ಶಿಗ್ಗಾವಿ: ತಾಲ್ಲೂಕಿನ ಬಿಸನಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗವಿಲ್ಲದಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ವೃದ್ಧೆಯೊಬ್ಬರ ಶವವನ್ನು ರಾಷ್ಟ್ರೀಯ ಹೆದ್ದಾರಿಗೆ ತಂದು ಅಂತ್ಯಕ್ರಿಯೆಗೆ ಮುಂದಾಗಿದ್ದ ಘಟನೆ ಮಂಗಳವಾರ ನಡೆಯಿತು.
ತಾಲ್ಲೂಕು ಕೇಂದ್ರದಿಂದ 5 ಕಿ.ಮೀ. ದೂರದಲ್ಲಿರುವ ಬಿಸನಹಳ್ಳಿಯಲ್ಲಿ ಸುಮಾರು 500 ಜನಸಂಖ್ಯೆಯಿದೆ. ನಾರಾಯಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಗ್ರಾಮ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ.
ಕೃಷಿ ನಂಬಿಕೊಂಡು ಜೀವನ ಕಟ್ಟಿಕೊಂಡಿರುವ ಜನರು ಹೆಚ್ಚಾಗಿ ವಾಸವಿರುವ ಈ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಮಶಾನಕ್ಕೆ ಸೂಕ್ತ ಜಾಗವಿಲ್ಲದಿದ್ದರಿಂದ ಸಾಕಷ್ಟು ಸಮಸ್ಯೆ ಉಂಟಾಗುತ್ತಿದೆ.
ಗ್ರಾಮದಲ್ಲಿ ಯಾರಾದರೂ ತೀರಿಕೊಂಡರೆ, ಅವರ ಸ್ವಂತ ಜಮೀನಿನಲ್ಲಿಯೇ ಅಂತ್ಯಸಂಸ್ಕಾರಗಳನ್ನು ನಡೆಸಲಾಗುತ್ತಿದೆ. ಜಮೀನು ಇಲ್ಲದವರು ಯಾರಾದರೂ ಮೃತಪಟ್ಟರೆ, ಅವರ ಅಂತ್ಯಕ್ರಿಯೆ ಎಲ್ಲಿ ಮಾಡುವುದೆಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದೆ.
ಇಂಥ ಅಂತ್ಯಕ್ರಿಯೆಗಳ ಸಂದರ್ಭದಲ್ಲಿ ವಾಗ್ವಾದಗಳು ನಡೆಯುತ್ತಿದೆ. ಜಟಾಪಟಿ ನಡೆದ ಬಳಿಕ, ರಸ್ತೆಯ ಅಕ್ಕ–ಪಕ್ಕದಲ್ಲಿಯೇ ಅಂತ್ಯಕ್ರಿಯೆ ಮಾಡಿ ಮುಗಿಸಲಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಂತ್ಯಕ್ರಿಯೆ ವಿಚಾರವಾಗಿ ವೈಮನಸ್ಸುಗಳು ಮೂಡುತ್ತಿವೆ. ಇದೇ ಕಾರಣಕ್ಕೆ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ವೃದ್ಧೆಯೊಬ್ಬರ ಶವ ಇಟ್ಟು ಆಕ್ರೋಶ ಹೊರಹಾಕಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕಟ್ಟಿಗೆಗಳನ್ನು ಹೊಂದಿಸಿಟ್ಟು, ಅಲ್ಲಿಯೇ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿದರು. ಗ್ರಾಮದಲ್ಲಿಯೇ ಸ್ಮಶಾನಕ್ಕೆ ಜಾಗ ಗುರುತಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದಾದ ನಂತರ, ಹೆದ್ದಾರಿಯ ಸರ್ವೀಸ್ ರಸ್ತೆಯ ಸಮೀಪದಲ್ಲಿರುವ ಚಾಕಾಪುರ ರಸ್ತೆಯ ಬದಿಯಲ್ಲಿ ವೃದ್ಧೆಯ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
‘ಗ್ರಾಮ ವೃದ್ಧೆ ಯಲ್ಲಮ್ಮ ಮಹಾದೇವಪ್ಪ ಮಡಿವಾಳರ (90) ಅವರು ನಿಧನರಾಗಿದ್ದರು. ಅವರಿಗೆ ಗ್ರಾಮದಲ್ಲಿ ಸ್ವಂತ ಜಮೀನು ಇಲ್ಲ. ಗ್ರಾಮದಲ್ಲಿ ರುದ್ರಭೂಮಿಯೂ ಇಲ್ಲ. ಹೀಗಾಗಿ, ಅವರ ಅಂತ್ಯಸಂಸ್ಕಾರ ಎಲ್ಲಿ ಮಾಡಬೇಕೆಂಬುದು ತೋಚಲಿಲ್ಲ. ಅದೇ ಕಾರಣಕ್ಕೆ, ವೃದ್ಧೆಯ ಶವವನ್ನು ಹೆದ್ದಾರಿಗೆ ತಂದಿದ್ದೆವು’ ಎಂದು ಗ್ರಾಮಸ್ಥರು ಹೇಳಿದರು.
