ಬಂಧನ
(ಪ್ರಾತಿನಿಧಿಕ ಚಿತ್ರ)
ಹಾವೇರಿ: ಬಿಟ್ ಕಾಯಿನ್ ವ್ಯವಹಾರದಲ್ಲಿ ಲಾಭಾಂಶ ನೀಡುವುದಾಗಿ ಹೇಳಿ ಜನರ ಬ್ಯಾಂಕ್ ಖಾತೆ ಪುಸ್ತಕಗಳನ್ನು ಪಡೆದು ಸೈಬರ್ ವಂಚನೆಗೆ ಬಳಸಿದ್ದ ಆರೋಪದಡಿ ಮೊಹಮ್ಮದ್ ಅಬು ಎಂಬುವವರನ್ನು ಹಾವೇರಿ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಶಿಗ್ಗಾವಿ ತಾಲ್ಲೂಕಿನ ಬಂಕಾಪುರದ ಕೆಲವರು, ಖಾತೆ ದುರ್ಬಳಕೆ ಬಗ್ಗೆ ದೂರು ನೀಡಿದ್ದರು. ಕೇರಳದ ಕ್ಯಾಲಿಕಟ್ ಜಿಲ್ಲೆಯ ಪುಥುಪ್ಪಡಿ ತಾಲ್ಲೂಕಿನ ಎಲಿಕಡ್ ಗ್ರಾಮದ ಮೊಹಮ್ಮದ್ ಅಬುನನ್ನು ಬಂಧಿಸಲಾಗಿದೆ. ಈತನ ಮಗನಾದ ಪ್ರಮುಖ ಆರೋಪಿ ಮಹ್ಮದ್ ಸಾಹಲ್ ತಲೆಮರೆಸಿ ಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿದರು.
‘ಹಲ್ವಾ ವ್ಯಾಪಾರಕ್ಕೆಂದು ಬಂಕಾಪುರಕ್ಕೆ ಬಂದಿದ್ದ ಆರೋಪಿ ಮೊಹಮ್ಮದ್, ತಮ್ಮದೇ ಮುಸ್ಲಿಂ ಸಮುದಾಯದ ಜನರನ್ನು ಪರಿಚಯಿಸಿಕೊಂಡಿದ್ದ. ತನ್ನ ಮಗ ಬಿಟ್ ಕಾಯಿನ್ (ಬಿಟಿಸಿ) ವ್ಯವಹಾರ ನಡೆಸುತ್ತಿರುವುದಾಗಿ ಹೇಳಿದ್ದ. ಬ್ಯಾಂಕ್ ಖಾತೆಗಳ ಪುಸ್ತಕ ಹಾಗೂ ಅದಕ್ಕೆ ಲಿಂಕ್ ಮಾಡಿದ ಸಿಮ್‌ಕಾರ್ಡ್‌ಗಳನ್ನು ನೀಡಿದರೆ, ಪ್ರತಿ ತಿಂಗಳು ಲಾಭದ ಹಣ ನೀಡುವುದಾಗಿ ಆಮಿಷವೊಡ್ಡಿದ್ದ. ಅದನ್ನು ನಂಬಿ 12 ಮಂದಿ ಖಾತೆ ವಿವರ ನೀಡಿದ್ದರು’ ಎಂದರು.
‘ದೇಶದಾದ್ಯಂತ ಸೈಬರ್ ವಂಚನೆ ಎಸಗಿದ್ದ ಆರೋಪಿಗಳು, ಅದೇ ಹಣವನ್ನು ಜನರ ಖಾತೆಗೆ ಜಮೆ ಮಾಡಿ ಡ್ರಾ ಮಾಡಿಕೊಂಡಿದ್ದರು. ವಹಿವಾಟು ಆಧರಿಸಿ ವಿವಿಧ ರಾಜ್ಯಗಳ ಪೊಲೀಸರು, ಖಾತೆದಾರರಿಗೆ ಇತ್ತೀಚೆಗೆ ನೋಟಿಸ್ ನೀಡಿದ್ದಾರೆ. ಅವಾಗಲೇ ಖಾತೆದಾರರಿಗೆ ವಂಚನೆ ಸಂಗತಿ ಗಮನಕ್ಕೆ ಬಂದಿದೆ. ಠಾಣೆಗೆ ದೂರು ನೀಡಿದ್ದಾರೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.