ADVERTISEMENT

ಗಾಂಧಿ ಸಿದ್ಧಾಂತದ ವಿರೋಧಿ ಬಿಜೆಪಿ: ಶಾಸಕ ಸಲೀಂ ಅಹ್ಮದ್

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 3:08 IST
Last Updated 29 ಡಿಸೆಂಬರ್ 2025, 3:08 IST
ಹಾವೇರಿಯ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಾಂಗ್ರೆಸ್ ಸಂಸ್ಥಾಪಣಾ ದಿನಾಚರಣೆ’ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿದರು
ಹಾವೇರಿಯ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಾಂಗ್ರೆಸ್ ಸಂಸ್ಥಾಪಣಾ ದಿನಾಚರಣೆ’ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿದರು   

ಹಾವೇರಿ: ‘ಬಿಜೆಪಿಯವರು ನರೇಗಾ ಯೋಜನೆಯಲ್ಲಿ ಮಹಾತ್ಮ ಗಾಂಧಿ ಅವರ ಹೆಸರು ತೆಗೆಯಲು ಮುಂದಾಗಿರುವುದು ದುರಂತದ ಸಂಗತಿ. ಬಿಜೆಪಿಯವರು ಗಾಂಧೀಜಿ ಹಾಗೂ ಅವರ ಸಿದ್ಧಾಂತದ ವಿರೋಧಿಗಳು’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ, ಶಾಸಕ ಸಲೀಂ ಅಹ್ಮದ್ ದೂರಿದರು.

ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪವನ್ನು ಬದಲಾವಣೆ ಮಾಡುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯ ಆತ್ಮಕ್ಕೆ ಕೊಡಲಿಯೇಟು ನೀಡಿದೆ. ಪ್ರತಿಯೊಬ್ಬರ ಹೃದಯದಲ್ಲಿ ಗಾಂಧೀಜಿಯವರು ಶಾಶ್ವತವಾಗಿ ನೆಲೆಸಿದ್ದಾರೆ. ಜನವರಿ 5ರಿಂದ ದೇಶಾದ್ಯಂತ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ ಕೈಗೊಳ್ಳಲಾಗುತ್ತಿದೆ. ಬಿಜೆಪಿ ಪಕ್ಷದ ಕೊನೆ ದಿನಗಳು ಪ್ರಾರಂಭವಾಗಿವೆ’ ಎಂದರು.

ADVERTISEMENT

‘ಕಾಂಗ್ರೆಸ್ ಕೇವಲ ಪಕ್ಷವಲ್ಲ. ಹೋರಾಟ, ಚಳವಳಿ ಹಾಗೂ ಜನರ ಶಕ್ತಿ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ, ರಾಷ್ಟ್ರೀಯ ಏಕತೆ ಮತ್ತು ಪ್ರಜಾಪ್ರಭುತ್ವದ ಸ್ಥಾಪನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಕಾಂಗ್ರೆಸ್ ಪಕ್ಷ, ಎಲ್ಲ ಜಾತಿ ಜನಾಂಗದವರಿಗೆ ಸಮಾನ ಅವಕಾಶ ಕಲ್ಪಿಸಿ ಭರವಸೆಯ ಬೆಳಕಾಗಿ ದೇಶವನ್ನು ಮುನ್ನಡೆಸಿದೆ’ ಎಂದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಶಾಸಕ ರುದ್ರಪ್ಪ ಲಮಾಣಿ, ಗ್ಯಾರಂಟಿ ಯೋಜನಾ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಂ.ಎಂ. ಹಿರೇಮಠ, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್. ಗಾಜೀಗೌಡ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.