ಹಾವೇರಿ: ಪ್ರಕರಣ–1: ರಾಣೆಬೆನ್ನೂರು ಕೇಂದ್ರ ನಿಲ್ದಾಣಕ್ಕೆ ಮೇ 9ರಂದು ಬಸ್‌ನಲ್ಲಿ ಬಂದಿದ್ದ ರಟ್ಟೀಹಳ್ಳಿ ತಾಲ್ಲೂಕಿನ ನೇಶ್ವಿ ಗ್ರಾಮದ ಶಿಲ್ಪಾ ಬಿ.ಆರ್. ಎಂಬುವವರ ಬ್ಯಾಗ್‌ನಲ್ಲಿದ್ದ ₹ 3.82 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿದೆ.
ಪ್ರಕರಣ–2: ಹಾವೇರಿ ಕೇಂದ್ರ ನಿಲ್ದಾಣಕ್ಕೆ ಮೇ 8ರಂದು ಬಸ್‌ನಲ್ಲಿ ಬಂದಿದ್ದ ಹಾನಗಲ್ ತಾಲ್ಲೂಕಿನ ಹೋತನಹಳ್ಳಿ ಗ್ರಾಮದ ಕುಸುಮಾ ಮಾಯರ ಎಂಬುವವರ ಬ್ಯಾಗ್‌ನಲ್ಲಿದ್ದ 65 ಗ್ರಾಂ ತೂಕದ ಚಿನ್ನಾಭರಣ ಕಳ್ಳತನವಾಗಿದೆ.
ಪ್ರಕರಣ–3: ಹುಬ್ಬಳ್ಳಿಯಿಂದ ಹಾವೇರಿ ಕೇಂದ್ರ ನಿಲ್ದಾಣಕ್ಕೆ ಜ. 12ರಂದು ಬಸ್ಸಿನಲ್ಲಿ ಬಂದಿದ್ದ ಆಯೀನಾ ಎಂಬುವವರ ₹ 1.25 ಲಕ್ಷ ಮೌಲ್ಯದ 25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ.
ಪ್ರಕರಣ–4: ಹಿರೇಕೆರೂರಿನಿಂದ ಸುಣ್ಣದಕೊಪ್ಪಕ್ಕೆ ಜ. 15ರಂದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬಳಿಯ ₹ 50 ಸಾವಿರ ನಗದು ಕಳ್ಳತನ ಮಾಡಲಾಗಿದೆ.
ಇವಿಷ್ಟೇ ಪ್ರಕರಣಗಳಲ್ಲ, ಜಿಲ್ಲೆಯಲ್ಲಿರುವ ಹಲವು ಬಸ್ ನಿಲ್ದಾಣಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ‘ಶಕ್ತಿ ಯೋಜನೆ’ಯಿಂದಾಗಿ ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಕಂಡುಬರುತ್ತಿದ್ದು, ಇದರ ನಡುವೆಯೇ ಕಳ್ಳರು ತಮ್ಮ ಕೈ ಚಳಕ ತೋರಿಸುತ್ತಿದ್ದಾರೆ.
ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದರಿಂದ, ಬಸ್ ನಿಲ್ದಾಣಗಳಲ್ಲಿ ಹಾಗೂ ಬಸ್‌ಗಳಲ್ಲಿ ಓಡಾಡಲು ಜನರು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಯಾವಾಗ ? ಯಾವ ನಿಲ್ದಾಣದಲ್ಲಿ ? ಯಾವ ಬಸ್‌ಗಳಲ್ಲಿ ಕಳ್ಳತನ ಆಗುತ್ತದೆ? ಎಂಬ ಆತಂಕವೂ ಕಾಡುತ್ತಿದೆ.
ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಗುತ್ತಲ, ಬಂಕಾಪುರ ಬಸ್ ನಿಲ್ದಾಣಗಳಲ್ಲಿಯೇ ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ನಡೆಯುತ್ತಿದೆ. ಇದರ ಜೊತೆಯಲ್ಲಿಯೇ ಚಲಿಸುತ್ತಿದ್ದ ಬಸ್‌ಗಳಲ್ಲಿಯೂ ಆಗಾಗ ಕಳ್ಳತನಗಳು ನಡೆಯುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಚಿನ್ನಾಭರಣ ಹಾಗೂ ಹಣ ಕಳೆದುಕೊಂಡವರು ಮಾತ್ರ ಠಾಣೆಗೆ ದೂರು ನೀಡುತ್ತಿದ್ದಾರೆ. ಸ್ವಲ್ಪ ಹಣ ಕಳೆದುಕೊಂಡವರು ಠಾಣೆ ಮೆಟ್ಟಿಲೇರುತ್ತಿಲ್ಲ.
