ADVERTISEMENT

ಹಾನಗಲ್: ಚಿದಂಬರ ನಗರ; ತ್ಯಾಜ್ಯದ ಆಗರ

ಹಂದಿ, ಬಿಡಾಡಿ ದನಗಳ ಹಾವಳಿ ನಿಯಂತ್ರಿಸಲು ಸ್ಥಳೀಯರ ಆಗ್ರಹ

ಮಾರುತಿ ಪೇಟಕರ
Published 22 ಜೂನ್ 2021, 19:30 IST
Last Updated 22 ಜೂನ್ 2021, 19:30 IST
ಹಾನಗಲ್‌ನ ಚಿದಂಬರ ನಗರ ಭಾಗದ ಖಾಸಗಿ ಬಸ್‌ ನಿಲ್ದಾಣ ಹಿಂಭಾಗದ ಖಾಲಿ ಜಾಗ ತಾತ್ಕಾಲಿಕ ತ್ಯಾಜ್ಯ ವಿಲೇವಾರಿ ಸ್ಥಳವಾಗಿ ಪರಿವರ್ತನೆಯಾಗಿದೆ
ಹಾನಗಲ್‌ನ ಚಿದಂಬರ ನಗರ ಭಾಗದ ಖಾಸಗಿ ಬಸ್‌ ನಿಲ್ದಾಣ ಹಿಂಭಾಗದ ಖಾಲಿ ಜಾಗ ತಾತ್ಕಾಲಿಕ ತ್ಯಾಜ್ಯ ವಿಲೇವಾರಿ ಸ್ಥಳವಾಗಿ ಪರಿವರ್ತನೆಯಾಗಿದೆ   

ಹಾನಗಲ್: ಪಟ್ಟಣದ ಪ್ರಮುಖ ಮಾರುಕಟ್ಟೆಗೆ ಹೊಂದಿಕೊಂಡ ಚಿದಂಬರ ನಗರದ ಮೂರು ಓಣಿಗಳು ಅನೈರ್ಮಲ್ಯ ವಾತಾವರಣದಿಂದ ಕೂಡಿದ್ದು, ನಿವಾಸಿಗಳ ನೆಮ್ಮದಿ ಕಸಿದಿವೆ.

ಇಲ್ಲಿನ ಕೇಂದ್ರ ಬಸ್‌ ನಿಲ್ದಾಣ ಮತ್ತು ಖಾಸಗಿ ಬಸ್‌ ನಿಲ್ದಾಣದ ಸುತ್ತಲೂ ವಾಣಿಜ್ಯ ಪ್ರದೇಶ ಬೆಳೆದು ನಿಂತಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಬಸ್‌ ನಿಲ್ದಾಣದ ಎದುರು ಭಾಗ ಮತ್ತು ಶಿವಮೊಗ್ಗ, ಕಾರವಾರ, ಮಂಗಳೂರ ಜಿಲ್ಲೆಯ ಸಂಪರ್ಕ ಒದಗಿಸುವ ಬಸ್‌ ಸಂಚಾರದ ಖಾಸಗಿ ಬಸ್‌ಗಳ ನಿಲ್ದಾಣಕ್ಕೆ ಹೊಂದಿಕೊಂಡು ಈ ಚಿದಂಬರ ನಗರ ಇದೆ.

ಚಿದಂಬರ ನಗರ 1ನೇ ಕ್ರಾಸ್‌ನಿಂದ 3ನೇ ಕ್ರಾಸ್‌ ತನಕ ಈಗ ಮಾರುಕಟ್ಟೆ ವಿಸ್ತರಿಸಿದೆ. ನಿತ್ಯ ಇತ್ತ ಗ್ರಾಮೀಣ ಭಾಗದ ಜನರು ಒಳಗೊಂಡು ಹೊರ ಊರಿನ ಸಾಕಷ್ಟು ಜನರು ಬರುತ್ತಾರೆ.

ADVERTISEMENT

ಈ ಪ್ರದೇಶವನ್ನು ಸ್ವಚ್ಚವಾಗಿಟ್ಟುಕೊಳ್ಳುವ ಉದ್ದೇಶ ಸ್ಥಳೀಯ ಸಂಸ್ಥೆಗೆ ಇದ್ದಂತಿಲ್ಲ. ಇದೇ ಭಾಗದಲ್ಲಿ ಪುರಸಭೆಯ ವಾಣಿಜ್ಯ ಮಳಿಗೆಗಳು ಇವೆ. ಇವುಗಳಿಂದ ಸಾಕಷ್ಟು ಆಧಾಯವನ್ನೂ ಪಡೆಯುವ ಪುರಸಭೆಗೆ ಇಲ್ಲಿನ ದುರವಸ್ಥೆ ಸರಿಪಡಿಸುವ ಸಂಯಮವಿಲ್ಲ ಎಂದು ಸ್ಥಳೀಯರು ದೂರುತ್ತಾರೆ.