‘ಟ್ರ್ಯಾಕ್ಟರ್‌ನಲ್ಲಿ ಕಟ್ಟಿಗೆಗಳನ್ನು ತಂದು, ಹೆದ್ದಾರಿಯಲ್ಲಿ ಚಿತೆ ಮಾಡುತ್ತಿದ್ದೇವೆ. ಅಷ್ಟರಲ್ಲೇ ತಹಶೀಲ್ದಾರ್ ಸ್ಥಳಕ್ಕೆ ಬಂದು, ಸ್ಮಶಾನಕ್ಕೆ ಜಾಗ ಗುರುತಿಸುವುದಾಗಿ ಭರವಸೆ ನೀಡಿದರು’ ಎಂದರು.
‘ಗ್ರಾಮದಲ್ಲಿ ಸ್ಮಶಾನಕ್ಕೆ ಜಾಗ ನೀಡಲು ಕೆಲವರು ಒಪ್ಪಿಕೊಂಡಿದ್ದಾರೆ. ಆದರೆ, ಅವರಿಗೆ ಕಡಿಮೆ ದರ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಹೀಗಾಗಿ, ಅವರು ಜಾಗ ನೀಡುತ್ತಿಲ್ಲ. ಕಂದಾಯ ಇಲಾಖೆಯವರು ಭೂ ಮಾಲೀಕರ ಮನವಿಯಂತೆ, ಮಾರುಕಟ್ಟೆ ದರದಲ್ಲಿ ಜಮೀನು ಖರೀದಿಸಬೇಕು. ಅದನ್ನೇ ಸ್ಮಶಾನಕ್ಕೆ ನೀಡಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಗಂಗಣ್ಣ ಸವಣೂರ, ಉಮೇಶ ಅಂಗಡಿ, ವೀರೇಶ ಆಜೂರ, ಕಲ್ಲಪ್ಪ ಆಜೂರ, ಸೋಮಶೇಖರ ಆಜೂರ, ಪ್ರವೀಣ ಆಜೂರ, ಚಂದ್ರಶೇಖರ ಸದಾಶಿವಪೇಟೆಮಠ, ವೀರಬಸಪ್ಪ ಸವಣೂರ, ಚೇತನ ಮಡಿವಾಳರ, ನಾಗರಾಜ ಮಡಿವಾಳರ ಇದ್ದರು.
ಬಿಸನಹಳ್ಳಿಯಲ್ಲಿ ಸ್ಮಶಾನಕ್ಕಾಗಿ ಜಮೀನು ಗುರುತಿಸಿ ಸರ್ಕಾರಕ್ಕೆ ತಿಳಿಸಲಾಗುವುದು. ಗ್ರಾಮಸ್ಥರೇ ಸರ್ಕಾರದ ದರದಲ್ಲಿ ಜಮೀನು ಬಿಟ್ಟುಕೊಡುವ ಮೂಲಕ ಸಹಕಾರ ನೀಡಿದರೆ ಅನುಕೂಲಯಲ್ಲಪ್ಪ ಗೋಣೆಣ್ಣವರ, ಶಿಗ್ಗಾವಿ ತಹಶೀಲ್ದಾರ್
ಜಮೀನು ಇಲ್ಲದವರು ತೀರಿಕೊಂಡರೆ ಅವರ ಅಂತ್ಯಕ್ರಿಯೆ ಮಾಡುವುದೇ ಸವಾಲಾಗಿದೆ. ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಗ್ರಾಮಕ್ಕೆ ಸ್ಮಶಾನ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕುಉಮೇಶ ಅಂಗಡಿ, ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.