ಜಿಲ್ಲೆಯ ಬಹುತೇಕ ನಿಲ್ದಾಣಗಳಲ್ಲಿ ಹಾಗೂ ಬಸ್ ಒಳಗೆ ಸಿ.ಸಿ.ಟಿ.ವಿ ಕ್ಯಾಮೆರಾಗಳಿಲ್ಲ. ಹಾವೇರಿ ನಿಲ್ದಾಣದಲ್ಲಿ ಕ್ಯಾಮೆರಾಗಳಿದ್ದರೂ ದೃಶ್ಯಗಳು ನಿಖರವಾಗಿ ಸೆರೆಯಾಗುತ್ತಿಲ್ಲ. ಎಚ್.ಡಿ. ಕ್ಯಾಮೆರಾಗಳಿಗೆ ಬದಲಾವಣೆ ಮಾಡುವಂತೆ ಪೊಲೀಸರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ವಾಕರಸಾಸಂ) ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ, ಹೊಸ ಕ್ಯಾಮೆರಾ ಅಳವಡಿಕೆಗೆ ಟೆಂಡರ್ ಕರೆದಿರುವುದಾಗಿ ಹೇಳುತ್ತಲೇ ಅಧಿಕಾರಿಗಳು ದಿನದೂಡುತ್ತಿದ್ದಾರೆ.
ಜನಸಂದಣಿಯಲ್ಲಿ ಕಳ್ಳರ ಕರಾಮತ್ತು: ಶಕ್ತಿ ಯೋಜನೆ ಜಾರಿಯಿಂದಾಗಿ ಜಿಲ್ಲೆಯ ಎಲ್ಲ ಬಸ್ ನಿಲ್ದಾಣಗಳಲ್ಲಿ ನಿತ್ಯವೂ ಜನಸಂದಣಿ ಕಂಡುಬರುತ್ತಿದೆ. ಬಸ್ ಹತ್ತುವಾಗ ಹಾಗೂ ಇಳಿಯುವಾಗ, ನೂಕುನುಗ್ಗಲು ಉಂಟಾಗುತ್ತಿದೆ. ಜೊತೆಗೆ, ಬಸ್‌ನಲ್ಲಿಯೂ ಕಿಕ್ಕಿರಿದು ನಿಂತುಕೊಂಡು ಜನರು ಪ್ರಯಾಣ ಮಾಡುತ್ತಿದ್ದಾರೆ.
ಜನಸಂದಣಿಯಲ್ಲಿಯೇ ಕಳ್ಳರು ನುಸುಳುತ್ತಿದ್ದು, ಮಹಿಳೆಯರ ಚಿನ್ನಾಭರಣ ಕದ್ದುಕೊಂಡು ಪರಾರಿಯಾಗುತ್ತಿದ್ದಾರೆ. ಕಳ್ಳರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದಾರೆ. ನಿಲ್ದಾಣಗಳಲ್ಲಿಯೇ ನಿಲ್ಲುವ ಕಳ್ಳರು, ಮಹಿಳೆಯರ ಬ್ಯಾಗ್‌ಗಳನ್ನು ಗುರುತಿಸಿಟ್ಟುಕೊಳ್ಳುತ್ತಿದ್ದಾರೆ. ಮಹಿಳೆಯರು ಬಸ್ ಹತ್ತುವ, ಇಳಿಯುವ ಸಂದರ್ಭದಲ್ಲಿ ಜನಸಂದಣಿಯಲ್ಲಿ ಬ್ಯಾಗ್ ಜೀಪು ತೆರೆದು ಚಿನ್ನಾಭರಣ ಹಾಗೂ ನಗದು ಕದಿಯುತ್ತಿದ್ದಾರೆ.
