ರಾಣೆಬೆನ್ನೂರು: ಮನೆ ಹಾಗೂ ನಿವೇಶನದ ಇ–ಸ್ವತ್ತು ನೀಡಲು ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬುಧವಾರ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಪ್ಪ ಬಣಕಾರ ಮಾತನಾಡಿ, ‘ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿನ ಪಿಡಿಒಗಳು ಒಂದು ಮನೆಯ ಇ–ಸ್ವತ್ತು ಮಾಡಿಕೊಡಲು ₹4,000ದಿಂದ ₹5,000ದಷ್ಟು ಹಣ ಪಡೆಯುತ್ತಾರೆ. ಹೆಚ್ಚು ಹಣ ಪಡೆಯುವವರ ವಿರುದ್ದ ಕ್ರಮ ಕೈಗೊಂಡು ಬಡವರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
‘ಇ–ಸ್ವತ್ತು ನೀಡಲು ಲಂಚ ಪಡೆಯುವಾಗ ಹಲಗೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತರ ಬಲೆಗೆ ಬಿದ್ದರು. ಸರ್ಕಾರ ನಿಗದಿಪಡಿಸಿದ ಸೇವಾ ಶುಲ್ಕವನ್ನಷ್ಟೇ ತುಂಬಿಸಿಕೊಂಡು, ಇ–ಸ್ವತ್ತು ನೀಡಬೇಕು. ಶುಲ್ಕ ತುಂಬಿದ್ದಕ್ಕೆ ರಸೀದಿ ಕೊಡದ ಮತ್ತು ಲಂಚ ಪಡೆಯುವ ಸಿಬ್ಬಂದಿ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ತಾಲ್ಲೂಕು ಪಂಚಾಯಿತಿ ಎದುರು ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ತಾಲ್ಲೂಕು ಪಂಚಾಯಿರಿ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ ಅವರಿಗೆ ಮನವಿ ಸಲ್ಲಿಸಲಾಯಿತು.
ಕೊಟ್ರೇಶಪ್ಪ ಎಮ್ಮಿ, ಪರಶುರಾಮ ಕುರುವತ್ತಿ, ರಿಯಾಜ್ ದೊಡ್ಡಮನಿ, ಮರಡೆಪ್ಪ ಚಳಗೇರಿ, ಶೋಭಾ ಮುದೇನೂರು, ಮೃತುಂಜಯ ಕರಿಯಜ್ಜಿ, ರಮೇಶ ಪೂಜಾರ, ಮಾಲತೇಶ ಮ್ಯಾಗೇರಿ, ಅಣ್ಣಪ್ಪ ಸಿ, ಮಂಜುನಾಥ ಸಾಂಭೋಜಿ, ಹನುಮಂತಗೌಡ ಪಾಟೀಲ, ತಿಪ್ಪೇಶ ಮಾದಾಪುರ, ಪರಶುರಾಮ ಕೋಲಕಾರ, ಸಿದ್ಧಾರೂಢ ಗುರುಂ, ಸಂಜೀವ್ ಕನವಳ್ಳಿ ಇದ್ದರು.
‘ಹಣ ಕೊಟ್ಟರೆಷ್ಟೇ ಕೆಲಸ’
‘ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಮನೆಯ ಇ–ಸ್ವತ್ತು ಮಾಡಿಕೊಡಲು ಗ್ರಾಮ ಪಂಚಾಯಿತಿಗೆ ಅಧಿಕಾರಿಗೆ ಅರ್ಜಿ ಕೊಟ್ಟರೆ ನಿರ್ಲಕ್ಷ್ಯ ಮಾಡುತ್ತಾರೆ. ಹಣ ಕೊಟ್ಟರಷ್ಟೇ ಬೇಗ ಇ–ಸ್ವತ್ತು ಮಾಡಿಕೊಡುತ್ತಾರೆ. ಹಣ ಕೊಡದಿದ್ದರೆ ವರ್ಷಗಟ್ಟಲೇ ಅಲೆದಾಡಿಸುತ್ತಾರೆ. ಈ ಬಗ್ಗೆ ಕೇಳಿದರೆ ಹಾರಿಕೆಯ ಉತ್ತರ ಕೊಡುತ್ತಾರೆ’ ಎಂದು ವೇದಿಕೆಯ ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಸಾವಕ್ಕಳವರ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.