ADVERTISEMENT

‘ಮೈತ್ರಿ’ ಪತನ; ಬಿಜೆಪಿ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 23 ಜುಲೈ 2019, 20:26 IST
Last Updated 23 ಜುಲೈ 2019, 20:26 IST
ಬಿಜೆಪಿ ಕಾರ್ಯಕರ್ತರು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದರು
ಬಿಜೆಪಿ ಕಾರ್ಯಕರ್ತರು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದರು   

ಹಾವೇರಿ: ‘ಮೈತ್ರಿ’ ಸರ್ಕಾರ ಪತನಗೊಂಡ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಮಂಗಳವಾರ ರಾತ್ರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ರಾತ್ರಿ 9 ಗಂಟೆ ಸುಮಾರಿಗೆ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಅವರಿಗೆ ಜೈಕಾರ ಕೂಗಿದರು. ಬಳಿಕ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ್ ಸಜ್ಜನ್, ‘ಅಪವಿತ್ರ ಮೈತ್ರಿ ಕೊನೆಗೂ ಅಂತ್ಯವಾಯಿತು. ಎಚ್‌.ಡಿ.ಕುಮಾರಸ್ವಾಮಿ ಅವರ ಭ್ರಷ್ಟ ಆಡಳಿತಕ್ಕೂ ತೆರೆಬಿತ್ತು. ಬಹುಮತ ಇಲ್ಲದಿದ್ದರೂ 14 ದಿನಗಳಿಂದ ಅಧಿಕಾರಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದ ಜೆಡಿಎಸ್–ಕಾಂಗ್ರೆಸ್ ನಾಯಕರಿಗೆ ತೀವ್ರ ಮುಖಭಂಗವಾಯಿತು. ಇನ್ನಾದರೂ ಅವರು ಪಾಠ ಕಲಿಯಬೇಕು’ ಎಂದು ವ್ಯಂಗ್ಯ ಮಾಡಿದರು.

ADVERTISEMENT

‘ಇನ್ನು ರಾಜ್ಯದಲ್ಲಿ ಅಭಿವೃದ್ಧಿಯ ಪರ್ವ ಶುರುವಾಗುತ್ತದೆ. ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಆಡಳಿತ ಇರುವುದರಿಂದ ಜನ ನೆಮ್ಮದಿಯಿಂದ ಬದುಕಬಹುದು. ಯಡಿಯೂರಪ್ಪ ಅವರು ಕೇಂದ್ರದಿಂದ ಹೆಚ್ಚಿನ ಅನುದಾನ ತಂದು ರಾಜ್ಯದ ಪ್ರಗತಿ ಮಾಡಲಿದ್ದಾರೆ. ಇನ್ನು ಮುಂದೆ ರೈತರ ಕಲ್ಯಾಣವಾಗಲಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದರಾಜ ಕಲಕೋಟಿ ಮಾತನಾಡಿ, ‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ, ವಚನ ಭ್ರಷ್ಟ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದರು. ರೈತರ ಸಾಲ ಸಂಪೂರ್ಣ ಮನ್ನಾ ಮಾಡುವುದಾಗಿ ಘೋಷಿಸಿ, ಎಲ್ಲರಿಗೂ ಟೋಪಿ ಹಾಕಿದರು. ‘ರೈತರು ಸಮರ್ಪಕ ದಾಖಲೆಗಳನ್ನು ಸಲ್ಲಿಸಲಿಲ್ಲ’ ಎಂದು ‘ವಿಫಲ ಮುಖ್ಯಮಂತ್ರಿ’ ಈಗ ರೈತರ ಮೇಲೇ ಆರೋಪ ಮಾಡುತ್ತಿದ್ದಾರೆ. ಅಧಿಕಾರದಿಂದ ಕೆಳಗಿಳಿಯುವಾಗಲೂ ಅವರು ವಚನಭ್ರಷ್ಟರಾಗಿಯೇ ಹೋದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.