ಹಾನಗಲ್: ಅಂಗನವಾಡಿ ಯೋಜನೆ ಆರಂಭಗೊಂಡು 50 ವರ್ಷ ಸಂದಿವೆ. ಆದರೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಗುರುತಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರಿವೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಂದಾ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಗುರುಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಮಟ್ಟದ ಅಂಗನವಾಡಿ ಕಾಯಕರ್ತೆಯರು ಮತ್ತು ಸಹಾಯಕಿಯರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಗುಜರಾತ ಹೈಕೋರ್ಟ್ ತೀರ್ಪು ಎತ್ತಿ ಹಿಡಿದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು 3 ಮತ್ತು 4 ನೇ ದರ್ಜೆ ನೌಕರರನ್ನಾಗಿ ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಬರುವ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ ಮತ್ತು ಯುಕೆಜಿ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿ ಜಾರಿಗೊಳಿಸಬೇಕು, ಇದಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಬೇಕು ಹಾಗೂ ಅಂಗವಾಡಿ ಕಾರ್ಯಕರ್ತೆಯರೇ ಇಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಆಗ್ರಹಿಸಿದರು.
ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರ ಸ್ಥಿತಿ ಚಿಂತಾಜಕನವಾಗಿದೆ. ಅವರಿಗೆ ಕನಿಷ್ಠ 10 ಸಾವಿರ ರೂ ಮಾಸಿಕ ಸಂಭಾವನೆ ನೀಡಬೇಕು ಎಂದು ಹೇಳಿದರು.
ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದಂತೆ ವೇತನ ಹೆಚ್ಚಳವಾಗಿಲ್ಲ. ಎಲ್ಲ ಬೇಡಿಕೆ ಈಡೇರಿಕೆಗೆ ಮಾರ್ಚ್ 10 ರಂದು ಬೆಂಗಳೂರ ವಿಧಾನಸೌಧ ಚಲೋ ಚಳುವಳಿ ಆಯೋಜಿಸುತ್ತೇವೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ ಮಾತನಾಡಿ, ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ನಮ್ಮ ಬೇಡಿಕೆಗಳ ಹಕ್ಕೋತ್ತಾಯ ಮಾಡಬೇಕು ಎಂದರು.
ಕಾರ್ಯದರ್ಶಿ ಸಿದ್ಧಮ್ಮ ಚೌಟಿ, ಕೋಶಾಧ್ಯಕ್ಷೆ ಸುನಿತಾ ದೊಡ್ಡಮನಿ, ಬ್ಯಾಡಗಿ ತಾಲ್ಲೂಕು ಘಟಕದ ಅಧ್ಯಕ್ಷೆ ಗೌರಮ್ಮ ನಾಯ್ಕರ, ಕಾರ್ಯದರ್ಶಿ ಹೇಮಾ ಎಲಿ, ಕೋಶಾಧ್ಯಕ್ಷೆ ಗೋಜಾ ನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.