ತರಕಾರಿ ಮಳಿಗೆಗಳು,ಹೂವು, ಹಣ್ಣು ಮತ್ತು ಮದ್ಯದಂಗಡಿಗಳು, ಇನ್ನಿತರ ರಸ್ತೆ ಬದಿ ವ್ಯಾಪಾರದಿಂದ ಈ ಭಾಗದಲ್ಲಿ ರಾತ್ರಿ ಹೊತ್ತು ತ್ಯಾಜ್ಯದ ರಾಶಿ ಸಂಗ್ರಹವಾಗುತ್ತದೆ. ಬೆಳಿಗ್ಗೆ ಪುರಸಭೆ ವಾಹನ ತ್ಯಾಜ್ಯ ವಿಲೇವಾರಿ ಮಾಡುತ್ತದೆ. ಆದರೆ ಸಂಗ್ರಹಗೊಂಡಿದ್ದ ತ್ಯಾಜ್ಯವನ್ನು ಬೆಳಗಿನ ಜಾವದ ತನಕ ಹಂದಿಗಳು ಚೆಲ್ಲಾಪಿಲ್ಲಿ ಮಾಡುತ್ತವೆ. ಬಿಡಾಡಿ ದನಗಳು ತ್ಯಾಜ್ಯವನ್ನು ರಸ್ತೆಗೆ ಹರಡುತ್ತವೆ. ಇದರಿಂದ ಈ ಭಾಗದ ನಿವಾಸಿಗಳಿಗೆ ತೊಂದರೆ ತಪ್ಪಿದ್ದಲ್ಲ.

ಹಣ್ಣು, ತರಕಾರಿ, ಹೂವು ವ್ಯಾಪಾರಿಗಳು ತ್ಯಾಜ್ಯವನ್ನು ಇದೇ ಸ್ಥಳದಲ್ಲಿ ಒಗೆಯುತ್ತಾರೆ. ಪ್ರಯಾಣಿಕರ ತುರ್ತು ಮೂತ್ರ ವಿಸರ್ಜನೆ ಸ್ಥಳವೂ ಇದೇ ಆಗಿದೆ. ಹೀಗಾಗಿ ಇಡೀ ಓಣಿ ಗಲೀಜು ಪ್ರದೇಶವಾಗಿದೆ.

‘ಹಂದಿಗಳು, ಬಿಡಾಡಿ ದನಗಳ ಆಶ್ರಯ ಸ್ಥಳವಾಗಿ ಈ ತಾತ್ಕಾಲಿಕ ತ್ಯಾಜ್ಯ ವಿಲೇವಾರಿ ಸ್ಥಳ ಬಳಕೆಯಾಗುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗುತ್ತಿವೆ. ಕೆಟ್ಟ ವಾಸನೆ ಓಣಿ ತುಂಬಿಕೊಳ್ಳುತ್ತಿದೆ’ ಎಂದು ಇಲ್ಲಿನ ನಿವಾಸಿ ರಾಜು ಕುನಾಸ್ನಳ್ಳಿಮಠ ಹೇಳುತ್ತಾರೆ.

‘ಸಹಕಾರ ಬೇಕು‘
‘ಈ ಭಾಗದ ನಿವಾಸಿಗಳಿಗೆ ಮತ್ತು ವ್ಯಾಪಾರಸ್ಥರಿಗೆ ಖಾಲಿ ನಿವೇಶನದಲ್ಲಿ ತ್ಯಾಜ್ಯ ಸುರಿಯದಂತೆ ಸೂಚಿಸಲಾಗಿದೆ. ನಿತ್ಯ ಬೆಳಿಗ್ಗೆ ಕಸ ಸಂಗ್ರಹಣೆಗೆ ವಾಹನ ಬರುತ್ತದೆ. ನಿವಾಸಿಗಳು ವಾಹನಕ್ಕೆ ಕಸ ಕೊಡಬೇಕು. ವ್ಯಾಪಾರಸ್ಥರು ತ್ಯಾಜ್ಯವನ್ನು ಸಂಗ್ರಹಿಸಿ ಬೆಳಿಗ್ಗೆ ಪುರಸಭೆ ವಾಹನಕ್ಕೆ ನೀಡಬೇಕು ಎಂಬುದಾಗಿ ಹೇಳಿದ್ದೇವೆ. ಸ್ವಚ್ಛತೆ ಇರಬೇಕಾದರೆ ಇದಕ್ಕೆ ಸಾರ್ವಜನಿಕರ ಸಹಕಾರವೂ ಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಎಚ್‌.ಎನ್‌.ಬಜಕ್ಕನವರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.