ADVERTISEMENT

ಭಯೋತ್ಪಾದನೆ ಕಿತ್ತೊಗೆಯಲು ಕೇಂದ್ರ ಯತ್ನ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ

ಬಿಜೆಪಿ ಜನಾಶೀರ್ವಾದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 15:08 IST
Last Updated 19 ಆಗಸ್ಟ್ 2021, 15:08 IST
ಹಾವೇರಿ ನಗರದ ಹೊರವಲಯದಲ್ಲಿರುವ ತೋಟದ ಯಲ್ಲಾಪುರ ಸಮೀಪದ ವೀರಸೌಧದಲ್ಲಿ ಗುರುವಾರ ಹುತಾತ್ಮ ಮೈಲಾರ ಮಹದೇವಪ್ಪ ಅವರ ಸಮಾಧಿಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪುಷ್ಪನಮನ ಸಲ್ಲಿಸಿದರು. ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೇಕಾರ ಇದ್ದಾರೆ  –ಪ್ರಜಾವಾಣಿ ಚಿತ್ರ
ಹಾವೇರಿ ನಗರದ ಹೊರವಲಯದಲ್ಲಿರುವ ತೋಟದ ಯಲ್ಲಾಪುರ ಸಮೀಪದ ವೀರಸೌಧದಲ್ಲಿ ಗುರುವಾರ ಹುತಾತ್ಮ ಮೈಲಾರ ಮಹದೇವಪ್ಪ ಅವರ ಸಮಾಧಿಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪುಷ್ಪನಮನ ಸಲ್ಲಿಸಿದರು. ಸಂಸದ ಶಿವಕುಮಾರ ಉದಾಸಿ, ಶಾಸಕ ನೆಹರು ಓಲೇಕಾರ ಇದ್ದಾರೆ  –ಪ್ರಜಾವಾಣಿ ಚಿತ್ರ   

ಹಾವೇರಿ: ‘ದೇಶದಲ್ಲಿ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತೆಸೆಯಲುಕೇಂದ್ರ ಸರ್ಕಾರ ಶ್ರಮಿಸುತ್ತಿದೆ’ ಎಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದಲ್ಲಿ ಗುರುವಾರ ಬಿಜೆಪಿ ಆಯೋಜಿಸಿದ್ದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಚಿವರು ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ಸ್ವಹಿತವನ್ನು ಬದಿಗೊತ್ತಿ, ದೇಶದ ಹಿತ ಮತ್ತು ಪ್ರಗತಿಗಾಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದರು.

ನೂತನ ಮಂತ್ರಿಗಳನ್ನು ಪರಿಚಯಿಸಲು ಹಾಗೂ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಜನಾಶೀರ್ವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೋವಿಡ್ ಸಮಯದಲ್ಲಿ ಕಾರ್ಯಕ್ರಮ ನಡೆಸುವುದು ಅನಿವಾರ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರು ವ್ಯಕ್ತಿಗತ ಅಂತರ, ಮಾಸ್ಕ್ ಧಾರಣೆ, ಸ್ಯಾನಿಟೈಸರ್ ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

ADVERTISEMENT

ಕಾರ್ಯಕ್ರಮಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ‘ಚುನಾವಣೆ ಸಂದರ್ಭದಲ್ಲಿ ಸೂಕ್ಷ್ಮ ವಿಚಾರಗಳನ್ನು ಜನರ ಬಳಿ ತೆಗೆದುಕೊಂಡು ಹೋಗಿ, ಮತ ಪಡೆಯುವ ಬದಲು ಸಮಾಜದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಿ ಮತ ಕೇಳುವುದು ಒಳಿತು’ ಎಂದರು.

ಕಾಂಗ್ರೆಸ್‌ ವರ್ತನೆ ಖಂಡನೀಯ:ಸಂಸತ್ತಿನಲ್ಲಿ ನೂತನ ಸಚಿವರ ಪರಿಚಯ ಮಾಡಿಕೊಳ್ಳಲು ಕಾಂಗ್ರೆಸ್‌ ಅವಕಾಶ ಮಾಡಿಕೊಡದ ಕಾರಣ ಜನಾಶೀರ್ವಾದದ ಮೂಲಕ ಜನರ ಬಳಿಹೋಗಿ ಪರಿಚಯ ಮಾಡಿಕೊಳ್ಳಲಾಗುತ್ತಿದೆ. ಸಭಾ ನಾಯಕ ಮತ್ತು ಸಭಾಧ್ಯಕ್ಷ ಇಬ್ಬರಿಗೂ ವಿರೋಧ ಪಕ್ಷವಾದ ಕಾಂಗ್ರೆಸ್‌ ಗೌರವ ನೀಡದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿದೆ ಎಂದು ಕಿಡಿಕಾರಿದರು.

