ಹಾನಗಲ್/ರಟ್ಟೀಹಳ್ಳಿ: ಭೂ ದಾಖಲೆಗಳ ಇಲಾಖೆಯ ಹಾನಗಲ್ ಸಹಾಯಕ ನಿರ್ದೇಶಕ ಎಸ್. ಚಂದ್ರಶೇಖರ್ (53) ಹಾಗೂ ರಟ್ಟೀಹಳ್ಳಿ–ಹಿರೇಕೆರೂರು ತಾಲ್ಲೂಕಿನ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಯಾಗಿದ್ದ ರೇವಣಸಿದ್ದಪ್ಪ ಮಾಳಿಗೇರ (58) ಅವರು ಅನುಮಾನಾಸ್ಪದ ರೀತಿ ಮೃತಪಟ್ಟಿದ್ದು, ಹಾನಗಲ್ ಹಾಗೂ ಹಿರೇಕೆರೂರು ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮನೆಯಲ್ಲಿ ಮೃತದೇಹ: ‘ತುಮಕೂರು ಜಿಲ್ಲೆಯ ಚಂದ್ರಶೇಖರ ಹಾನಗಲ್ ಕಚೇರಿಯಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು. ಹಾನಗಲ್‌ನಲ್ಲಿ ಒಂಟಿಯಾಗಿದ್ದರು. ಕುಟುಂಬದ ಸದಸ್ಯರು ತುಮಕೂರಿನಲ್ಲಿದ್ದಾರೆ’ ಎಂದು ಹಾನಗಲ್ ಪೊಲೀಸರು ಹೇಳಿದರು.
‘ಕಚೇರಿಗೂ ಬಾರದ ಮತ್ತು ದೂರವಾಣಿ ಕರೆಯು ಸ್ವೀಕರಿಸದ ಕಾರಣ ಕಚೇರಿಯ ಸಿಬ್ಬಂದಿಯು ಮನೆಗೆ ಹೋಗಿ ಪರಿಶೀಲಿಸಿದಾಗ, ಅವರು ಶವವಾಗಿ ಪತ್ತೆಯಾಗಿರುವುದು ಗೊತ್ತಾಯಿತು. ಮರಣೋತ್ತರ ಪರೀಕ್ಷೆಯ ನಂತರ ಅವರ ಸಾವಿನ ಕಾರಣ ತಿಳಿದುಬರಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಸೇತುವೆ ಬಳಿ ಶಿಕ್ಷಣಾಧಿಕಾರಿ ಮೃತದೇಹ: ರೇವಣಸಿದ್ದಪ್ಪ ಅವರ ಮೃತದೇಹ ಖಂಡೇಬಾಗೂರು ಸೇತುವೆ ಬಳಿ ಬುಧವಾರ (ಜುಲೈ 24) ಪತ್ತೆಯಾಗಿದೆ.
‘ಎರಡೂ ತಾಲ್ಲೂಕುಗಳ ಶಾಲೆಯಲ್ಲಿರುವ ದೈಹಿಕ ಶಿಕ್ಷಣದ ಶಿಕ್ಷಕರ ಮೇಲ್ವಿಚಾರಣೆ ಹಾಗೂ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ರೇವಣಸಿದ್ದಪ್ಪ ಅವರು ಜುಲೈ 22ರಂದು ಕಾಣೆಯಾಗಿದ್ದರು. ಈ ಬಗ್ಗೆ ಸಂಬಂಧಿಕರು ದೂರು ನೀಡಿದ್ದರು. ಅವರಿಗಾಗಿ ಹುಡುಕಾಟ ನಡೆಸುತ್ತಿರುವಾಗಲೇ, ಮೃತದೇಹ ಪತ್ತೆಯಾಗಿದೆ’ ಎಂದು ಹಿರೇಕೆರೂರು ಠಾಣೆ ಪೊಲೀಸರು ಹೇಳಿದರು.
‘ರೇವಣಸಿದ್ದಪ್ಪ ಅವರು ಹೆಚ್ಚಾಗಿ ಬಸ್‌ನಲ್ಲಿ ಓಡಾಡುತ್ತಿದ್ದರು. ಅವರು ಹಲವು ವರ್ಷಗಳಿಂದ ರಟ್ಟೀಹಳ್ಳಿ ಹಾಗೂ ಹಿರೇಕೆರೂರು ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಕಂ ಪರಿವೀಕ್ಷಣಾಧಿಕಾರಿ ಆಗಿದ್ದರು. ಅವರ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.