
ಬ್ಯಾಡಗಿ: ಇಲ್ಲಿಯ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಸತಿ ನಿಲಯದ ವಿದ್ಯಾರ್ಥಿಯೊಬ್ಬ ಕೆರೆಯಲ್ಲಿ ಮುಳುಗಿ ಭಾನುವಾರ ಮೃತಪಟ್ಟಿದ್ದು, ಆತನ ಶವ ಸೋಮವಾರವೂ ಪತ್ತೆಯಾಗದ ಹಿನ್ನೆಲೆಯಲ್ಲಿ ಆಗ್ನಿಶಾಮಕ ಸಿಬ್ಬಂದಿ ಹಾಗೂ ಮುಳುಗು ತಜ್ಞರ ತಂಡ ವಾಪಸ್ಸಾಗಿದೆ.
ಬಹಳಷ್ಟು ನಿರೀಕ್ಷೆ ಇಟ್ಟುಕೊಂಡು ಓದಲು ಕಳಿಸಿದ ಮಗ ಶವವಾದನಲ್ಲ ಎಂದು ಪಾಲಕರು ರೋಧಿಸುತ್ತಿರುವ ದೃಶ್ಯಗಳು ಹೃದಯವನ್ನು ಕಲಕುವಂತಿದ್ದವು. ಮೃತ ರಾಹುಲ್ ಶೆಟ್ಟೆಣ್ಣನವರ (17) ಡಾ.ಬಿ.ಆರ್.ಅಂಬೇಡ್ಕರ್ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ. ಭಾನುವಾರ ಐದು ಮಂದಿ ಸೇರಿ ಈಜಲು ತೆರಳಿದಾಗ ಈ ಅವಘಡ ಸಂಭವಿಸಿದೆ.
ಆದರೆ ಭದ್ರತಾ ಸಿಬ್ಬಂದಿ, ಮೇಲ್ವಿಚಾರಕ, ಅಡುಗೆಯರು ಇದ್ದರೂ ವಸತಿ ನಿಲಯದ ಐದು ವಿದ್ಯಾರ್ಥಿಗಳು ಯಾರಿಗೂ ಹೇಳದೆ ಹೊರಗೆ ಹೇಗೆ ತೆರಳಿದರು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇದನ್ನು ಉನ್ನತ ಅಧಿಕಾರಿಗಳಿಂದ ತನಿಖೆ ನಡೆಸುವಂತೆಯೂ ಆಗ್ರಹಿಸಿದ್ದಾರೆ.
ಸಿಬ್ಬಂದಿ ನಿರ್ಲಕ್ಷ್ಯ: ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು 15 ದಿನ ರಜೆಯ ಮೇಲಿದ್ದು, ಹಾವೇರಿ ಜಿಲ್ಲಾ ಕಚೇರಿಯ ಗ್ರೇಡ್–2 ಅಧಿಕಾರಿಗೆ ಪ್ರಭಾರವನ್ನು ವಹಿಸಲಾಗಿದೆ. ಎರಡು ನಿಲಯದ ಜವಾಬ್ದಾರಿಯನ್ನು ಒಬ್ಬ ವಾರ್ಡ್‌ನ್‌ಗೆ ವಹಿಸಲಾಗಿದೆ.
ಸಿಬ್ಬಂದಿಯ ಕೊರತೆಯಿಂದ ಇಂತಹ ಅವಘಡಗಳು ಸಂಭವಿಸಲು ಕಾರಣವಾಗಿದ್ದು, ಮೇಲಾಧಿಕಾರಿಯಿಂದ ತನಿಖೆ ಕೈಕೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಂಗಳೂರಿಗೆ ದುಡಿಯಲು ತೆರಳಿದ್ದ ಮೃತ ಬಾಲಕನ ಪಾಲಕರು ಮಗನ ಸಾವಿನ ಸುದ್ದಿ ಕೇಳಿ ಪಟ್ಟಣಕ್ಕೆ ಧಾವಿಸಿದ್ದಾರೆ. ಯಾರ ತಪ್ಪಿಗಾಗಿ ದೇವರು ಇಂತಹ ಶಿಕ್ಷೆ ಕೊಟ್ಟಿದ್ದಾನೆ ಎಂದು ರೋದಿಸುತ್ತಿರುವುದು ಕಂಡು ಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.