
ಹಾವೇರಿ: ಬೇಡ್ತಿ–ವರದಾ ನದಿ ತಿರುವು ಯೋಜನೆ ಅನುಷ್ಠಾನಕ್ಕೆ ಹೋರಾಟ ಶುರುವಾಗಿದ್ದು, ಸಂಘಟನೆಗಾಗಿ ಮಠಾಧೀಶರು ಮತ್ತು ಪಕ್ಷಾತೀತ ನಾಯಕರ ನೇತೃತ್ವದಲ್ಲಿ ಸಮಿತಿ ರಚಿಸಲು ತೀರ್ಮಾನಿಸಲಾಗಿದೆ.
ನಗರದ ಹುಕ್ಕೇರಿಮಠದಲ್ಲಿ ಮಠಾಧೀಶರು, ಕಾಂಗ್ರೆಸ್–ಬಿಜೆಪಿ ನಾಯಕರು, ರೈತ ಮುಖಂಡರ ಸಮ್ಮುಖದಲ್ಲಿ ಸೋಮವಾರ ನಡೆದ ಹೋರಾಟದ ಮೊದಲ ಸಭೆಯಲ್ಲಿ, ‘ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ, ಯೋಜನೆ ಜಾರಿಗೆ ಒತ್ತಾಯಿಸಿ ಮನವಿ ಸಲ್ಲಿಸೋಣ’ ಎಂಬ ನಿರ್ಧಾರ ಕೈಗೊಳ್ಳಲಾಯಿತು.
ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗೆ ಈ ಯೋಜನೆ ಪರಿಹಾರವಾಗಿದೆ. ಕಾಂಗ್ರೆಸ್ ಶಾಸಕ ರುದ್ರಪ್ಪ ಲಮಾಣಿ ಅವರೇ ವಿಧಾನಸಭೆಯ ಉಪಾಧ್ಯಕ್ಷರಿದ್ದಾರೆ. ಯೋಜನೆ ವಿರೋಧಿಸುವ ಉತ್ತರ ಕನ್ನಡ ಜಿಲ್ಲೆಯ ತಮ್ಮ ಶಾಸಕರ ಮನವೊಲಿಸಲಿ. ನಾನು ಅಲ್ಲಿಯ ಸಂಸದರ ಮನವೊಲಿಸುವೆ. ಯೋಜನೆ ಜಾರಿಗೆ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಡಬೇಕು’ ಎಂದು ಸಲಹೆ ನೀಡಿದರು.
ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ‘ಯೋಜನೆಯಲ್ಲಿ ರಾಜಕೀಯ ಬೇಡ. ಉತ್ತರ ಕನ್ನಡ ನಮ್ಮ ಪಕ್ಕದ ಜಿಲ್ಲೆ. ನಾವು ಬಯಲು ಸೀಮೆ ಜನ. ನೀರಿನ ಕೊರತೆ ಇರುವುದನ್ನು ಅವರಿಗೆ ತಿಳಿಸೋಣ’ ಎಂದರು. ಇದಕ್ಕೆ ಶಿಗ್ಗಾವಿ ಶಾಸಕ ಯಾಸೀರ್ ಅಹಮದ್ ಖಾನ್ ಪಠಾಣ, ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಧ್ವನಿಗೂಡಿಸಿದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಸವಣೂರು ದೊಡ್ಡಹುಣಸೆ ಕಲ್ಮಠದ ಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿದರು.
ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಕುಮಾರ ಸ್ವಾಮೀಜಿ, ಹೊಸರಿತ್ತಿಯ ಗುದ್ದಲೀಶ್ವರ ಸ್ವಾಮೀಜಿ, ಕರ್ಜಗಿಯ ಶಿವಯೋಗಿ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ ಪಾಲ್ಗೊಂಡಿದ್ದರು.
ವರದಾ–ಬೇಡ್ತಿ ನದಿ ಜೋಡಣೆ ಹೋರಾಟಕ್ಕೆ ಬೆಂಬಲವಿದೆ. ಡಿಪಿಆರ್ ಆದ ನಂತರ ತಜ್ಞರ ಅಭಿಪ್ರಾಯ ಪಡೆದು ಮುನ್ನಡೆಯುತ್ತೇವೆ.– ಶಿವಾನಂದ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವ
ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ನಮ್ಮ ಬದುಕು ಭವಿಷ್ಯದ ಪ್ರಶ್ನೆ. ಅದಕ್ಕಾಗಿ ನಮ್ಮ ಈ ಹೋರಾಟ. ಎಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಪ್ರಯತ್ನ ಮಾಡಿದರೆ ಯಶಸ್ಸು ನಿಶ್ಚಿತ– ಬಸವರಾಜ ಬೊಮ್ಮಾಯಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.