ನಾಲ್ಕೇ ತಿಂಗಳಿನಲ್ಲಿ 13 ಪ್ರಕರಣ: ‘2025ರ ಜನವರಿಯಿಂದ ಏಪ್ರಿಲ್‌ವರೆಗೆ ಜಿಲ್ಲೆಯ ಹಾವೇರಿ, ರಾಣೆಬೆನ್ನೂರು, ಗುತ್ತಲ, ಬಂಕಾಪುರ ಬಸ್ ನಿಲ್ದಾಣಗಳಲ್ಲಿ ಒಟ್ಟು 13 ಕಳ್ಳತನ ಪ್ರಕರಣಗಳು ನಡೆದಿವೆ. ₹ 23.10 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ಕದ್ದಿದ್ದಾರೆ. ₹ 50 ಲಕ್ಷ ನಗದು ಸಹ ಕಳ್ಳತನವಾಗಿದೆ’ ಎಂದು ಜಿಲ್ಲಾ ಎಸ್ಪಿ ಅಂಶುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬಂಕಾಪುರ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ₹ 1.65 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಅದೇ ಠಾಣೆಯಲ್ಲಿ ದಾಖಲಾದ ಇನ್ನೆರೆಡು ಪ್ರಕರಣಗಳ ತನಿಖೆ ಮುಂದುವರಿದಿದೆ’ ಎಂದು ಹೇಳಿದರು.
‘ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ, ₹ 50 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.
ಪ್ರಕರಣ ಭೇದಿಸಲು ಸವಾಲು:
ನಿಲ್ದಾಣಗಳಲ್ಲಿ ನಡೆಯುವ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳ ಸುಳಿವು ಪತ್ತೆ ಮಾಡಲು ಪೊಲೀಸರು ಹಲವು ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಆದರೆ, ಆರೋಪಿಗಳ ಸುಳಿವು ಮಾತ್ರ ಲಭ್ಯವಾಗುತ್ತಿಲ್ಲ. ನಿಲ್ದಾಣದೊಳಗೆ ಹಾಗೂ ಬಸ್‌ನಲ್ಲಿ ಕ್ಯಾಮೆರಾಗಳು ಇಲ್ಲದಿರುವುದರಿಂದ, ತನಿಖೆಗೆ ಹಿನ್ನೆಡೆ ಉಂಟಾಗುತ್ತಿರುವುದಾಗಿ ಪೊಲೀಸರು ಹೇಳುತ್ತಿದ್ದಾರೆ.
‘ಹಾವೇರಿ ಬಸ್ ನಿಲ್ದಾಣಗಳಲ್ಲಿ ನಾಲ್ಕೇ ತಿಂಗಳಿನಲ್ಲಿ 4 ಕಳ್ಳತನ ಪ್ರಕರಣ ವರದಿಯಾಗಿದ್ದು, ಕಳ್ಳರು ಇದುವರೆಗೂ ಪತ್ತೆಯಾಗಿಲ್ಲ. ನಿಲ್ದಾಣದಲ್ಲಿ 6 ಕ್ಯಾಮೆರಾಗಳಿದ್ದರೂ ಉಪಯೋಗವಿಲ್ಲ. ಹಳೇ ಕ್ಯಾಮೆರಾಗಳನ್ನು ಬದಲಾವಣೆ ಮಾಡುವಂತೆ ವಾಕರಸಾಸಂ ಅಧಿಕಾರಿಗಳಿಗೆ ಹಲವು ಬಾರಿ ಹೇಳಲಾಗಿದೆ. ಆದರೆ, ಅವರು ಕ್ಯಾಮೆರಾ ಬದಲಾವಣೆ ಮಾಡುತ್ತಿಲ್ಲ’ ಎಂದು ಪೊಲೀಸರು ಹೇಳಿದರು.
ಮಹಿಳೆಯರ ಸುರಕ್ಷತೆಗೂ ಧಕ್ಕೆ
‘ಕೆಲ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿಗಳಿದ್ದು ಹಲವು ಕಡೆ ಪ್ರತ್ಯೇಕ ಕೊಠಡಿಗಳಿಲ್ಲ. ಇದ್ದರೂ ನಿರ್ವಹಣೆ ಕೊರತೆಯಿಂದಾಗಿ ಕೊಠಡಿಗಳು ಪಾಳು ಬಿದ್ದಿವೆ. ನಿಲ್ದಾಣದಲ್ಲಿರುವ ಸಂದರ್ಭದಲ್ಲಿಯೂ ಮಹಿಳೆಯರ ಸುರಕ್ಷತೆಗೆ ಧಕ್ಕೆ ಉಂಟಾಗುತ್ತಿದೆ’ ಎಂದು ಹಾವೇರಿ ನಿವಾಸಿ ವಿಜಯಲಕ್ಷ್ಮಿ ದೂರಿದರು.
