ADVERTISEMENT

ಗೌಳಿದಡ್ಡಿ ನಿವಾಸಿಗಳ ಸಮಸ್ಯೆ ಆಲಿಸಿದ ಸಿಇಒ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:18 IST
Last Updated 14 ಜುಲೈ 2020, 17:18 IST

ಹಾವೇರಿ:ಶಿಗ್ಗಾವಿ ತಾಲ್ಲೂಕಿನ ಗೌಳಿದಡ್ಡಿ ಗ್ರಾಮಕ್ಕೆ ಸಿಇಒ ರಮೇಶ ದೇಸಾಯಿ ಮತ್ತು ಅಧಿಕಾರಿಗಳ ತಂಡ ಮಂಗಳವಾರ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿದರು.

ದುಂಡಶಿ ಅರಣ್ಯ ವಲಯದಲ್ಲಿ ಬರುವ ಗೌಳಿದಡ್ಡಿ ಗ್ರಾಮದಲ್ಲಿ ಕುಡಿಯುವ ನೀರು, ಬೀದಿ ದೀಪ, ರಸ್ತೆ, ಒಳಚರಂಡಿ ಸೇರಿದಂತೆ ಮೂಲಸೌಕರ್ಯಗಳಿಲ್ಲದೆ ಅಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿರುವ ಬಗ್ಗೆ ಜುಲೈ 9ರಂದು ‘ಪ್ರಜಾವಾಣಿ’ಯಲ್ಲಿ ‘ಗೌಳಿದಡ್ಡಿ ನಿವಾಸಿಗಳ ಅರಣ್ಯ ರೋದನ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ವರದಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ, ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ, ಮೂಲಸೌಕರ್ಯ ಕಲ್ಪಿಸುವ ಭರವಸೆ ನೀಡಿತು. ಕುಡಿಯುವ ನೀರಿನ ಪೈಪ್‌ ಒಡೆದಿರುವುದನ್ನು ದುರಸ್ತಿ ಪಡಿಸಲು ಮತ್ತು ಹಾಳಾಗಿರುವ ಬೀದಿದೀಪಗಳನ್ನು ಸರಿಪಡಿಸುವಂತೆ ಸಿಇಒ ಅವರು ಹೊಸೂರು ಗ್ರಾಮ ಪಂಚಾಯ್ತಿ ಪಿಡಿಒ ಚಿದಾನಂದ ಚಿಗಳ್ಳಿ ಅವರಿಗೆ ಸೂಚನೆ ನೀಡಿದರು.

ADVERTISEMENT

ಜೋಂಡಲಗಟ್ಟಿ ಕೆರೆ ಹೂಳು ತೆಗೆಸುವ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳಲಿದ್ದು, ಅಲ್ಲಿ ಕೆಲಸ ಮಾಡಲು ಸಿದ್ಧವಿರುವವರಿಗೆ ನರೇಗಾ ಯೋಜನೆಯಡಿ ಉದ್ಯೋಗ ಚೀಟಿ ನೀಡುವ ಆಶ್ವಾಸನೆ ನೀಡಿದರು.ಎಮ್ಮೆಗಳಿಗೆ ನೀರು ಕುಡಿಯಲು ಪ್ರತ್ಯೇಕ ತೊಟ್ಟಿ ಹಾಗೂ ಮನೆಯ ಸುತ್ತ ಕೊಳಚೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮಕ್ಕಳ ಶಿಕ್ಷಣ, ಕಾಡುಪ್ರಾಣಿಗಳ ಹಾವಳಿ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳ ತಂಡ ನ್ಯಾಸರ್ಗಿ ಡ್ಯಾಂ ವೀಕ್ಷಣೆ ಮಾಡಿತು.

‘ಅರಟಾಳದಿಂದ ಗೌಳಿದಡ್ಡಿ ಮಾರ್ಗವಾಗಿ ಜೋಂಡಲಗಟ್ಟಿವರೆಗೆ ರಸ್ತೆ ತೀರಾ ಹದಗಟ್ಟಿದ್ದು, ಇಲ್ಲಿ ಡಾಂಬರು ರಸ್ತೆ ನಿರ್ಮಾಣ ಮಾಡಲು ಸಚಿವ ಬಸವರಾಜ ಬೊಮ್ಮಾಯಿ ಅವರು₹ 1.5 ಕೋಟಿ ಅನುದಾನ ಮೀಸಲಿಟ್ಟಿದ್ದು, ಈ ಸಂಬಂಧ ಟೆಂಡರ್‌ ಪ್ರಕ್ರಿಯೆ ಜಾರಿಯಲ್ಲಿದೆ. ಕೂಡಲೇ ಮೂಲಸೌಕರ್ಯ ಒದಗಿಸಲು ಗ್ರಾ.ಪಂ. ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ಸಿಇಒ ರಮೇಶ ದೇಸಾಯಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯ್ತಿ ಇಒ ಪ್ರಶಾಂತ ತುರಕಾಣಿ, ಅಕ್ಷರ ದಾಸೋಹ ಅಧಿಕಾರಿ ಅಶೋಕ ಕುಂಬಾರ, ಜಿಲ್ಲಾ ಪಂಚಾಯ್ತಿ ಯೋಜನಾಧಿಕಾರಿ ಎಸ್‌.ಬಿ.ಕುಂದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.