ADVERTISEMENT

ಸವಣೂರ ಖಾರ ಅಂದ್ರ ಚಂಪಾಗೆ ಪ್ರೀತಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 15:45 IST
Last Updated 10 ಜನವರಿ 2022, 15:45 IST
ಚಂಪಾ ಅವರು ವಾಸವಿದ್ದ ಸವಣೂರು ತಾಲ್ಲೂಕಿನ ಹತ್ತಿಮತ್ತೂರ ಗ್ರಾಮದ ಮನೆ
ಚಂಪಾ ಅವರು ವಾಸವಿದ್ದ ಸವಣೂರು ತಾಲ್ಲೂಕಿನ ಹತ್ತಿಮತ್ತೂರ ಗ್ರಾಮದ ಮನೆ   

ಹಾವೇರಿ: ಸವಣೂರಿನ ಪುತ್ರರಾದ ಚಂದ್ರಶೇಖರ ಪಾಟೀಲ ಅವರಿಗೆ ‘ಸವಣೂರ ಖಾರ’ ಅಂದ್ರೆ ಬಲು ಪ್ರೀತಿ. ಹೀಗಾಗಿ ಅವರು ಸ್ವಗ್ರಾಮ ಹತ್ತಿಮತ್ತೂರು ಕಡೆ ಬಂದಾಗಲೆಲ್ಲ ತಪ್ಪದೇ ಖಾರವನ್ನು ಮೆಲ್ಲುತ್ತಿದ್ದರು.

ಜೋಳದ ರೊಟ್ಟಿ, ರಾಗಿ ಮುದ್ದೆ ಅವರಿಗೆ ಅಚ್ಚುಮೆಚ್ಚಿನ ಊಟವಾಗಿತ್ತು. ಬಾಲ್ಯದಿಂದಲೂ ಬಾವಿಯಲ್ಲಿ ಈಜುವುದು ಅವರ ಹವ್ಯಾಸವಾಗಿತ್ತು. ಶಾಲೆಗೆ ಹೋಗಿ ಬಂದ ನಂತರ ದನ ಕರುಗಳಿಗೆ ನೀರು–ಮೇವು ಹಾಕುವುದು, ಹೊಲದ ಕೆಲಸವನ್ನೂ ಮಾಡುತ್ತಾ ಕೃಷಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು.

‘ಹತ್ತಿಮತ್ತೂರಿನಲ್ಲಿ ತಾವು ಕಲಿತ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಕಾರ್ಯಕ್ರಮಗಳಿಗೆ ಬಂದು ಹೋಗುತ್ತಿದ್ದರು. ಶಾಲೆಯ 125ನೇ ಸಂಭ್ರಮಾಚರಣೆ ಕಾರ್ಯಕ್ರಮಕ್ಕೆ ಬಂದು ತಮ್ಮ ಬಾಲ್ಯದ ನೆನಪುಗಳನ್ನು ಬಿಚ್ಚಿಟ್ಟಿದ್ದರು. ಕನ್ನಡ ನಾಡು–ನುಡಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ, ಸ್ನೇಹಿತರಿಗೆ ಸಲಹೆ ನೀಡುತ್ತಿದ್ದರು’ ಎಂದು ಶಾಲೆಯ ಶಿಕ್ಷಕ ಸಿ.ಸಿ.ಕುಳೇನೂರ ಮಾಹಿತಿ ನೀಡಿದರು.

ADVERTISEMENT

ಚಂಪಾ ಅವರು ಸವಣೂರ ತಾಲ್ಲೂಕು ಹತ್ತಿಮತ್ತೂರು ಮತ್ತು ಡಂಬರಮತ್ತೂರು ಗ್ರಾಮಗಳ ಒಡನಾಡಿಗಳಾಗಿದ್ದರು. ಕನ್ನಡದ ಹಿರಿಮೆಯನ್ನು ಹೆಚ್ಚಿಸಲು ಕಂಕಣಬದ್ಧರಾಗಿ ಗ್ರಾಮ ಮಟ್ಟದಲ್ಲಿಯು ಸಹ ಸಂಘಟನೆಗಳನ್ನು ಕಟ್ಟಿ ಸಾಹಿತ್ಯವನ್ನು ಬೆಳೆಸಿದ್ದಾರೆ. ಸವಣೂರಿನ ಸಾಹಿತ್ಯಾಸಕ್ತರೊಂದಿಗೆ ಚಂಪಾ ಒಡನಾಟ ಹೊಂದಿದ್ದರು ಎಂದುಸಹೋದರ ಸಂಬಂಧಿ ಮಣ್ಣಯ್ಯ ಕೊಟ್ರಯ್ಯ ಕುಲಕರ್ಣಿ ಮಾಹಿತಿ ನೀಡಿದರು.

‘ಚಂಪಾ ಅವರು ಹೊಸರಿತ್ತಿಯಲ್ಲಿ ನಡೆದ ಹಾವೇರಿ ಜಿಲ್ಲಾ ಮಟ್ಟದ 3ನೇಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ತಮ್ಮ ಗುರುಗಳಾದ ವಿದ್ಯಾನಗರ ಪಶ್ಚಿಮ ಬಡಾವಣೆಯಲ್ಲಿರುವ ಎಂ.ಬಿ.ಹಿರೇಮಠ ಅವರ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದರು.ಹಾವೇರಿ ನಗರಕ್ಕೆ ಬಂದಾಗಲೆಲ್ಲ ಬಸವೇಶ್ವರ ನಗರದ ನರಗುಂದ ಖಾನಾವಳಿಗೆ ಭೇಟಿ ನೀಡಿ, ರೊಟ್ಟಿ, ಬದನೆಕಾಯಿ ಪಲ್ಯ ಸವಿಯುತ್ತಿದ್ದರು’ ಎಂದು ಅವರ ಒಡನಾಡಿ ಮಾಲತೇಶ ಅಂಗೂರ ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.