ADVERTISEMENT

‘ಮಕ್ಕಳ ಸಾಹಿತ್ಯವು ಬಾಲಂಗೋಚಿಯಲ್ಲ’: ಸಾಹಿತಿ ಸತೀಶ ಕುಲಕರ್ಣಿ ಅಭಿಮತ

ಕಥಾ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 12:43 IST
Last Updated 29 ಜುಲೈ 2021, 12:43 IST
ಹಾವೇರಿಯಲ್ಲಿ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾಗರಾಜ ಎಂ. ಹುಡೇದ ಅವರ ‘ಅವತಾರ ಮತ್ತು ಹಾರುವ ಕುದುರೆ’ ಎಂಬ ಕಥಾ ಸಂಕಲನವನ್ನು ಬಿಡುಗಡೆ ಮಾಡಲಾಯಿತು 
ಹಾವೇರಿಯಲ್ಲಿ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾಗರಾಜ ಎಂ. ಹುಡೇದ ಅವರ ‘ಅವತಾರ ಮತ್ತು ಹಾರುವ ಕುದುರೆ’ ಎಂಬ ಕಥಾ ಸಂಕಲನವನ್ನು ಬಿಡುಗಡೆ ಮಾಡಲಾಯಿತು    

ಹಾವೇರಿ: ‘ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕನ್ನಡದ ಮಕ್ಕಳ ಸಾಹಿತ್ಯ ಹೊಸ ತಿರುವಿನಲ್ಲಿದೆ. ಹಿಂದಿನ ಆದರ್ಶವಾದವನ್ನು ಬಿಟ್ಟು ವಾಸ್ತವಿಕತೆಯಲ್ಲಿ ಹೊರಳುತ್ತಿರುವ ಮಕ್ಕಳ ಸಾಹಿತ್ಯವು ಪ್ರಧಾನ ಸಾಹಿತ್ಯದ ಬಾಲಂಗೋಚಿಯಲ್ಲ’ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.

ಸಾಹಿತಿ ಕಲಾವಿದರ ಬಳಗ, ಹಂಚಿನಮನಿ ಆರ್ಟ್‌ ಗ್ಯಾಲರಿ ಹಾಗೂ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಉತ್ತರ ಕನ್ನಡ ಈಚೆಗೆ ಏರ್ಪಡಿಸಿದ್ದ ಯುವ ಲೇಖಕ ನಾಗರಾಜ ಎಂ. ಹುಡೇದ ಅವರ ‘ಅವತಾರ ಮತ್ತು ಹಾರುವ ಕುದುರೆ’ ಎಂಬ ಕಥಾ ಸಂಕಲನವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕಥೆ ಹೆಣೆಯುವಿಕೆಯಲ್ಲಿ ಆಕರ್ಷಕ ತಂತ್ರಗಾರಿಕೆ ಮತ್ತು ಕುತೂಹಲ ಕೆರಳಿಸುವ ವಸ್ತುಗಳು ಮಕ್ಕಳ ಸಾಹಿತ್ಯಕ್ಕೆ ಬೇಕು. ನಾಗರಾಜ ಹುಡೇದರ ‘ಅವತಾರ ಮತ್ತು ಹಾರುವು ಕುದುರೆ’ ಕಥಾ ಸಂಕಲನದಲ್ಲಿ ಇಂತಹ ಕಸುವುಗಳಿದ್ದು, ಪರಿಸರ ಪ್ರೀತಿ ಮತ್ತು ರಕ್ಷಣೆಯೇ ಇವುಗಳ ಸಂದೇಶವಾಗಿದ್ದು, ಒಮ್ಮೆ ಓದಲಾರಂಭಿಸಿದರೆ ಹೀರಿಕೊಂಡುಬಿಡುವ ಗುಣ ಹೊಂದಿವೆ ಎಂದರು.

