ADVERTISEMENT

ಬಾಲಮಂದಿರ ಮಕ್ಕಳಿಗೆ ವಸತಿಶಾಲೆ ಭಾಗ್ಯ: 6ನೇ ತರಗತಿಗೆ ಉಚಿತ ಪ್ರವೇಶ

ಸಂತೋಷ ಜಿಗಳಿಕೊಪ್ಪ
Published 4 ಆಗಸ್ಟ್ 2024, 23:40 IST
Last Updated 4 ಆಗಸ್ಟ್ 2024, 23:40 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹಾವೇರಿ: ನಾನಾ ಕಾರಣಗಳಿಂದಾಗಿ ಬಾಲಮಂದಿರ ಸೇರುತ್ತಿರುವ ಮಕ್ಕಳಿಗೆ ಸರ್ಕಾರದ ವಸತಿಶಾಲೆಗಳಲ್ಲಿ ಉಚಿತ ಪ್ರವೇಶ ಕಲ್ಪಿಸಲು ಮುಂದಾಗಿರುವ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಅರ್ಹ ಮಕ್ಕಳ ಪಟ್ಟಿ ಸಿದ್ಧಪಡಿಸುತ್ತಿದೆ.

‘ಬಾಲಮಂದಿರದ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬೆಳೆಯಬೇಕು’ ಎಂಬ ಉದ್ದೇಶದಿಂದ ನಿರ್ದೇಶನಾಲಯವು ಈ ಹೊಸ ಯೋಜನೆ ರೂಪಿಸಿದೆ.

ADVERTISEMENT

ರಾಜ್ಯದ 30 ಜಿಲ್ಲೆಗಳ ಬಾಲಕರ ಬಾಲಮಂದಿರ ಹಾಗೂ ಬಾಲಕಿಯರ ಬಾಲಮಂದಿರದ ಅಧೀಕ್ಷಕರಿಗೆ ಪತ್ರ ಬರೆದಿರುವ ನಿರ್ದೇಶನಾಲಯದ ಯೋಜನಾ ನಿರ್ದೇಶಕರು, ‘ನಿಮ್ಮ ಬಾಲಮಂದಿರಲ್ಲಿರುವ ಮಕ್ಕಳನ್ನು ಸರ್ಕಾರಿ ವಸತಿ ಶಾಲೆಗಳಿಗೆ ಸೇರಿಸಲು ಕ್ರಮ ವಹಿಸಿ’ ಎಂದು ಸೂಚಿಸಿದ್ದಾರೆ.

‘ಬಾಲಮಂದಿರದಲ್ಲಿರುವ ಹೆಚ್ಚಿನ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಈ ಮಕ್ಕಳನ್ನು ಸರ್ಕಾರದ ವಸತಿ (ಮೊರಾರ್ಜಿ ದೇಸಾಯಿ, ರಾಣಿ ಚನ್ನಮ್ಮ ಹಾಗೂ ಇತರೆ) ಶಾಲೆಗಳಿಗೆ ಸೇರಿಸಿದರೆ ಉತ್ತಮ ವಿದ್ಯಾಭ್ಯಾಸ ಸಿಗಲಿದೆ.