‘ನಿಲ್ದಾಣದಲ್ಲಿ ಓಡಾಡುವ ಅಪರಿಚಿತರು ಮಹಿಳೆಯರನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಮರ್ಯಾದೆಗೆ ಹೆದರಿ ಮಹಿಳೆಯರು ದೂರು ನೀಡುತ್ತಿಲ್ಲ. ನಿಲ್ದಾಣಗಳಲ್ಲಿ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಅವರು ಆಗ್ರಹಿಸಿದರು.
ನಿಲ್ದಾಣಗಳಲ್ಲಿ ಮೊಬೈಲ್ ಕಳ್ಳತನ
ಬಸ್ ನಿಲ್ದಾಣಗಳಲ್ಲಿ ಓಡಾಡುವ ಜನರ ಮೊಬೈಲ್‌ಗಳನ್ನೂ ಕಳ್ಳತನ ಮಾಡಲಾಗುತ್ತಿದೆ. ಹಾವೇರಿ ರಾಣೆಬೆನ್ನೂರು ಗುತ್ತಲ ಬಂಕಾಪುರ ಹಾನಗಲ್ ಶಿಗ್ಗಾವಿ ಸವಣೂರು ಹಿರೇಕೆರೂರು ನಿಲ್ದಾಣಗಳಲ್ಲಿ ಹಲವರ ಮೊಬೈಲ್‌ಗಳು ಕಳ್ಳತನವಾಗಿವೆ. ಮೊಬೈಲ್ ಕಳ್ಳತನ ಸಂಬಂಧ ಸಂತ್ರಸ್ತರು ಠಾಣೆಗೆ ಮಾಹಿತಿ ನೀಡುತ್ತಿದ್ದಾರೆ. ಇ–ಲಾಸ್ಟ್ ರಿಪೋರ್ಟ್‌ನಲ್ಲಿ ಮಾತ್ರ ದೂರು ಪಡೆಯುತ್ತಿರುವ ಪೊಲೀಸರು ಮೊಬೈಲ್ ಪತ್ತೆಗಾಗಿ ತನಿಖೆ ನಡೆಸುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ ಮೊಬೈಲ್ ಕದ್ದ ಕಳ್ಳರ ಪತ್ತೆ ಕಾರ್ಯ ವಿಳಂಬವಾಗುತ್ತಿದೆ.
‘ನಿಲ್ದಾಣ ಹಾಗೂ ಬಸ್‌ಗಳಲ್ಲಿ ಸುರಕ್ಷತೆ ಇಲ್ಲದಂತಾಗಿದೆ. ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು ಬಸ್‌ನಲ್ಲಿ ಓಡಾಡಲು ಭಯವಾಗುತ್ತಿದೆ. ಚಿನ್ನಾಭರಣ ನಗದು ಮೊಬೈಲ್ ಕಳೆದುಕೊಂಡ ಕೆಲವರು ಮಾತ್ರ ಠಾಣೆಗೆ ದೂರು ನೀಡುತ್ತಿದ್ದಾರೆ. ಹಲವರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ರಾಣೆಬೆನ್ನೂರಿನ ನಿವಾಸಿ ಚಂದ್ರಶೇಖರ ಹೇಳಿದರು.
‘ಶಕ್ತಿ ಯೋಜನೆಯಿಂದಾಗಿ ಮಹಿಳೆಯರು ಬಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಬಸ್‌ಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಬೇಕು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ನಿಲ್ದಾಣ ಹಾಗೂ ಬಸ್‌ಗಳಲ್ಲಿ ಕಳ್ಳತನ ಮಾಡುವವರನ್ನು ಪೊಲೀಸರು ಬೇಗನೇ ಪತ್ತೆ ಮಾಡುತ್ತಿಲ್ಲ. ಹೀಗಾಗಿ ಕಳ್ಳರು ಪದೇ ಪದೇ ಕಳ್ಳತನ ಮಾಡುತ್ತಿದ್ದಾರೆಲಲಿತಾ ಕೆ.ಸೋಮಾಪುರ, ಹಾವೇರಿ ನಿವಾಸಿ
ಹಲವು ನಿಲ್ದಾಣ ಹಾಗೂ ಬಸ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳಿಲ್ಲ. ಅಳವಡಿಕೆ ಮಾಡುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.ಅಂಶುಕುಮಾರ, ಎಸ್ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.