ADVERTISEMENT

ಡಾ.ಪುಷ್ಪಾ ಶೆಲವಡಿಮಠ ಮಾತನಾಡಿ, ‘ಮಕ್ಕಳೆಂದರೆ ಕಣ್ಣ ಮುಂದಿನ ಬೆಳಕು ಇದ್ದಂತೆ. ನಮ್ಮ ಸ್ವಾರ್ಥಕ್ಕಾಗಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬಾರದು. ಸಾಮಾಜಿಕ ಜಾಲತಾಣಗಳು ಮಕ್ಕಳಲ್ಲಿಯ ಸಹಜ ಕಲ್ಪನಾ ಶಕ್ತಿಯನ್ನು ಕೊಲ್ಲುತ್ತಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಕಥಾ ಸಂಕಲನದ ಪರಿಚಯ ಮಾಡಿದ ಲೇಖಕ ವೈ.ಬಿ. ಭಗವತಿ ಅವರು, ತಮ್ಮ ಸುತ್ತಮುತ್ತಲಿರುವ ಕಾಡು ನದಿ ಕೊಳ್ಳಗಳ ಸಹಜ ಪ್ರಕೃತಿ ಪ್ರೀತಿಯನ್ನು ಕಥೆಗಾರ ನಾಗರಾಜ ಹುಡೇದ ಅವರು ‘ಅವತಾರ ಮತ್ತು ಹಾರುವು ಕುದುರೆ’ ಸಂಕಲನದಲ್ಲಿ ಬಿಂಬಿಸಿದ್ದಾರೆ ಎಂದರು.

ಕಲಾವಿದ ಕರಿಯಪ್ಪ ಹಂಚಿನಮನಿ, ಶಿಕ್ಷಕ ಎಚ್. ಎಂ. ಹುಡೇದ, ಕುಮಾರಿ ದೇವಮ್ಮ ಕೊಂಚಗೇರಿ, ಶಿವಣ್ಣ ಬಣಕಾರ ಮುಂತಾದವರು ಮಾತನಾಡಿದರು.

ಲೇಖಕ ನಾಗರಾಜ ಹುಡೇದ ಮಾತನಾಡಿ, ‘ಉತ್ತರ ಕನ್ನಡ ಮತ್ತು ಹಾವೇರಿಯ ನೆಲ ನನ್ನ ಸಾಹಿತ್ಯದ ಬೆಳವಣಿಗೆಗೆ ಸದಾ ಪ್ರೋತ್ಸಾಹಿಸಿವೆ. ಹಾವೇರಿ ಸಾಹಿತ್ಯ ಬಳಗದ ಪ್ರೀತಿ ಮರೆಯಲಾಗದ್ದು’ ಎಂದರು.

ಸಾಹಿತಿಗಳಾದ ಸರ್ವಶ್ರೀ ನಾರಾಯಣ ಕಾಂಬಳೆ, ಎಲ್. ಬಸವರಾಜಪ್ಪ , ಗಂಗಾಧರ ಎಸ್.ಎಲ್, ಸುರೇಶ ಹುಡೇದ, ಪ್ರೊ.ಪಿ.ಸಿ. ಹಿರೇಮಠ, ಡಾ.ವ್ಹಿ.ಪಿ. ದ್ಯಾಮಣ್ಣನವರ, ಡಾ.ಮಹಾದೇವಿ ಕಣವಿ, ವಿರೂಪಾಕ್ಷ ಕಣಕಿ, ಅಮೃತಾ ಹುಡೇದ, ರಾಜೇಶ್ವರಿ ರವಿ ಸಾರಂಗಮಠ, ಪರಮೇಶ್ವರ ಲಮಾಣಿ ಪಾಲ್ಗೊಂಡಿದ್ದರು.

ಸಿ.ಆರ್. ಮಾಳಗಿ ಸ್ವಾಗತಿಸಿದರು. ಜಿ.ಎಂ. ಓಂಕಾರಣ್ಣನವರ ಕಾರ್ಯಕ್ರಮ ನಡೆಸಿದರು. ಈರಣ್ಣ ಬೆಳವಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.