ADVERTISEMENT

‘ಕರ್ನಾಟಕ ಬಂದ್‌’ಗೆ ನೀರಸ ಪ್ರತಿಕ್ರಿಯೆ

ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕರವೇ, ಜಯಕರ್ನಾಟಕ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 15:31 IST
Last Updated 5 ಡಿಸೆಂಬರ್ 2020, 15:31 IST
‘ಕರ್ನಾಟಕ ಬಂದ್‌’ ಬೆಂಬಲಿಸಿ ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶನಿವಾರ ‘ಜಯ ಕರ್ನಾಟಕ’ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು 
‘ಕರ್ನಾಟಕ ಬಂದ್‌’ ಬೆಂಬಲಿಸಿ ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶನಿವಾರ ‘ಜಯ ಕರ್ನಾಟಕ’ ಸಂಘಟನೆ ಮುಖಂಡರು ಪ್ರತಿಭಟನೆ ನಡೆಸಿದರು    

ಹಾವೇರಿ: ಮರಾಠಾ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ವಿವಿಧ ಕನ್ನಡ ಸಂಘಟನೆಗಳು ಶನಿವಾರ ಕರೆ ನೀಡಿದ್ದ ‘ಕರ್ನಾಟಕ ಬಂದ್‌’ಗೆ ಜಿಲ್ಲೆಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.ವಾಹನ ಸಂಚಾರ ಮತ್ತು ವ್ಯಾಪಾರ ವಹಿವಾಟಿನಲ್ಲಿ ಯಾವುದೇ ವ್ಯತ್ಯಯವಾಗದೆ, ಜನಜೀವನ ಎಂದಿನಂತೆಯೇ ಇತ್ತು.

ಮರಾಠಾ ಅಭಿವೃದ್ಧಿ ನಿಗಮ ರಚನೆ ಮತ್ತು ಶಾಸಕರ ಕನ್ನಡದ್ರೋಹಿ ನಡವಳಿಕೆಯನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬೆಳಗಾವಿ, ಬಸವಕಲ್ಯಾಣ, ಮಸ್ಕಿ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ದಿಢೀರನೆ 'ಮರಾಠಾ ಅಭಿವೃದ್ಧಿ ನಿಗಮ’ವನ್ನು ರಚಿಸುವ ಘೋಷಣೆ ಮಾಡಿತು. ಇದು ಅಪ್ಪಟ ರಾಜಕೀಯ ತಂತ್ರಗಾರಿಕೆಯಾಗಿದ್ದು, ಒಂದು ಭಾಷಿಕ ಸಮುದಾಯವನ್ನು ಅನೈತಿಕವಾಗಿ, ಅಸಾಂವಿಧಾನಿಕವಾಗಿ ಓಲೈಸುವ ತಂತ್ರವಾಗಿದೆ ಎಂದು ಕರವೇ ಮುಖಂಡರು ಕಿಡಿಕಾರಿದರು.

ADVERTISEMENT

ಕನ್ನಡ ಕಾರ್ಯಕರ್ತರ ಕುರಿತು ನಾಲಿಗೆ ಹರಿಬಿಟ್ಟು ಲಘುವಾಗಿ ಮಾತನಾಡುತ್ತಿರುವ ಶಾಸಕರ‌ ಮೇಲೆ ಶಿಸ್ತುಕ್ರಮ ಜರುಗಿಸಬೇಕು. ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಉದ್ದೇಶಿಸಿರುವ ಈ‌ ಶಾಸಕರುಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು.

ಜಯ ಕರ್ನಾಟಕ ಸಂಘಟನೆ:

‘ಕರ್ನಾಟಕ ಬಂದ್‌’ ಬೆಂಬಲಿಸಿ, ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶನಿವಾರ ಜಯಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾ ಘಟಕದ ಅಧ್ಯಕ್ಷ ಸುಭಾಸ ಬೆಂಗಳೂರ ಮಾತನಾಡಿ, ‘ಸದಾ ಕಾಲ ಕನ್ನಡಿಗರ ಭಾವನೆಗಳನ್ನು ಕೆರಳಿಸುತ್ತಾ ಬೆಳಗಾವಿ ನಮ್ಮದು ಎಂದು ಜಗಳ ತೆಗೆಯುವುದಲ್ಲದೇ, ಕರ್ನಾಟಕ ರಾಜ್ಯೋತ್ಸವದಂದು ‘ಕರಾಳ ದಿನ’ ಆಚರಿಸುವ ಮರಾಠಿಗಳ ಮತ್ತು ಎಂ.ಇ.ಎಸ್ ಪುಂಡರ ನಡವಳಿಕೆ ಬಗ್ಗೆ ಇಡೀ ನಾಡಿಗೇ ಗೊತ್ತಿದೆ. ಆದರೂ, ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ, ₹50ಕೋಟಿ ಹಣ ಮೀಸಲಿಟ್ಟಿರುವುದು ಸರಿಯಲ್ಲ. ಇದು ಕನ್ನಡಿಗರು ಮತ್ತು ಮರಾಠಾರ ನಡುವೆ ವೈಮನಸ್ಸನ್ನು ಉಂಟು ಮಾಡುತ್ತದೆ’ ಎಂದು ಹೇಳಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ ಆನವಟ್ಟಿ, ಜಿಲ್ಲಾ ಕಾರ್ಯಾಧ್ಯಕ್ಷ ರಮೇಶ ಜಾಲಿಹಾಳ, ಶ್ರೀನಿವಾಸ ಮುಗದೂರ, ಮಾರುತಿ ಹಾಲಗಿ, ಡಿ.ಕೆ.ಅರಸನಾಳ. ಶಾಹೀದ ದೇವಿಹೊಸುರ, ನವೀದ ಅಮ್ಮಿನಭಾವಿ, ಸಂಜಯ ಗಾಂದಿ ಸಂಜಿವಣ್ಣನವರ, ಫಕ್ಕೀರೇಶ ಕಟ್ಟಿಮನಿ ಮುಂತಾದವರು ಪಾಲ್ಗೊಂಡಿದ್ದರು.haveri

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.