವವರು ಲೇಸರ್‌ ಚಿಕಿತ್ಸೆ ಪಡೆಯಬಹುದು ಎನ್ನುತ್ತಾರೆ ಚರ್ಮರೋಗ ತಜ್ಞ ಡಾ.ರಾಘವೇಂದ್ರ ಜಿಗಳಿಕೊಪ್ಪ.

***

ಚರ್ಮದ ಆರೋಗ್ಯಕ್ಕೆ ಉಪಯುಕ್ತ ಸಲಹೆಗಳು
* ದಿನಕ್ಕೆ 7 ಗಂಟೆ ಕ್ರಮಬದ್ಧ ನಿದ್ರೆ, ಪೌಷ್ಟಿಕ ಆಹಾರ, 45 ನಿಮಿಷದ ವ್ಯಾಯಾಮ ಅಗತ್ಯ

* ನಿತ್ಯ 3 ಲೀಟರ್‌ ನೀರಿನ ಜತೆಗೆ ತಾಜಾ ಹಣ್ಣು ಮತ್ತು ತರಕಾರಿ ಜ್ಯೂಸ್‌ ಸೇವಿಸಿ

*ಮಾನಸಿಕ ಒತ್ತಡದಿಂದ ಮುಕ್ತರಾಗಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಿ

* ವಿಟಮಿನ್‌ ‘ಸಿ’ ಇರುವ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ, ಚರ್ಮದ ಕಾಂತಿ ಕಾಪಾಡಿಕೊಳ್ಳಿ

* ಸಿಹಿ ಪದಾರ್ಥ ಮತ್ತು ಎಣ್ಣೆ ಪದಾರ್ಥಗಳನ್ನು ಕಡಿಮೆ ತಿನ್ನಿ, ಚರ್ಮದ ಆರೋಗ್ಯ ಹೆಚ್ಚಿಸಿ

* ದೇಹದಲ್ಲಿ ಕೊಬ್ಬಿನ ಅಂಶ ಜಾಸ್ತಿಯಾದಾಗ ‘ನರಗುಳ್ಳೆ’ ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಅನುವಂಶೀಯತೆಯಿಂದಲೂ ಬರಬಹುದು.

* ವಯಸ್ಸಾದವರು ವಾರಕ್ಕೊಮ್ಮೆ ಎಣ್ಣೆ ಸ್ನಾನ ಮಾಡಿದರೆ ಚರ್ಮರೋಗದಿಂದ ಮುಕ್ತರಾಗಬಹುದು.

* ತುಂಬ ಆಮ್ಲದ ಅಂಶವಿರುವ ಅಂದರೆ 6 ಪಿ.ಎಚ್‌.ಗಿಂತ ಮೇಲ್ಪಟ್ಟ ಸಾಬೂನುಗಳನ್ನು ಬಳಸಬೇಡಿ.

***

(ಹೆಚ್ಚಿನ ಮಾಹಿತಿಗೆ ರಕ್ಷಾ ಹೆಲ್ತ್‌ ಕೇರ್‌, ಮುನ್ಸಿಪಲ್‌ ಹೈಸ್ಕೂಲ್‌ ರಸ್ತೆ, ಹಾವೇರಿ. ಮೊ:73491 56276 ಸಂಪರ್ಕಿಸಿ)
ಫೋನ್‌ ಇನ್‌ ನಿರ್ವಹಣೆ: ಸಿದ್ದು ಆರ್‌.ಜಿ.ಹಳ್ಳಿ, ಮಾರುತಿ ಪೇಟಕರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.