ಬಾಲಮಂದಿರದಲ್ಲಿರುವ 6ನೇ ತರಗತಿಗೆ ಅರ್ಹವಿರುವ ಎಲ್ಲ ಮಕ್ಕಳನ್ನು ವಸತಿ ಶಾಲೆಗಳಿಗೆ ಸೇರಿಸಲು ಅವಕಾಶವಿದೆ. ನಿಮ್ಮ ಬಾಲಮಂದಿರದಲ್ಲಿರುವ ಅರ್ಹ ಮಕ್ಕಳನ್ನು ವಸತಿ ಶಾಲೆಗೆ ಸೇರಿಸಲು ಕ್ರಮ ಕೈಗೊಂಡು, ಅದರ ವರದಿಯನ್ನು ಕಚೇರಿಗೆ ಕಳುಹಿಸಿ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಬಾಲ ನ್ಯಾಯ ಕಾಯ್ದೆ ಪ್ರಕಾರ, ಪ್ರತಿಯೊಬ್ಬ ಮಗುವೂ ಕುಟುಂಬದ ವಾತಾವರಣದಲ್ಲಿ ಪೋಷಕರ ಜೊತೆ ಬೆಳೆಯಬೇಕು. ಏಕ ಪೋಷಕ ಹಾಗೂ ಇತರೆ ಕಾರಣದಿಂದ ಬಾಲಮಂದಿರದಲ್ಲಿರುವ ಮಕ್ಕಳನ್ನು
ಆಪ್ತ ಸಮಾಲೋಚನೆಗೆ ಒಳಪಡಿಸಬೇಕು. ಅವರಿಗೆ ಪ್ರಾಯೋಜಕತ್ವ ಹಾಗೂ ಸರ್ಕಾರದ ಇತರೆ ಯೋಜನೆಗಳಡಿ ಸೌಲಭ್ಯ ಒದಗಿಸಬೇಕು’ ಎಂದೂ ಪತ್ರದಲ್ಲಿ ತಿಳಿಸಲಾಗಿದೆ.

ಬಾಲಮಂದಿರದ ಮಕ್ಕಳನ್ನು ವಸತಿಶಾಲೆಗೆ ಸೇರಿಸಲು ಮಕ್ಕಳ ರಕ್ಷಣಾ ನಿರ್ದೇಶನಾಲಯ ಸೂಚಿಸಿದೆ. 6ನೇ ತರಗತಿಗೆ ಅರ್ಹರಿರುವ ಮಕ್ಕಳ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ನಡೆದಿದೆ
ಅನ್ನಪೂರ್ಣ ಸಂಗಳದ, ಹಾವೇರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ
ಉನ್ನತ ಶಿಕ್ಷಣಕ್ಕೆ ಅನುಕೂಲ
‘ಬಾಲ ಕಾರ್ಮಿಕ, ಅನಾಥ, ಭಿಕ್ಷಾಟನೆ ಜಾಲಕ್ಕೆ ಸಿಲುಕಿದ ಹಾಗೂ ಇತರೆ ಸಂದಿಗ್ಧ ಪರಿಸ್ಥಿತಿ ಎದುರಿಸುವ ಮಕ್ಕಳನ್ನು ರಕ್ಷಿಸಿ ಬಾಲ ಮಂದಿರಕ್ಕೆ ಸೇರಿಸಲಾಗುತ್ತದೆ. ಇಂಥ ಮಕ್ಕಳಿಗೆ ಸದ್ಯ ಬಾಲಮಂದಿರದ ಮೂಲಕ ವಿದ್ಯಾಭ್ಯಾಸ ಕೊಡಿಸಲಾಗುತ್ತಿದೆ. ಮಕ್ಕಳ ಉನ್ನತ ಶಿಕ್ಷಣದ ದೃಷ್ಟಿಯಿಂದ ಇದೀಗ ವಸತಿ ಶಾಲೆಗಳಿಗೆ ಸೇರಿಸಲು ತೀರ್ಮಾನಿಸಲಾಗಿದೆ’ ಎಂದು ನಿರ್ದೇಶನಾಲಯ ಅಧಿಕಾರಿಯೊಬ್ಬರು ಹೇಳಿದರು. ‘ವಸತಿ ಶಾಲೆಗೆ ಸೇರಲು ಅರ್ಹರಿರುವ ಮಕ್ಕಳು ಬಾಲಮಂದಿರದಲ್ಲಿದ್ದಾರೆ. ಪ್ರವೇಶ ಪರೀಕ್ಷೆ ಇಲ್ಲದೇ ಅವರನ್ನು ವಸತಿ ಶಾಲೆಗೆ ಸೇರಿಸಲು ಅವಕಾಶವಿದೆ. ಜಿಲ್ಲಾವಾರು ಪಟ್ಟಿ ಸಿದ್ಧಪಡಿಸಿ, ಆಯಾ ಜಿಲ್ಲೆಯಲ್ಲಿರುವ ವಸತಿ ಶಾಲೆಯ 6ನೇ ತರಗತಿಗೆ ಮಕ್ಕಳನ್ನು ಸೇರಿಸಲಾಗುವುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.