ಎಲೆಕ್ಟ್ರಿಕಲ್‌ ವಾಹನಕ್ಕೆ ಆದ್ಯತೆ:ಪೆಟ್ರೋಲ್ ದರ ಏರಿಕೆ ಕುರಿತ ಪ್ರಶ್ನೆಗೆ, ‘ಕೇಂದ್ರ ಸರ್ಕಾರಕ್ಕೆ ದೊಡ್ಡ ವರಮಾನ ಸಿಗುತ್ತಿರುವುದುಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯಿಂದ. ಯುಪಿಎ ಸರ್ಕಾರದ ಪೆಟ್ರೋಲಿಯಂ ಬಾಂಡ್‌ ಯೋಜನೆಯಿಂದ 2026ರವರೆಗೆ ದರ ಇಳಿಸುವುದು ಕಷ್ಟಸಾಧ್ಯ. ಮುಂದಿನ ದಿನಗಳಲ್ಲಿ ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಿ, ಶೇ 80ರಷ್ಟು ಎಲೆಕ್ಟ್ರಿಕಲ್‌ ವಾಹನ ಬಳಕೆಗೆ ಆದ್ಯತೆ ನೀಡಲಾಗುತ್ತದೆ. ವಿದೇಶಗಳಿಗೆ ತೆರಿಗೆ ಕಟ್ಟುವುದನ್ನು ನಿಯಂತ್ರಿಸುವುದು ಕೇಂದ್ರದ ಗುರಿಯಾಗಿದೆ ಎಂದರು.

ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧರಾಜ ಕಲಕೋಟಿ, ಮಾಜಿ ಶಾಸಕ ಶಿವರಾಜ ಸಜ್ಜನರ, ಪರಮೇಶ್ವರಪ್ಪ ಮೇಗಳಮನಿ ಇದ್ದರು.

ಸ್ವಾತಂತ್ರ್ಯ ಯೋಧರಿಗೆ ನಮನ

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ಗುರುವಾರ ಹಾವೇರಿ ನಗರಕ್ಕೆ ಬಂದ ಸಂದರ್ಭ ಬಿಜೆಪಿಯಿಂದ ಅಭೂತಪೂರ್ವ ಸ್ವಾಗತ ನೀಡಲಾಯಿತು. ತೋಟದ ಯಲ್ಲಾಪುರದ ಸಮೀಪದ ವೀರಸೌಧಕ್ಕೆ ಭೇಟಿ ನೀಡಿ,ಸ್ವಾತಂತ್ರ್ಯ ಯೋಧರಾದ ಮೈಲಾರ ಮಹದೇವಪ್ಪ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಹೊಸಮನಿ ಸಿದ್ದಪ್ಪ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು.

ಜನಪ್ರತಿನಿಧಿಗಳ ಜೇಬಿಗೆ ಕತ್ತರಿ

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರು ನಗರಕ್ಕೆ ಭೇಟಿ ನೀಡಿ, ಜನಾಶೀರ್ವಾದ ಯಾತ್ರೆ ನಡೆಸಿದ ಸಂದರ್ಭ ಜೇಬುಗಳ್ಳರು ತಮ್ಮ ಕರಾಮತ್ತು ಪ್ರದರ್ಶಿಸಿ, ₹34 ಸಾವಿರ ನಗದು ಮತ್ತು 10 ಮೊಬೈಲ್‌ಗಳನ್ನು ಕಳವು ಮಾಡಿದ್ದಾರೆ.

ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಸಂಸದ ಶಿವಕುಮಾರ ಉದಾಸಿ,ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಸೇರಿದಂತೆ ಹಲವರ ಜೇಬಿಗೆಕತ್ತರಿ ಹಾಕಿದ್ದಾರೆ. ಪೊಲೀಸ್‌ ಬಿಗಿ ಬಂದೋಬಸ್ತ್‌ ನಡುವೆಯೂ ಕಳ್ಳರು ಕರಾಮತ್ತು ತೋರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.