ADVERTISEMENT

ಜಾತಿ ಬಣ್ಣ ಹಚ್ಚಿ ಚುನಾವಣೆ ಗೆಲ್ಲುವ ಬೊಮ್ಮಾಯಿ: ಅಬ್ದುಲ್‌ ಕರೀಂ ಮೊಗಲಲ್ಲಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 13:56 IST
Last Updated 24 ಮಾರ್ಚ್ 2023, 13:56 IST
   

ಹಾವೇರಿ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚುನಾವಣೆಯಲ್ಲಿ ಜಾತಿ ಬಣ್ಣ ಹಚ್ಚಿ ಗೆಲ್ಲುತ್ತಾ ಬಂದಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಒಂದು ಪೈಸೆ ಸಹಾಯ ಮಾಡಿಲ್ಲ. ಮಸೀದಿಗಳಿಗೆ ಯಾವುದೇ ಅನುದಾನ ನೀಡಿಲ್ಲ. ಹೀಗಾಗಿ ಶಿಗ್ಗಾವಿ ಕ್ಷೇತ್ರದಲ್ಲಿ ಬೊಮ್ಮಾಯಿ ಎದುರು ಕಾಂಗ್ರೆಸ್‌ನಿಂದ ಯಾರೇ ಸ್ಪರ್ಧಿಸಿದರೂ ಗೆಲ್ಲುವುದು ನಿಶ್ಚಿತ’ ಎಂದು ಶಿಗ್ಗಾವಿ ಅಂಜುಮನ್‌ ಇಸ್ಲಾಂ ಕಮಿಟಿ ಸದಸ್ಯ ಅಬ್ದುಲ್‌ ಕರೀಂ ಮೊಗಲಲ್ಲಿ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಮುಸ್ಲಿಮರಿಗೆ ಭಯೋತ್ಪಾದಕರ ಜತೆ ನಂಟಿದೆ. ಹೀಗಾಗಿ ಮುಸ್ಲಿಂ ಅಭ್ಯರ್ಥಿಗೆ ಮತ ಹಾಕಬೇಡಿ. ಹಿಂದೂಗಳು ನಾವೆಲ್ಲರೂ ಒಗ್ಗೂಡೋಣ’ ಎಂದು ಬೊಮ್ಮಾಯಿ ಅವರು ಜಾತಿ ಬಣ್ಣ ಹಚ್ಚಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.

ಸಮಾಜವಾದಿ ಹಿನ್ನೆಲೆಯಿಂದ ಬಂದ ಬಸವರಾಜ ಬೊಮ್ಮಾಯಿ ಅವರ ಮೇಲೆ ಬಹಳ ನಿರೀಕ್ಷೆಗಳಿದ್ದವು. ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ಬಿಜೆಪಿ ಐಡಿಯಾಲಜಿ ಪ್ರಕಾರ ಕೆಲಸ ಮಾಡುತ್ತಿದ್ದಾರೆ. ಸಿಎಂ ಬಳಿ ಮುಸ್ಲಿಂ ಮುಖಂಡರು ಮನವಿ ಪತ್ರ ತೆಗೆದುಕೊಂಡು ಹೋದರೆ, ‘ನೀವು ನನಗೆ ಓಟು ಹಾಕಲ್ಲ, ನಿಮ್ಮ ಕೆಲಸ ಹೇಗೆ ಮಾಡಿಕೊಡುವುದು’ ಅನ್ನುವ ರೀತಿ ಮಾತನಾಡುತ್ತಾರೆ. ನಮ್ಮ ಸಮುದಾಯಕ್ಕೆ ವಿರುದ್ಧವಾಗಿದ್ದಾರೆ ಎಂದು ದೂರಿದರು.

ADVERTISEMENT

ಶಿಗ್ಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷ 20 ವರ್ಷಗಳಿಂದ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ಕೊಡುತ್ತಾ ಬಂದಿದೆ. ಈ ಬಾರಿಯೂ ಮುಸ್ಲಿಂ ಸಮುದಾಯದವರಿಗೇ ಟಿಕೆಟ್‌ ನೀಡಬೇಕು ಎಂದು ವರಿಷ್ಠರಿಗೆ ಮನವಿ ಸಲ್ಲಿಸಿದ್ದೇವೆ. ಕ್ಷೇತ್ರದಲ್ಲಿ 70 ಸಾವಿರ ಮುಸ್ಲಿಂ ಜನಸಂಖ್ಯೆ ಇದ್ದು, ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಿಗ್ಗಾವಿ ಅಂಜುಮನ್‌ ಕಮಿಟಿ ಅಧ್ಯಕ್ಷ ಸುಲೇಮಾನ್‌ ಖಾಜೀಖಾನ್‌, ಮುಖಂಡರಾದ ಮೌಲಾನ ಅಬ್ದುಲ್‌ ರಜಾಕ್‌, ಬಷೀರ್‌ ಅಹಮದ್‌ ಖಾನ್‌, ಖಲಂದರ್‌, ಅತಾವುಲ್ಲಾ ಖಾನ್‌ ಖಾಜೀಖಾನ್, ಬಾಬರ್‌ ಬುವಾಜಿ, ಸದ್ದಾಂ ದಿವಾನ್‌ನವರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.